ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಬೇಕು: ಕೇಂದ್ರ ವಲಯ ಐಜಿಪಿ ಕೆ.ವಿ.ಶರತ್ ಚಂದ್ರ

Update: 2019-06-21 12:46 GMT

ಬೆಂಗಳೂರು, ಜೂ.21: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು ಎಂದು ಕೇಂದ್ರ ವಲಯ ಪೊಲೀಸ್ ಮಹಾನಿರ್ದೇಶಕ(ಐಜಿಪಿ) ಕೆ.ವಿ.ಶರತ್ ಚಂದ್ರ ಹೇಳಿದ್ದಾರೆ.

ನಗರದ ಕೇಂದ್ರ ವಲಯ ಐಜಿಪಿ ಕಚೇರಿಯ ಆವರಣದಲ್ಲಿ ಕ್ಯಾನ್ಸರ್ ನಿರೋಧಕ ಔಷಧಿಯುಕ್ತ ಗಿಡಗಳನ್ನು ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಆರೋಗ್ಯವಂತವಾಗಿರಲು ಪರಿಸರದ ಸಂರಕ್ಷಣೆ ಮಾಡಬೇಕಾದ ಕರ್ತವ್ಯ ಎಲ್ಲರದ್ದಾಗಿದೆ ಎಂದರು.

ಪ್ರತಿಯೊಬ್ಬ ನಾಗರಿಕರು ಸ್ವಯಂಪ್ರೇರಿತವಾಗಿ ಗಿಡ ನೆಟ್ಟು ಬೆಳೆಸುವುದರ ಮೂಲಕ ಪರಿಸರ ರಕ್ಷಣೆಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ವಲಯ ಕಚೇರಿ ಆವರಣದಲ್ಲಿ ಅಪರೂಪದ ಗಿಡಗಳನ್ನು ನೆಟ್ಟು, ಪೋಷಣೆ ಮಾಡಲಾಗುತ್ತದೆ. ಔಷಧಿಯುಕ್ತ ಹಣ್ಣು ಹಾಗೂ ಹೂವಿನ ಸಸಿಗಳನ್ನು ಬೆಳೆಸಿ ಸುಂದರವಾದ ವಾತಾವರಣ ನಿರ್ಮಿಸಲಾಗುವುದು ಎಂದು ತಿಳಿಸಿದರು.

ರಕ್ತದಾನ ಶಿಬಿರ: ಇದೇ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಹಾಗೂ ಫೋರ್ಟಿಸ್ ಆಸ್ಪತ್ರೆಯ ಸಹಯೋಗದಲ್ಲಿ ಕೇಂದ್ರ ವಲಯ ಕಚೇರಿಯಲ್ಲಿ ರಕ್ತದಾನ ಶಿಬಿರ, ಉಚಿತ ಆರೋಗ್ಯ ಶಿಬಿರ ನಡೆಸಲಾಯಿತು. ಸುಮಾರು 100 ಕ್ಕೂ ಅಧಿಕ ಜನರು ರಕ್ತದಾನ ಮಾಡಿದರು. 200 ಕ್ಕೂ ಅಧಿಕ ಸಿಬ್ಬಂದಿಗೆ ವಿವಿಧ ವೈದ್ಯಕೀಯ ತಪಾಸಣೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಎಸ್ಪಿ ಶಿವಕುಮಾರ್, ಲಯನ್ಸ್ ಆಸ್ಪತ್ರೆಯ ಪ್ರಕೃತಿ ಪ್ರಸನ್ನ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News