ಬಿಜೆಪಿಯ ಮುಂದಿನ ಗುರಿ ದಕ್ಷಿಣ ಭಾರತ ಗೆಲ್ಲುವುದು: ಪಕ್ಷದ ರಾಜ್ಯ ಉಸ್ತುವಾರಿ ಮುರಳಿಧರ ರಾವ್

Update: 2019-06-22 12:26 GMT

ಬೆಂಗಳೂರು, ಜೂ.22: ದೇಶದ ಜನತೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಭೂತ ಪೂರ್ವವಾಗಿ ಗೆಲ್ಲಿಸಿದ್ದಾರೆ. ಈಗ ನಮ್ಮ ಮುಂದಿನ ಗುರಿ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹಾಗೂ ತೆಲಂಗಾಣವನ್ನು ಗೆಲ್ಲುವುದಾಗಿದೆ ಎಂದು ಬಿಜೆಪಿ ಕರ್ನಾಟಕ ಉಸ್ತುವಾರಿ ಮುರಳಿಧರ ರಾವ್ ತಿಳಿಸಿದ್ದಾರೆ. 

ಶನಿವಾರ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉತ್ತರಭಾರತ, ಈಶಾನ್ಯ ರಾಜ್ಯಗಳು ಸೇರಿದಂತೆ ದಕ್ಷಿಣದಲ್ಲಿ ಕರ್ನಾಟಕ ಬಿಜೆಪಿಯ ವಶವಾಗಿದೆ. ಇದೇ ಮಾದರಿಯಲ್ಲಿ ದಕ್ಷಿಣ ಭಾರತದ ರಾಜ್ಯಗಳನ್ನು ಬಿಜೆಪೀಕರಣ ಮಾಡುವ ನಿಟ್ಟಿನಲ್ಲಿ ಕಾರ್ಯತಂತ್ರಗಳನ್ನು ರೂಪಿಸಲಾಗುತ್ತಿದೆ ಎಂದರು.

ಕರ್ನಾಟಕ ಮಾದರಿಯಾಗಲಿ: ದಕ್ಷಿಣ ಭಾರತವನ್ನು ಬಿಜೆಪೀಕರಣ ಮಾಡುವ ಕಾರ್ಯಯೋಜನೆಗೆ ಕರ್ನಾಟಕ ಬಿಜೆಪಿ ಘಟಕವು ಮಾದರಿಯಾಗಬೇಕು. ಕರ್ನಾಟಕದಲ್ಲಿ ಬಿಜೆಪಿ ನೆಲೆನಿಲ್ಲಲು ಯಾವ ರೀತಿಯ ಪ್ರಚಾರ ತಂತ್ರಗಳನ್ನು ರೂಪಿಸಿದ್ದೇವೆ ಹಾಗೂ ಚುನಾವಣಾ ಸಂದರ್ಭದಲ್ಲಿ ನಡೆಯುವ ಕಾರ್ಯಯೋಜನೆಗಳ ಕುರಿತು ದಕ್ಷಿಣ ಭಾರತದ ಇತರೆ ರಾಜ್ಯದ ಬಿಜೆಪಿ ಘಟಕಗಳಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು.

ಈಗ ಇಡೀ ಭಾರತದ ಭವಿಷ್ಯವನ್ನು ನಿರ್ಧಾರ ಮಾಡುವ ಜವಾಬ್ದಾರಿಯನ್ನು ಜನತೆ ಬಿಜೆಪಿಗೆ ಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ಐದು ವರ್ಷದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡುವಲ್ಲಿ ಯಶಸ್ವಿಯಾಗಿದ್ದೇವೆ. ಇದನ್ನು ಮೆಚ್ಚಿಕೊಂಡೆ ಈ ಬಾರಿಯು ಮತದಾರರು ನಮಗೆ ಅಧಿಕಾರ ಕೊಟ್ಟಿದ್ದಾರೆ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ ಜನಾದೇಶದ ವಿರುದ್ಧವಾಗಿ ಮೈತ್ರಿ ಸರಕಾರ ಆಡಳಿತ ನಡೆಸುತ್ತಿದೆ. ಈ ಸರಕಾರವನ್ನು ಕಿತ್ತೊಗೆದು ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಇವತ್ತಿನಿಂದಲೇ ಕಾರ್ಯಪ್ರವೃತ್ತರಾಗಬೇಕು. ಇದಕ್ಕಾಗಿ ಬಿಜೆಪಿ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಕಾರ್ಯಕರ್ತರು ಸೇರಿದಂತೆ ಬಿಜೆಪಿಯ ಎಲ್ಲ ಹಂತದ ನಾಯಕರು ಪಾಲ್ಗೊಳ್ಳಬೇಕೆಂದು ಅವರು ಹೇಳಿದರು.

ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ನಾಯಕ ಅರವಿಂದ ಲಿಂಬಾವಳಿ, ಸಂಸದೆ ಶೋಭಾ ಕರಂದ್ಲಾಜೆ, ವಿಧಾನಪರಿಷತ್ ಸದಸ್ಯ ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು

ಯಾವ ಪೊಲೀಸ್ ಅಧಿಕಾರಿ ಲಾಟರಿ ಹಗರಣದ ಆರೋಪದಲ್ಲಿ ಸಿಲುಕಿದ್ದಾರೋ ಅವರನ್ನು ಮುಂಭಡ್ತಿ ಕೊಟ್ಟು ಬೆಂಗಳೂರು ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ಹಾಗೂ ಕಾಂಗ್ರೆಸ್ ನಾಯಕ ಗೋವಿಂದರಾಜ್ ಡೈರಿ ಪ್ರಕರಣ ಇನ್ನು ಮುಗಿದಿಲ್ಲ. ಇಂತಹ ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ಬಿಜೆಪಿಯ ಹೋರಾಟ ನಿರಂತರವಾಗಿರುತ್ತದೆ.

-ಮುರಳಿಧರ ರಾವ್, ಕರ್ನಾಟಕ ಉಸ್ತವಾರಿ, ಬಿಜೆಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News