ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಿಶ್ಚಿತ: ಮಾಜಿ ಪ್ರಧಾನಿ ದೇವೇಗೌಡ

Update: 2019-06-21 14:11 GMT

ಬೆಂಗಳೂರು, ಜೂ.21: ರಾಜ್ಯದಲ್ಲಿ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವುದು ನಿಶ್ಚಿತ. ಈ ಬಗ್ಗೆ ಯಾರಿಗೂ ಸಂಶಯವೇ ಇಲ್ಲ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಶುಕ್ರವಾರ ವಿಶ್ವ ಯೋಗ ದಿನಾಚರಣೆ ಅಂಗವಾಗಿ ತಮ್ಮ ಪದ್ಮನಾಭ ನಗರದಲ್ಲಿನ ನಿವಾಸದಲ್ಲಿ ಯೋಗ ಮಾಡುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಮುಖ್ಯಮಂತ್ರಿ ಆಗಬಾರದು ಎಂದು ಕಾಂಗ್ರೆಸ್‌ನವರು ನಮ್ಮ ಬಳಿ ಓಡಿ ಬಂದರು ಎಂದರು.

ಎಲ್ಲ ವಿಚಾರಗಳನ್ನು ಚರ್ಚೆ ಮಾಡದೇ ಸರಕಾರ ರಚನೆಗೆ ಮುಂದಾದರು. ಕುಮಾರಸ್ವಾಮಿಯನ್ನೆ ಮುಖ್ಯಮಂತ್ರಿ ಮಾಡಿ ಎಂದರು. ಈಗ ‘ಒನ್ ಥರ್ಡ್ ನಿಯಮ’ವೂ ಇಲ್ಲ, ಏನು ಇಲ್ಲ. ನಮ್ಮ ಒಂದು ಮಂತ್ರಿ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದೇವೆ. ಎಲ್ಲವನ್ನು ಸಹಿಸಿಕೊಂಡು ಹೋಗುತ್ತಿದ್ದೇನೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದ ಹಾಲಿ ಸಂಸದರು ಇರುವ ಕ್ಷೇತ್ರ ನಮಗೆ ಬೇಡ ಎಂದು ಹೇಳಿದ್ದೆ. ತುಮಕೂರು ಕ್ಷೇತ್ರವನ್ನು ನಾವು ಕೇಳಲೇ ಇಲ್ಲ. ಕಾಂಗ್ರೆಸ್ ಅಭ್ಯರ್ಥಿ ಸೋತಿರುವ ಕ್ಷೇತ್ರವನ್ನು ಕೊಡಿ ಎಂದು ಹೇಳಿದ್ದೆವು. ಆದರೆ, ಮೈಸೂರಿಗೋಸ್ಕರ ತುಮಕೂರು ಕ್ಷೇತ್ರವನ್ನು ಕೊಟ್ಟರು ಎಂದು ದೇವೇಗೌಡ ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳು ಸೋಲಲು ನಾವು ಕಾರಣವೇ? ಹಾಗೇನಾದರೂ ಇದ್ದರೆ ಬಹಿರಂಗವಾಗಿ ಹೇಳಬಹುದು ಎಂದ ದೇವೇಗೌಡ, ಮಲ್ಲಿಕಾರ್ಜುನ ಖರ್ಗೆಯವರನ್ನು ಮೈತ್ರಿ ಸರಕಾರದ ಮುಖ್ಯಮಂತ್ರಿ ಮಾಡಿ ಎಂದಿದ್ದೆ. ಆದರೆ, ಕಾಂಗ್ರೆಸ್ ನಾಯಕರು ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿ ಎಂದರು. ಕಾಂಗ್ರೆಸ್‌ಗೆ ಸರಕಾರ ನಡೆಸುವ ಮನಸ್ಸು ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಇಲ್ಲಿ ಎಲ್ಲದಕ್ಕೂ ಆ್ಯಕ್ಷನ್ ಅಂಡ್ ರಿಯಾಕ್ಷನ್ ಅಗತ್ಯವಿಲ್ಲ ಎಂದು ದೇವೇಗೌಡ ಮಾರ್ಮಿಕವಾಗಿ ನುಡಿದರು.

ರಾಜಕಾರಣದಲ್ಲಿ ಅನೇಕ ಏಳು ಬೀಳು ಇರುತ್ತೆ. ನನ್ನ ಜೊತೆಯಲ್ಲೇ ಇದ್ದು, ನನ್ನ ಜೊತೆಯಲ್ಲೆ ಬೆಳೆದವರು ನನ್ನನ್ನು ಬಿಟ್ಟು ಹೋದರು. ನಾನು ಧೃತಿಗೆಡದೆ ಮುಂದೆ ಬಂದಿದ್ದೇನೆ. ಮೈತ್ರಿ ಸರಕಾರ ಮಾಡಲೇಬೇಕೇಂಬ ಮನಸ್ಸು ನನಗೆ ಇರಲಿಲ್ಲ. ದಿಲ್ಲಿಯ ನಾಯಕರು ಬಂದು ನಿಮ್ಮ ಮಗನನ್ನ ಮುಖ್ಯಮಂತ್ರಿ ಮಾಡಬೇಕೆಂದರು ಎಂದು ದೇವೇಗೌಡ ಹೇಳಿದರು.

ಲೋಕಸಭಾ ಚುನಾವಣೆ ನಂತರ ಹೈಕಮಾಂಡ್ ಸ್ವಲ್ಪಶಕ್ತಿ ಕಳೆದುಕೊಂಡಿದೆ. ಸರಕಾರ ಎಷ್ಟು ದಿನ ಇರುತ್ತೋ ಗೊತ್ತಿಲ್ಲ. ಕಾಂಗ್ರೆಸ್ ಮುಖಂಡರ ಕೈಯಲ್ಲಿ ಎಲ್ಲ ಇದೆ. ಜೆಡಿಎಸ್ ಜೊತೆ ಹೋದರೆ ಕಾಂಗ್ರೆಸ್ ಪಕ್ಷ ಹೋಗುತ್ತೆ ಅನ್ನೋ ಸಂಕಟ ಇದೆ. ಹೀಗಾಗಿ ನಮ್ಮ ಮಂತ್ರಿ ಸ್ಥಾನವನ್ನೂ ತೆಗೆದುಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಆರೋಗ್ಯಕ್ಕೆ ಯೋಗ: ಪ್ರಾಚೀನ ಕಾಲದಿಂದಲೂ ಆರೋಗ್ಯ ಕಾಪಾಡಲು ಯೋಗ ಮಾಡಲಾಗುತ್ತಿದೆ. ನಾವು ವಿದ್ಯಾರ್ಥಿಗಳಾಗಿದ್ದಾಗ ಅಂದಿನ ಉಪಾಧ್ಯಾಯರು ಸೂರ್ಯ ನಮಸ್ಕಾರ ಮಾಡಿಸುತ್ತಿದ್ದರು. ಸೂರ್ಯ ನಮಸ್ಕಾರ ಮಾಡೋದು ಬಹಳ ಒಳ್ಳೆಯದು. ಬಾಲ್ಯದಿಂದಲೂ ನಾನು ಯೋಗ ಅಭ್ಯಾಸ ಮಾಡುತ್ತಿದೆ ಎಂದು ದೇವೇಗೌಡ ಹೇಳಿದರು. ನರೇಂದ್ರ ಮೋದಿ ಪ್ರಧಾನಿಯಾದಾಗ ಯೋಗಕ್ಕೆ ಹೆಚ್ಚು ಮಹತ್ವ ನೀಡಿದರು. ರಾಂಚಿಯಲ್ಲಿಯೂ ಅವರು ಸಾರ್ವಜನಿಕ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗ ಮಾಡಿದ್ದಾರೆ. ಯುವ ಪೀಳಿಗೆಗಳಿಗೆ ಇದರ ಅವಶ್ಯಕತೆ ಇದೆ. ಏಕಾಗ್ರತೆ, ಆರೋಗ್ಯಕ್ಕೆ ಯೋಗ ಅಗತ್ಯ ಇದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News