ಕಾಂಗ್ರೆಸ್ ನಾಯಕರ ನಡೆ ಮೇಲೆ ಮೈತ್ರಿ ಸರಕಾರದ ಭವಿಷ್ಯ: ಎಚ್.ಡಿ.ದೇವೇಗೌಡ

Update: 2019-06-21 12:13 GMT

ಬೆಂಗಳೂರು, ಜೂ.21: ಕಾಂಗ್ರೆಸ್ ನಾಯಕರ ನಡೆ ಮೇಲೆಯೇ ಮೈತ್ರಿ ಸರಕಾರದ ಭವಿಷ್ಯ ನಿಂತಿದೆ. ಮೈತ್ರಿ ಸರಕಾರಕ್ಕೆ ಜೆಡಿಎಸ್ ಕಡೆಯಿಂದ ಯಾವುದೇ ಧಕ್ಕೆ ಆಗುವುದಿಲ್ಲ. ನಮ್ಮ ಶಾಸಕರು, ನಾಯಕರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ನಮ್ಮ ಬಳಿ ಇದೆ. ಈ ಜವಾಬ್ದಾರಿ ಕಾಂಗ್ರೆಸ್ ಮೇಲೂ ಇದೆ. ಹಾಗಾಗಿ, ಕಾಂಗ್ರೆಸ್ ನಾಯಕರು, ಎಲ್ಲಿಯೂ ಸರಕಾರಕ್ಕೆ ಮುಜುಗರ ಆಗುವ ರೀತಿಯಲ್ಲಿ ಹೇಳಿಕೆ ನೀಡಬಾರದು ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.

ನಗರದ ಅರಮನೆ ಮೈದಾನದಲ್ಲಿ ಜೆಡಿಎಸ್ ಹಮ್ಮಿಕೊಂಡಿದ್ದ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಿತರಾದ ಅಭ್ಯರ್ಥಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾಂಗ್ರೆಸ್-ಜೆಡಿಎಸ್ ಸೋದರ ಸಮಾನದಲ್ಲಿ ನಡೆದುಕೊಳ್ಳುವುದು ಒಳ್ಳೆಯ ಬೆಳವಣಿಗೆ. ನಾನು ಸರಕಾರದ ಭಾಗಿಯೂ ಆಗುವುದಿಲ್ಲ. ಬದಲಾಗಿ, ಪಕ್ಷ ಸಂಘಟನೆ ಮಾಡುವೆ ಎಂದ ಅವರು, ಕುಮಾರಸ್ವಾಮಿ ಎಲ್ಲರನ್ನು ಮೆಚ್ಚಿಸಿ ಕೆಲಸ ಮಾಡುವುದು ಕಷ್ಟ. ಈ ಹಿಂದೆಯೂ, ಕುಮಾರಸ್ವಾಮಿ ಅವರ ಸರಕಾರ ಇದ್ದಾಗ, ಒಂದು ಗುಂಪು ಸಹಕಾರ ನೀಡಲಿಲ್ಲ. ಆದರೆ, ಇಂದಿನ ಮೈತ್ರಿ ಸರಕಾರ ನಾಲ್ಕು ವರ್ಷ ಆನಂದವಾಗಿ ಮುಂದುವರೆಯಲಿ ಎಂದು ದೇವೇಗೌಡರು ನುಡಿದರು.

ಸರಕಾರ ಎಲ್ಲರದ್ದೂ: ಇತ್ತೀಚಿಗೆ, ಮೈತ್ರಿ ಸರಕಾರದ ಸಾಧನೆ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಒಂದು ವರ್ಷದ ಸಾಧನೆ ಕೈಪಿಡಿ ಲೋಕಾರ್ಪಣೆ ಮಾಡಿದ ಕಾರ್ಯಕ್ರಮದಲ್ಲಿ ಕೆಲ ಸಚಿವರು ಮಾತ್ರ ಇದರಲ್ಲಿ ಭಾಗಿಯಾಗಿದ್ದಾರೆ. ಆದರೆ, ಸರಕಾರ ಮತ್ತು ಅದರ ಯೋಜನೆಗಳೆನ್ನುವುದು ಎಲ್ಲರಿಗೂ ಸೇರಿದ್ದು ಎಂದರು.

ಬಿಜೆಪಿ 105 ಸ್ಥಾನ ಗಳಿಸಿದರೂ, ನಿರಂತರ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ. ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಹ ಸರಕಾರ ಪತನವಾಗಲಿದೆ ಎನ್ನುತ್ತಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಯಾರೂ ಸಹ ಜೆಡಿಎಸ್ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತ, ಶಾಸಕ ಗೋಪಾಲಯ್ಯ ಸೇರಿದಂತೆ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News