ಮಹಾರಾಷ್ಟ್ರದಲ್ಲಿ ಬರದ ಕರಾಳ ಛಾಯೆ: ನೀರಿಗಾಗಿ ಜನ ಮಾಡುತ್ತಿರುವುದೇನು ಗೊತ್ತೇ ?

Update: 2019-06-22 05:26 GMT
ಫೋಟೊ: ಹಿಂದುಸ್ತಾನ್ ಟೈಮ್ಸ್

ಮುಂಬೈ: ಮಹಾರಾಷ್ಟ್ರದ ವಿದರ್ಭ ಮತ್ತು ಕೇಂದ್ರ ಮಹಾರಾಷ್ಟ್ರವನ್ನು ಒಳಗೊಂಡ ಮರಾಠವಾಡ ಪ್ರದೇಶದಲ್ಲಿ ಬರಗಾಲ 32ನೇ ವಾರಕ್ಕೆ ಕಾಲಿಟ್ಟಿದ್ದು, ಬೀಡ್ ಹಾಗೂ ಔರಂಗಾಬಾದ್ ಗಡಿಭಾಗದ ಅದೂಲ್ ಗ್ರಾಮದ ಜನ ಸ್ನಾನ ಮಾಡಿದ ತ್ಯಾಜ್ಯ ನೀರನ್ನೂ ತಮ್ಮ ಮನೆಗೆಲಸದ ಅಗತ್ಯತೆಗೆ ಬಳಸಿಕೊಳ್ಳುತ್ತಿದ್ದಾರೆ.

ಸ್ನಾನ ಮಾಡಿದ ನೀರನ್ನು ವಾಸ್ತವವಾಗಿ ಗ್ರೇವಾಟರ್ ಎಂದು ಪರಿಗಣಿಸಲಾಗುತ್ತದೆ. ಇದನ್ನು ಸಂಸ್ಕರಿಸದಿದ್ದರೆ ಇದು ಕುಡಿಯಲು ಅಥವಾ ಗೃಹಬಳಕೆಗೆ ಯೋಗ್ಯವಲ್ಲ. ಏಕೆಂದರೆ ಇದರಲ್ಲಿ ಸಾಬೂನು ಕಣಗಳು ಮತ್ತು ಮೃತ ಚರ್ಮದ ಕಣಗಳು ಇರುತ್ತವೆ. ಆದರೆ ಪರ್ಯಾಯವೇ ಇಲ್ಲದೇ ಇದನ್ನು ಬಳಸುತ್ತಿದ್ದೇವೆ ಎಂದು ಅದೂಲ್ ಗ್ರಾಮಸ್ಥರು ಹೇಳುತ್ತಾರೆ.

ಬೆಳಗ್ಗೆ 8ರ ವೇಳೆಗೆ ಗ್ರಾಮದ ರಾಧಾಕೃಷ್ಣ ಬಾಬೂರಾವ್ ವಾಘ್ ಸ್ನಾನಕ್ಕೆ ತೆರಳುತ್ತಾರೆ. 40 ವರ್ಷದ ಈ ರೈತನ ಮನೆಯಲ್ಲಿ ಪತ್ನಿ, ಇಬ್ಬರು ಮಕ್ಕಳು, ಅವರ ಪೋಷಕರು, ಸಹೋದರ ಹಾಗೂ ಆತನ ಪತ್ನಿ ಹೀಗೆ ಏಳು ಮಂದಿ ಇದ್ದಾರೆ. ಎಪ್ರಿಲ್‌ನಿಂದೀಚೆಗೆ ವಾಘ್ ಸ್ನಾನಕ್ಕೆ ಸೋಪು ಬಳಸುತ್ತಿಲ್ಲ. ಹಗ್ಗ ಹೆಣೆದ ಮಂಚದಲ್ಲಿ ಕುಳಿತು ಸ್ನಾನ ಮಾಡುವಾಗ ಮಂಚದ ಕೆಳಗೆ ಪತ್ನಿ ಅಗಲವಾದ ಪಾತ್ರೆ ಇಡುತ್ತಾರೆ. ವಾಘ್ ಜಾಗರೂಕತೆಯಿಂದ ಒಂದು ಹನಿಯೂ ಚೆಲ್ಲದಂತೆ ಮೈಮೇಲೆ ಲೋಟದಲ್ಲಿ ನೀರು ಸುರಿದುಕೊಳ್ಳುತ್ತಾರೆ. ಈ ನೀರನ್ನು ಸಂಗ್ರಹಿಸಿ ಕುಟುಂಬದ ಇತರ ಸದಸ್ಯರು ಬಳಸುತ್ತಾರೆ.

ಹೀಗೆ ಕೊನೆಯದಾಗಿ ಪಾತ್ರೆಯಲ್ಲಿ ಉಳಿಯುವ ನೀರನ್ನು ಮನೆಯ ಮಹಿಳೆಯರು ಸ್ನಾನಕ್ಕೆ ಬಳಸುತ್ತಾರೆ. "ಕೇವಲ ವಾಘ್ ಕುಟುಂಬದವರು ಮಾತ್ರವಲ್ಲದೇ ಹಲವು ಕುಟುಂಬಗಳಲ್ಲಿ ಹೀಗೆ ಪಾತ್ರೆಯಲ್ಲಿ ಸ್ನಾನ ಮಾಡಿದ ನೀರು ಹಿಡಿದು, ಬಟ್ಟೆ ತೊಳೆಯಲು ಮತ್ತು ಪಾತ್ರೆಗಳನ್ನು ತೊಳೆಯಲು ಬಳಸುತ್ತಾರೆ" ಎಂದು ಗ್ರಾಮದ ಮನೋಜ್ ಚವ್ಹಾಣ್ ಹೇಳುತ್ತಾರೆ.

ಔರಂಗಾಬಾದ್ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಜನ ಈ ಮಾದರಿ ಅನುಸರಿಸುತ್ತಾರೆ ಎಂದು ಗ್ರಾಮಸ್ಥರು ವಿವರಿಸಿದರು.

ಇಷ್ಟೊಂದು ನೀರಿನ ಕೊರತೆ ಇರುವಾಗ ಅದನ್ನು ಕೊಳಕು ಎಂದು ಪರಿಗಣಿಸುವುದು ಹೇಗೆ ? ನಮಗೆ ಇರುವ ಆಯ್ಕೆ ಎರಡು ಮಾತ್ರ; ಒಂದು ಹೊಂದಾಣಿಕೆ ಮಾಡಿಕೊಂಡು ಬದುಕುವುದು ಅಥವಾ ಸಾಯುವುದು. ಇಂಥ ಕಠಿಣ ಪರಿಸ್ಥಿತಿಯಲ್ಲಿ ಮಾಡುವುದಾದರೂ ಏನು" ಎಂದು ಅವರು ಪ್ರಶ್ನಿಸುತ್ತಾರೆ.

13 ಸಾವಿರ ಜನ ಇರುವ ಅದೂಲ್ ಗ್ರಾಮ, ತೀವ್ರ ಬರ ಪರಿಸ್ಥಿತಿ ಎದುರಿಸುತ್ತಿರುವ 1372 ಗ್ರಾಮಗಳಲ್ಲಿ ಸೇರಿದೆ. ಭಾರತೀಯ ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ, ಡಿಸೆಂಬರ್‌ನಿಂದೀಚೆಗೆ ಜಿಲ್ಲೆಯಲ್ಲಿ ಮಳೆಯಾಗಿಲ್ಲ. ಕಳೆದ ವರ್ಷ ಕೂಡಾ ಶೇಕಡ 47.9ರಷ್ಟು ಮಳೆ ಕೊರತೆಯಾಗಿತ್ತು. ಅದೂಲ್ ಗ್ರಾಮಕ್ಕೆ ನೀರು ಪೂರೈಸುವ ಜಯಕವಾಡಿ ಅಣೆಕಟ್ಟು ಬರಿದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News