ದೇವೇಗೌಡರು ಯೋಚನೆ ಮಾಡಿಯೇ ಮಾತನಾಡಿರುತ್ತಾರೆ: ಡಾ.ಜಿ.ಪರಮೇಶ್ವರ್

Update: 2019-06-21 12:20 GMT

ಬೆಂಗಳೂರು, ಜೂ. 21: ‘ರಾಜ್ಯದಲ್ಲಿ ಮೈತ್ರಿ ಸರಕಾರ ರಚನೆ ಉದ್ದೇಶದಿಂದ ರಾಹುಲ್ ಗಾಂಧಿ, ಜೆಡಿಎಸ್ ಮುಖಂಡರೊಂದಿಗೆ ಚರ್ಚಿಸಿ ಮನವೊಲಿಸಿದ್ದರು. ಆದರೆ, ಇದೀಗ ದೇವೇಗೌಡ ಮಧ್ಯಂತರ ಚುನಾವಣೆ ಕುರಿತು ಯಾವ ಅರ್ಥದಲ್ಲಿ ಹೇಳಿದ್ದಾರೆಯೋ ಗೊತ್ತಿಲ್ಲ’ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಕೆಲ ಸಣ್ಣ-ಪುಟ್ಟ ವ್ಯತ್ಯಾಸಗಳಿರುವುದು ಸಹಜ. ಅವುಗಳನ್ನು ಸರಿಪಡಿಸಿಕೊಂಡು ಹೊಂದಾಣಿಕೆಯಿಂದ ಮುನ್ನಡೆಯುವುದು ಮೈತ್ರಿ ಧರ್ಮ ಎಂದು ಹೇಳಿದರು.

ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಅನುಭವಸ್ಥರು, ಹಿರಿಯ ಮುತ್ಸದ್ಧಿಗಳು. ಅವರು ತಮ್ಮ ಪ್ರತಿ ಹೇಳಿಕೆಯೂ ಯೋಚನೆ ಮಾಡಿ ಮಾತನಾಡಿರುತ್ತಾರೆ. ಈ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ನ ನಾಯಕರು ಸೇರಿ ಚರ್ಚೆ ಮಾಡಲಿದ್ದೇವೆ ಎಂದು ಪರಮೇಶ್ವರ್ ತಿಳಿಸಿದರು.

ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ. ಚುನಾವಣೆಯಲ್ಲಿ ಗೆಲುವು-ಸೋಲು ಸಾಮಾನ್ಯ. ಕಾಂಗ್ರೆಸ್ ಪಕ್ಷ ಸಾಕಷ್ಟು ಏಳು-ಬೀಳುಗಳನ್ನು ಕಂಡಿದೆ. ಈ ಬಾರಿ ಬಿಜೆಪಿಯನ್ನು ಜನ ಆಯ್ಕೆ ಮಾಡಿದ್ದಾರೆ. ಅಂದಮಾತ್ರಕ್ಕೆ ಕಾಂಗ್ರೆಸ್ ದುರ್ಬಲವಾಗಿದೆ ಎನ್ನುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News