ಇರಾನ್ ಮೇಲೆ ದಾಳಿಗೆ ಅನುಮತಿ ನೀಡಿ, ಬಳಿಕ ಹಿಂಪಡೆದ ಟ್ರಂಪ್ ?

Update: 2019-06-21 17:07 GMT

  ವಾಶಿಂಗ್ಟನ್, ಜೂ. 21: ಅಮೆರಿಕ ಸೇನೆಯ 130 ಮಿಲಿಯ ಡಾಲರ್ (ಸುಮಾರು 900 ಕೋಟಿ ರೂಪಾಯಿ) ಮೌಲ್ಯದ ಮಾನವರಹಿತ ಬೇಹುಗಾರಿಕಾ ಡ್ರೋನ್‌ನ್ನು ಹೊಡೆದುರುಳಿಸಿರುವುದಕ್ಕೆ ಪ್ರತೀಕಾರವಾಗಿ ಇರಾನ್ ವಿರುದ್ಧ ಸೇನಾ ದಾಳಿ ನಡೆಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಆದೇಶಿಸಿದ್ದಾರೆ, ಆದರೆ ಬಳಿಕ ತನ್ನ ಆದೇಶವನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ಇರಾನ್‌ನ ರೇಡಾರ್ ಮತ್ತು ಕ್ಷಿಪಣಿಗಳು ಸೇರಿದಂತೆ ಹಲವಾರು ಗುರಿಗಳ ಮೇಲೆ ದಾಳಿ ನಡೆಸುವ ಪ್ರಸ್ತಾವಕ್ಕೆ ಟ್ರಂಪ್ ಮೊದಲು ಅಂಗೀಕಾರ ನೀಡಿದರು ಎಂಬುದಾಗಿ ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

ಇರಾನ್‌ನ ಸೇನೆ ಅಥವಾ ನಾಗರಿಕರ ಮೇಲೆ ಆಗಬಹುದಾದ ಸಂಭಾವ್ಯ ಹಾನಿಯನ್ನು ಕನಿಷ್ಠಗೊಳಿಸುವುದಕ್ಕಾಗಿ ಶುಕ್ರವಾರ ಮುಂಜಾನೆ ದಾಳಿ ನಡೆಸಲು ಯೋಜನೆ ರೂಪಿಸಲಾಗಿತ್ತು ಎಂದು ಮೂಲಗಳು ಹೇಳಿವೆ.

ವಿಮಾನಗಳು ಆಕಾಶದಲ್ಲಿ ಹಾರುತ್ತಿದ್ದವು ಹಾಗೂ ಯುದ್ಧನೌಕೆಗಳು ಸಿದ್ಧಗೊಂಡಿದ್ದವು, ಆದರೆ ಯಾವುದೇ ಕ್ಷಿಪಣಿಗಳು ಹಾರಲಿಲ್ಲ. ಆ ವೇಳೆಗೆ ದಾಳಿ ಆದೇಶವನ್ನು ಹಿಂದಕ್ಕೆ ಪಡೆಯುವ ಆದೇಶವನ್ನು ಹೊರಡಿಸಲಾಗಿತ್ತು ಎಂದು ‘ನ್ಯೂಯಾರ್ಕ್ ಟೈಮ್ಸ್’ ಹೇಳಿದೆ.

ಸೇನಾ ಬೇಹುಗಾರಿಕಾ ಡ್ರೋನನ್ನು ಹೊಡೆದುರುಳಿಸುವ ಮೂಲಕ ಇರಾನ್ ‘ತುಂಬಾ ದೊಡ್ಡ ತಪ್ಪು’ ಮಾಡಿದೆ ಎಂಬುದಾಗಿ ಟ್ರಂಪ್ ಗುರುವಾರ ಬಣ್ಣಿಸಿರುವುದನ್ನು ಸ್ಮರಿಸಬಹುದಾಗಿದೆ.

ಆದರೆ, ಅಮೆರಿಕ ಸೇನೆಯ ಡ್ರೋನ್ ಇರಾನ್ ವಾಯುಪ್ರದೇಶದಲ್ಲಿ ಬೇಹುಗಾರಿಕೆಯಲ್ಲಿ ತೊಡಗಿತ್ತು ಎಂಬುದಾಗಿ ಇರಾನ್ ಆರೋಪಿಸಿದೆ.

ಆದಾಗ್ಯೂ, ಇರಾನ್ ಮೇಲಿನ ದಾಳಿ ಈಗಲೂ ನಡೆಯಬಹುದಾಗಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ ಎಂದು ಪತ್ರಿಕೆ ಹೇಳಿದೆ. ಅದೂ ಅಲ್ಲದೆ, ದಾಳಿ ರದ್ದಾಗಿರುವುದು ಟ್ರಂಪ್ ತನ್ನ ನಿರ್ಧಾರವನ್ನು ಬದಲಿಸಿರುವುದರಿಂದಲಾ ಅಥವಾ ಅಸಮರ್ಪಕ ವ್ಯೆಹ ಮತ್ತು ಪೂರೈಕೆಯ ಕಾರಣಕ್ಕಾಗಿಯೇ ಎನ್ನುವುದು ಗೊತ್ತಾಗಿಲ್ಲ.

ಇರಾನ್ ವಾಯುಪ್ರದೇಶದಲ್ಲಿ ಅಮೆರಿಕದ ವಿಮಾನಗಳ ಹಾರಾಟ ನಿಷೇಧ

 ಕೊಲ್ಲಿ ಮತ್ತು ಒಮಾನ್ ಕೊಲ್ಲಿಯಲ್ಲಿ ಇರಾನ್ ನಿಯಂತ್ರಣದ ವಾಯುಪ್ರದೇಶದಲ್ಲಿ ಅಮೆರಿಕದ ನಾಗರಿಕ ವಿಮಾನಗಳ ಹಾರಾಟವನ್ನು ಅಮೆರಿಕ ಗುರುವಾರ ಮುಂದಿನ ಸೂಚನೆಯವರೆಗೆ ನಿಷೇಧಿಸಿದೆ.

 ಅಮೆರಿಕದ ಸೇನೆಯ ಬೇಹುಗಾರಿಕೆ ಡ್ರೋನ್ ಒಂದನ್ನು ಇರಾನ್ ಹೊಡೆದುರುಳಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.

‘ನಮ್ಮ ಜಲಪ್ರದೇಶದಲ್ಲಿ’ ಅಮೆರಿಕದ ಸೇನಾ ಡ್ರೋನ್ ಪತ್ತೆ: ಇರಾನ್

 ಬುಧವಾರ ಹೊಡೆದುರುಳಿಸಲಾದ ಅಮೆರಿಕದ ಬೇಹುಗಾರಿಕಾ ಡ್ರೋನ್‌ನ ಭಾಗಗಳನ್ನು ನಮ್ಮ ಜಲಪ್ರದೇಶದಲ್ಲಿ ಪತ್ತೆಹಚ್ಚಿರುವುದಾಗಿ ಇರಾನ್ ಗುರುವಾರ ಹೇಳಿದೆ.

ಡ್ರೋನ್‌ನ ಭಾಗಗಳನ್ನು ಇರಾನ್ ಜಲಪ್ರದೇಶದಿಂದ ವಶಪಡಿಸಿಕೊಂಡಿರುವುದಾಗಿ ಗುರುವಾರ ರಾತ್ರಿ ಇರಾನ್ ವಿದೇಶ ಸಚಿವ ಮುಹಮ್ಮದ್ ಜಾವೇದ್ ಶರೀಫ್ ಹೇಳಿದರು.

‘‘ನಾವು ಯುದ್ಧ ಬಯಸುತ್ತಿಲ್ಲ, ಆದರೆ, ನಮ್ಮ ವಾಯು, ಭೂ ಮತ್ತು ಜಲ ಪ್ರದೇಶಗಳನ್ನು ರಕ್ಷಿಸಿಕೊಳ್ಳುತ್ತೇವೆ’’ ಎಂದು ಶರೀಫ್ ನುಡಿದರು.

ಡ್ರೋನ್‌ಗೆ ಇರಾನ್‌ನ ಕ್ಷಿಪಣಿ ಬಡಿಯುವಾಗ ಅದು ಇರಾನ್‌ನಿಂದ 34 ಕಿಲೋಮೀಟರ್ ದೂರದಲ್ಲಿತ್ತು ಎಂದು ಅಮೆರಿಕದ ರಕ್ಷಣ ಇಲಾಖೆ ಪೆಂಟಗನ್ ಹೇಳಿದೆ ಹಾಗೂ ಅದು ‘ಅಪ್ರಚೋದಿತ ದಾಳಿ’ ಎಂಬುದಾಗಿ ಬಣ್ಣಿಸಿದೆ.

ಆದರೆ, ಡ್ರೋನ್ ಹೊರ್ಮೊಝ್ಗನ್ ಪ್ರಾಂತದ ಜಲಪ್ರದೇಶದಲ್ಲಿ ಇರಾನ್ ವಾಯುಪ್ರದೇಶವನ್ನು ಉಲ್ಲಂಘಿಸಿದಾಗ ಅದನ್ನು ಹೊಡೆದುರುಳಿಸಲಾಗಿದೆ ಎಂದು ಇಸ್ಲಾಮಿಕ್ ರೆವಲೂಶನರಿ ಗಾರ್ಡ್ ಕಾರ್ಪ್ಸ್ ಹೇಳಿದೆ.

ಪರಿಣಾಮ ವಿನಾಶಕಾರಿ: ಪುಟಿನ್ ಎಚ್ಚರಿಕೆ

 ಇರಾನ್ ವಿರುದ್ಧ ಅಮೆರಿಕ ಬಲ ಪ್ರಯೋಗಿಸಿದರೆ ಪರಿಣಾಮ ವಿನಾಶಕಾರಿಯಾಗಿರುತ್ತದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗುರುವಾರ ಹೇಳಿದ್ದಾರೆ.

‘‘ಬಲಪ್ರಯೋಗವನ್ನು ತಳ್ಳಿಹಾಕುವುದಿಲ್ಲ ಎಂದು ಅಮೆರಿಕ ಹೇಳುತ್ತದೆ... ಇದು ಈ ವಲಯಕ್ಕೆ ವಿನಾಶಕಾರಿಯಾಗಿರುತ್ತದೆ’’ ಎಂದು ಟಿವಿಯಲ್ಲಿ ನೇರಪ್ರಸಾರಗೊಂಡ ವಾರ್ಷಿಕ ಫೋನ್-ಇನ್ ಕಾರ್ಯಕ್ರಮದಲ್ಲಿ ರಶ್ಯದ ವೀಕ್ಷಕರೊಬ್ಬರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

‘‘ಅಮೆರಿಕದ ಬಲಪ್ರಯೋಗದಿಂದ ಈ ವಲಯದಲ್ಲಿ ಹಿಂಸೆ ಹೆಚ್ಚುತ್ತದೆ ಹಾಗೂ ನಿರಾಶ್ರಿತರ ಸಂಖ್ಯೆಯಲ್ಲಿಯೂ ಭಾರೀ ಹೆಚ್ಚಳವಾಗುತ್ತದೆ’’ ಎಂದು ಪುಟಿನ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News