ಎಸ್‌.ಎಂ.ಕೃಷ್ಣ ಸಹೋದರ, ಮಾಜಿ ವಿಧಾನಪರಿಷತ್ ಸದಸ್ಯ ಎಸ್.ಎಂ.ಶಂಕರ್ ನಿಧನ

Update: 2019-06-22 15:01 GMT

ಬೆಂಗಳೂರು, ಜೂ.22: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸಹೋದರ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ಎಸ್.ಎಂ.ಶಂಕರ್ ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ಶನಿವಾರ ಮುಂಜಾನೆ ನಿಧನರಾಗಿದ್ದಾರೆ.

ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಶಂಕರ್ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಹುದಿನಗಳಿಂದ ಚಿಕಿತ್ಸೆ ನೀಡುತ್ತಿದ್ದರೂ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಶನಿವಾರ ಮುಂಜಾನೆ ವೇಳೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಎಸ್.ಎಂ.ಶಂಕರ್ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಅವರ ಸ್ವಗ್ರಾಮ ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಈ ಸಂದರ್ಭದಲ್ಲಿ ಹಲವಾರು ಗಣ್ಯರು ಶಂಕರ್ ಅವರ ಪಾರ್ಥೀವ ಶರೀರದ ದರ್ಶನ ಪಡೆದರು.

ಮಾಜಿ ಪ್ರಧಾನಿ ಸಂತಾಪ: ಮಾಜಿ ವಿಧಾನಪರಿಷತ್ ಸದಸ್ಯ ಎಸ್.ಎಂ.ಶಂಕರ್ ಅವರ ನಿಧನಕ್ಕೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸಂತಾಪ ಸೂಚಿಸಿದ್ದಾರೆ. ಶಂಕರ್ ಅವರದು ಮೃದು ಸ್ವಭಾವದ ವ್ಯಕ್ತಿತ್ವ. ಬಹಳ ಸರಳ ಜೀವಿಯಾಗಿದ್ದರು ಎಂದು ಸಂತಾಪದಲ್ಲಿ ನೆನೆದಿದ್ದಾರೆ.

ಸಚಿವ ಡಿಕೆಶಿ ಸಂತಾಪ: ವಿಧಾನಪರಿಷತ್ ಮಾಜಿ ಸದಸ್ಯ, ಕಾಂಗ್ರೆಸ್‌ನ ನಾಯಕ, ಪ್ರಗತಿಪರ ರೈತರಾಗಿದ್ದ ಶಂಕರ್ ನಿಧನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ.ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.

ನನ್ನ ರಾಜಕೀಯ ಗುರುಗಳಾದ ಎಸ್.ಎಂ.ಕೃಷ್ಣ ಅವರ ಸಹೋದರರಾದ ಶಂಕರ್ ಅವರ ಸರಳ ವ್ಯಕ್ತಿತ್ವ ಹಾಗೂ ಸಜ್ಜನಿಕೆ ಇತರರಿಗೆ ಮಾದರಿಯಾಗಿತ್ತು. ವಿಧಾನಪರಿಷತ್ ಸದಸ್ಯರಾಗಿ, ಮದ್ದೂರಿನ ಪರಿಷತ್ ಮಾಜಿ ಸದಸ್ಯರಾಗಿ, ಮದ್ದೂರಿನ ಕಾಂಗ್ರೆಸ್ ಮುಖಂಡರಾಗಿ ಪಕ್ಷಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ರಾಜಕಾರಣಿ ಮಾತ್ರವಲ್ಲ, ಪ್ರಗತಿಪರ ರೈತರಾಗಿದ್ದರು. ಅವರ ಸಾವಿನ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ಸಂತಾಪ ಸೂಚನೆಯಲ್ಲಿ ಕೋರಿದ್ದಾರೆ.

ಯಡಿಯೂರಪ್ಪ ಸಂತಾಪ: ಮಾಜಿ ವಿಧಾನಪರಿಷತ್ ಸದಸ್ಯರಾದ ಎಸ್.ಎಂ.ಶಂಕರ್ ನಿಧನರಾಗಿರುವ ಸುದ್ದಿ ತಿಳಿದು ತುಂಬಾ ದುಃಖವಾಯಿತು. ಮಾಜಿ ಸಿಎಂ ಹಾಗೂ ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಅವರ ಸಹೋದರ ಶಂಕರ್ ರಾಜಕೀಯ ಸೇವೆಯಲ್ಲದೆ ಸಮಾಜ ಸೇವೆಯಲ್ಲಿಯೂ ಅಪಾರ ಜನಪ್ರಿಯತೆಯನ್ನು ಗಳಿಸಿದ್ದರು. ಅವರ ಅಭಿಮಾನಿಗಳಿಗೆ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಸಂತಾಪ ಸೂಚನೆಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News