ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಅತ್ಯಾಚಾರ ಆರೋಪ

Update: 2019-06-22 07:26 GMT

ನ್ಯೂಯಾರ್ಕ್, ಜೂ.22: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ದಶಕಗಳಿಗೂ ಹಿಂದೆ ಮ್ಯಾನ್‍ ಹಟ್ಟಾನ್ ನಗರದ ಪ್ರತಿಷ್ಠಿತ ಡಿಪಾರ್ಟ್‍ಮೆಂಟ್ ಸ್ಟೋರ್ ನ ಡ್ರೆಸ್ಸಿಂಗ್ ರೂಂನಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾಗಿ ನ್ಯೂಯಾರ್ಕ್ ಮೂಲದ ಲೇಖಕಿ ಹಾಗೂ  ಅಂಕಣಕಾರ್ತಿ ಇ ಜೀನ್ ಕ್ಯಾರೋಲ್  ನ್ಯೂಯಾರ್ಕ್ ಮ್ಯಾಗಝಿನ್ ಒಂದರಲ್ಲಿ ಪ್ರಕಟವಾದ ಕೃತಿಯೊಂದರಲ್ಲಿ ಆರೋಪಿಸಿದ್ದಾರೆ.

ನಂತರ ದಿ ವಾಷಿಂಗ್ಟನ್ ಪೋಸ್ಟ್ ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಆರೋಪಗಳನ್ನು ಪುಷ್ಠೀಕರಿಸಿದ್ದಾರೆ. 1995 ಅಥವಾ 1996ರಲ್ಲಿ ತಾನು ಆಗ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಟ್ರಂಪ್ ಅವರನ್ನು ಆಕಸ್ಮಿಕವಾಗಿ ಬೆರ್ಗ್ ಡೊರ್ಫ್ ಗುಡ್ಮೆನ್ ಎಂಬಲ್ಲಿ  ಭೇಟಿಯಾಗಿದ್ದ ಸಂದರ್ಭ  ಅವರು ತಮ್ಮ ಮೇಲೆ ಲೈಂಗಿನ ದೌರ್ಜನ್ಯವೆಸಗಿದ್ದರೆಂದು ಕ್ಯಾರೊಲ್ ಹೇಳಿದ್ದಾರೆ.

ತಮ್ಮ ಕಥೆ ಹೇಳುವುದರಿಂದ  ಇತರ ಮಹಿಳೆಯರೂ ತಮಗಾದ ದೌರ್ಜನ್ಯ ಹೇಳಿಕೊಳ್ಳಲು  ಹಿಂಜರಿಯದೆ ಮುಂದೆ ಬರುವ ಧೈರ್ಯ ತೋರಬಹುದು... “ನಾನು ಆ ಘಟನೆಗೆ ನನ್ನನ್ನೇ ದೂರಿಕೊಂಡೆ ಹಾಗೂ ಮೌನವಾದೆ, ತಪ್ಪಿತಸ್ಥ ಭಾವನೆ ಕಾಡಿತು, ನನಗೆ ನಾನೇ ಹೊಡೆದುಕೊಂಡೆ'' ಎಂದು ಬರೆದಿದ್ದಾರೆ.

ಘಟನೆ ನಡೆದ ನಂತರ ತಾನು ಆ ಸಂದರ್ಭ ತನ್ನ ಇಬ್ಬರು ಆತ್ಮೀಯ ಗೆಳತಿಯರಿಗೆ ಈ ವಿಷಯ ತಿಳಿಸಿದ್ದಾಗಿ ಈಗ 75 ವರ್ಷ ವಯಸ್ಸಿನ ಕ್ಯಾರೊಲ್ ಹೇಳಿದ್ದಾರೆ.

ಆಗ ಅವರ ಒಬ್ಬ ಸ್ನೇಹಿತೆ ಪೊಲೀಸ್ ದೂರು ನೀಡುವಂತೆ ಅವರನ್ನು ಆಗ್ರಹಿಸಿದ್ದರೂ ಪ್ರಯೋಜನವಾಗಿರಲಿಲ್ಲ ಎಂದು ಆ ಸ್ನೇಹಿತೆ ಶುಕ್ರವಾರ ದಿ ಪೋಸ್ಟ್ ಗೆ ಹೇಳಿದ್ದಾರೆ.

ಆದರೆ ಈ ಆರೋಪವನ್ನು ಟ್ರಂಪ್ ಖಂಡತುಂಡವಾಗಿ ನಿರಾಕರಿಸಿದ್ದಾರೆ ಹಾಗೂ ಅದನ್ನು ನಕಲಿ ಸುದ್ದಿ  ಎಂದು ಬಣ್ಣಿಸಿದ್ದಾರೆ. ಘಟನೆಯ ವೀಡಿಯೋ ದೃಶ್ಯಾವಳಿ ಅಥವಾ ಸ್ಟೋರ್ ನಲ್ಲಿ ಸಾಕ್ಷಿಗಳೇಕೆ ಇಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

``ಆಕೆಯನ್ನು ನಾನು ಜೀವನದಲ್ಲಿ  ಇದುವರೆಗೂ ಭೇಟಿಯಾಗಿಲ್ಲ. ಆಕೆ ತನ್ನ ಹೊಸ ಪುಸ್ತಕವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ. ಇದು ಆಕೆಯ ಉದ್ದೇಶವನ್ನು ಸ್ಪಷ್ಟಪಡಿಸುತ್ತಿದೆ. ಆ ಪುಸ್ತಕವನ್ನು ಫಿಕ್ಷನ್  ವಿಭಾಗದಲ್ಲಿ ಮಾರಾಟ ಮಾಡಬೇಕು,'' ಎಂದಿದ್ದಾರೆ.

ದಿ ನ್ಯೂಯಾರ್ಕ್ ಮ್ಯಾಗಝಿನ್ ನಲ್ಲಿ ಪ್ರಕಟವಾದ ಲೇಖನದ ಜತೆ ಕ್ಯಾರೋಲ್ ನೀಡಿರುವ ಹಳೆಯ ಫೋಟೋ ಕೂಡ ಪ್ರಕಟಿಸಲಾಗಿದ್ದು ಅದರನ್ನು ಟ್ರಂಪ್ ತಮ್ಮ ಆಗಿನ ಪತ್ನಿ ಇವಾನ ಜತೆ ಬೆನ್ನು ಹಾಕಿ ನಿಂತಿರುವ ಫೋಟೋ ಇದೆ. ಚಿತ್ರದಲ್ಲಿ ಕ್ಯಾರೋಲ್ ಅವರ ಆಗಿನ ಪತಿ ಜಾನ್ ಜಾನ್ಸನ್ ಕೂಡ ಕಾಣಿಸಿಕೊಂಡಿರುವ  1987ರಲ್ಲಿ ಎನ್‍ಬಿಸಿ ಪಾರ್ಟಿಯ ಸಂದರ್ಭ ತೆಗೆದ ಫೋಟೋ ಇದೆಂದು ಹೇಳಲಾಗಿದೆ.

ಡೆಮಾಕ್ರೆಟ್ ಪಕ್ಷದ ಅಧಿಕೃತ ಸದಸ್ಯೆಯಾಗಿರುವ ಕ್ಯಾರೊಲ್, ತಾವು #ಮೀಟೂ ಆಂದೋಲನದಿಂದ ಪ್ರೇರಿತರಾಗಿ ಈ ವಿಚಾರ ಬಹಿರಂಗ ಪಡಿಸಿದ್ದಾಗಿ ಹೇಳಿದ್ದಾರೆ.

ಘಟನೆ ನಡೆದ ಸಂದರ್ಭ ಕ್ಯಾರೊಲ್ ಟಿವಿ ಕಾರ್ಯಕ್ರಮದ ಆಂಕರ್ ಆಗಿದ್ದರು ಆ ದಿನ ಅವರು  ಡಿಪಾರ್ಟ್ ಮೆಂಟ್ ಸ್ಟೋರ್ ನಿಂದ ಹೊರ ಹೋಗಲು ಅನುವಾಗಿದ್ದಾಗ ಅಲ್ಲಿಗೆ ಬಂದಿದ್ದ ಟ್ರಂಪ್ ಆಕೆಯನ್ನು ಗುರುತಿಸಿ ಮಹಿಳೆಯೊಬ್ಬರಿಗೆ ಉಡುಗೊರೆ ಆರಿಸಲು ಕೋರಿದರಲ್ಲದೆ ಆ ಮಹಿಳೆಗೆ  ನಿಮ್ಮಷ್ಟೇ ವಯಸ್ಸಾಗಿರಬೇಕು ಎಂದರು. ಉಣ್ಣೆಯ ಟೊಪ್ಪಿ ಖರೀದಿಸುವ ಉದ್ದೇಶವಿದೆ ಎಂದು ಹೇಳಿದ ಟ್ರಂಪ್ ಆಕೆಯನ್ನು ಎಸ್ಕಲೇಟರ್ ನಲ್ಲಿ ಒಳಉಡುಪುಗಳ ವಿಭಾಗಕ್ಕೆ ಕರೆದುಕೊಂಡು ಹೋಗಿದ್ದು, ಆ ಸ್ಥಳ ನಿರ್ಜನವಾಗಿತ್ತು. ಅಲ್ಲಿ ಕೆಲ ಒಳ ಉಡುಪು ಹಾಗೂ ಬಾಡಿ ಸೂಟ್ ಖರೀದಿಸಿ ಕ್ಯಾರೊಲ್ ಗೆ ಅವುಗಳನ್ನು ಧರಿಸಲು ಹೇಳಿದಾಗ ನೀವೇ ಧರಿಸಿಕೊಳ್ಳಿ ಎಂದು ಆಕೆ ಹೇಳಿದ್ದು ನಂತರ ಡ್ರೆಸ್ಸಿಂಗ್ ರೂಂನಲ್ಲಿ ದೌರ್ಜನ್ಯ  ನಡೆಸಿದ್ದರೆಂದು ಪತ್ರಿಕೆಯಲ್ಲಿ ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News