ಮುಝಫ್ಫರ್‌ ಪುರದಲ್ಲಿ ನಿಲ್ಲದ ಮರಣ ಮೃದಂಗ: ಮೃತರ ಸಂಖ್ಯೆ 141ಕ್ಕೇರಿಕೆ

Update: 2019-06-22 04:00 GMT

ಪಾಟ್ನಾ: ಮುಝಫ್ಫರ್‌ ಪುರ ಸೇರಿದಂತೆ ಬಿಹಾರದಲ್ಲಿ ಮರಣ ಮೃದಂಗ ನಿಂತಿಲ್ಲ. ಮಾರಕ ಮೆದುಳು ಜ್ವರ ಕಾಯಿಲೆ ಮತ್ತೆ ಮೂರು ಮಕ್ಕಳನ್ನು ಬಲಿ ಪಡೆದಿದ್ದು, ಈ ವೈರಸ್ ರೋಗಕ್ಕೆ ಪ್ರಾಣ ಕಳೆದುಕೊಂಡವರ ಸಂಖ್ಯೆ 141ಕ್ಕೇರಿದೆ.

ರಾಜ್ಯದ ಎಂಟು ಜಿಲ್ಲೆಗಳಲ್ಲಿ ಮೆದುಳು ಜ್ವರ ಕಾಣಿಸಿಕೊಂಡಿದೆ. ಅತ್ಯಂತ ಬಾಧಿತವಾದ ಮುಝಫ್ಫರ್‌ ಪುರದಲ್ಲಿ 437 ಮಂದಿಗೆ ಸೋಂಕು ತಲುಗಿದ್ದು, 85 ಮಕ್ಕಳು ಇದುವರೆಗೆ ಮೃತಪಟ್ಟಿದ್ದಾರೆ.

ಆರೋಗ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಮನೋಜ್ ಜಲಾನಿ ನೇತೃತ್ವದ ಉನ್ನತ ಅಧಿಕಾರಿಗಳ ತಂಡ ಶುಕ್ರವಾರ ಮುಝಫ್ಫರ್‌ ಪುರಕ್ಕೆ ಭೇಟಿ ನೀಡಿ, ಶ್ರೀಕೃಷ್ಣ ಕಾಲೇಜು ಆಸ್ಪತ್ರೆಯ ಮಕ್ಕಳ ತೀವ್ರ ನಿಗಾ ಘಟಕಗಳಲ್ಲಿ ಪರೀಕ್ಷಾ ಸಾಧನಗಳನ್ನು ಅಳವಡಿಸುವಂತೆ ಸೂಚಿಸಿದ್ದಾರೆ.

"ಕೇಂದ್ರ ತಂಡದ ಸಲಹೆಯ ಮೇರೆಗೆ, ಒಂದೆಡೆಯಿಂದ ಮತ್ತೊಂದು ಕಡೆಗೆ ಒಯ್ಯಬಹುದಾದ ಎಕ್ಸ್‌ರೇ ಮಿಷನ್, ಅಲ್ಟ್ರಾ ಸೋನೊಗ್ರಫಿ ಮತ್ತು ಎಲೆಕ್ಟ್ರೊಲೈಟ್ ಟೆಸ್ಟರ್‌ಗಳನ್ನು ಆಸ್ಪತ್ರೆಯ ಮಕ್ಕಳ ತೀವ್ರ ನಿಗಾ ಘಟಕದಲ್ಲಿ ವ್ಯವಸ್ಥೆಗೊಳಿಸಲಾಗಿದೆ. ಈ ಸಾಧನಗಳು ಆಸ್ಪತ್ರೆಯಲ್ಲಿ ಲಭ್ಯವಿದ್ದರೂ, ತೀವ್ರ ನಿಗಾ ಘಟಕದಿಂದ ತಪಾಸಣೆಗಾಗಿ ಮಕ್ಕಳನ್ನು ಬೇರೆಡೆಗೆ ಒಯ್ಯಬಾರದು ಎಂದು ಕೇಂದ್ರ ತಂಡ ಸೂಚಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ" ಎಂದು ಬಿಹಾರದ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸಂಜಯ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News