ಅಮಿತ್ ಶಾರನ್ನು ಜೈಲಿಗೆ ಕಳುಹಿಸಿದ್ದ ಜಸ್ಟಿಸ್ ಖುರೇಷಿ ಪದೋನ್ನತಿಯನ್ನು ತಡೆಯುತ್ತಿರುವ ಕೇಂದ್ರ

Update: 2019-06-22 16:25 GMT

ಹೊಸದಿಲ್ಲಿ,ಜೂ.22: ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ 2010ರಲ್ಲಿ ಹಾಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಎರಡು ದಿನಗಳ ಪೊಲೀಸ್ ಕಸ್ಟಡಿಯನ್ನು ವಿಧಿಸಿದ್ದ ಬಾಂಬೆ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಅಕಿಲ್ ಅಬ್ದುಲ್‌ ಹಮೀದ್ ಕುರೇಶಿ ಅವರನ್ನು ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ಪದೋನ್ನತಿಗೊಳಿಸಲು ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಮಾಡಿರುವ ಶಿಫಾರಸಿಗೆ ಕೇಂದ್ರವು ತಡೆಯನ್ನೊಡ್ಡಿದ್ದು,ಇದು ನರೇಂದ್ರ ಮೋದಿ ಸರಕಾರವು ತನ್ನ ಎರಡನೇ ಅಧಿಕಾರಾವಧಿಯಲ್ಲಿ ಕೊಲಿಜಿಯಂ ಅನ್ನು ಹೇಗೆ ನಡೆಸಿಕೊಳ್ಳಲಿದೆ ಎನ್ನುವುದರ ಅಶುಭ ಸಂಕೇತವಾಗಿದೆ.

ಗುಜರಾತ್ ಹೈಕೋರ್ಟಿನ ಅತ್ಯಂತ ಹಿರಿಯ ನ್ಯಾಯಾಧೀಶರಾಗಿರುವ ಜಸ್ಟಿಸ್ ಖುರೇಷಿ ಅವರ ಪದೋನ್ನತಿಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ನ್ಯಾಯಮೂರ್ತಿಗಳಾದ ಎಸ್ ಎ ಬೊಬ್ಡೆ ಹಾಗೂ ಎನ್ ವಿ ರಮಣ ಅವರನ್ನೊಳಗೊಂಡ ಕೊಲಿಜಿಯಂ ಮೇ 10ರಂದು  ಶಿಫಾರಸು ಮಾಡಿತ್ತು. ಸದ್ಯ  ವರ್ಗಾವಣೆಗೊಂಡು ಅವರು ಬಾಂಬೆ ಹೈಕೋರ್ಟಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಧ್ಯ ಪ್ರದೇಶದ ಹಾಲಿ ಮುಖ್ಯ ನ್ಯಾಯಮೂರ್ತಿ ಎಸ್ ಕೆ ಸೇಠ್ ಜೂನ್ 9ರಂದು ನಿವೃತ್ತರಾಗುತ್ತಿದ್ದುದರಿಂದ  ಅವರ ಸ್ಥಾನಕ್ಕೆ ಜಸ್ಟಿಸ್ ಖುರೇಷಿ ಅವರನ್ನು ತರಲು ಕೊಲೀಜಿಯಂ ಬಯಸಿತ್ತಲ್ಲದೆ ಈ ಹುದ್ದೆಗೆ ಅವರು ಎಲ್ಲಾ ರೀತಿಯಲ್ಲೂ ಅರ್ಹರು ಎಂದೂ ತೀರ್ಮಾನಿಸಿತ್ತು.

 ಕೇಂದ್ರದಲ್ಲಿ ಮೋದಿಯವರ ಹೊಸ ಸರಕಾರ ಸ್ಥಾಪನೆಯಾದ ಬಳಿಕ ಕಾನೂನು ಸಚಿವರಾಗಿ ಅಧಿಕಾರ ವಹಿಸಿಕೊಂಡ ರವಿಶಂಕರ ಪ್ರಸಾದ ಅವರು ತನ್ನ ಸಚಿವಾಲಯವು ‘ಅಂಚೆ ಕಚೇರಿ’ಯಾಗಿರುವುದಿಲ್ಲ ಎಂದು ಒತ್ತಿ ಹೇಳಿದ್ದರು. ಉನ್ನತ ನ್ಯಾಯಾಂಗಕ್ಕೆ ನ್ಯಾಯಾಧೀಶರ ನೇಮಕಗಳಿಗಾಗಿ ಕೊಲಿಜಿಯಂ ಶಿಫಾರಸುಗಳನ್ನು ಸಚಿವಾಲಯವು ಸ್ವೀಕರಿಸಿದ ಬಳಿಕ ಪ್ರಮುಖ ಪಾಲುದಾರನಾಗಿ ಅದು ನಿರ್ವಹಿಸುವ ಪಾತ್ರವನ್ನು ಪ್ರಸ್ತಾಪಿಸಿ ಅವರು ಈ ಹೇಳಿಕೆಯನ್ನು ನೀಡಿದ್ದರು.

ಕೊಲಿಜಿಯಮ್‌ನ ಮೊದಲ ಆಯ್ಕೆಗಳನ್ನು ತನ್ನ ಸಚಿವಾಲಯವು ಕಣ್ಣುಮುಚ್ಚಿಕೊಂಡು ಒಪ್ಪಿಕೊಳ್ಳುವುದಿಲ್ಲ ಮತ್ತು ಪ್ರತಿಯೊಂದೂ ಶಿಫಾರಸ್ಸನ್ನು ತೂಗಿ ನೋಡಲಿದೆ ಎಂಬ ಅರ್ಥವನ್ನು ಪ್ರಸಾದ್ ಅವರ ಹೇಳಿಕೆಗೆ ವ್ಯಾಖ್ಯಾನಿಸಬಹುದಾದರೆ, ಸಚಿವಾಲಯವು ತಾನು ಇಷ್ಟಪಡದ ಶಿಫಾರಸುಗಳನ್ನು ಕಸದ ಬುಟ್ಟಿಗೆ ಎಸೆಯಬಹುದು ಎಂಬ ಇಂಗಿತವೂ ಅದರಲ್ಲಿ ಅಡಗಿದ್ದಿರಬಹುದು. ಕುರೇಶಿಯವರ ಪದೋನ್ನತಿ ಶಿಫಾರಸಿನ ಕುರಿತು ಕೇಂದ್ರದ ನಿಷ್ಕ್ರಿಯತೆ ಇದನ್ನೇ ಸೂಚಿಸುತ್ತಿದೆ.

ಗುಜರಾತ್ ಉಚ್ಚ ನ್ಯಾಯಾಲಯದಿಂದ ಅತ್ಯಂತ ಹಿರಿಯ ನ್ಯಾಯಾಧೀಶರಾಗಿರುವ ಕುರೇಶಿ ಅವರ ಪದೋನ್ನತಿಗೆ ಕೊಲಿಜಿಯಂ ಮೇ 10ರಂದು ಶಿಫಾರಸು ಮಾಡಿತ್ತು. ಕುರೇಶಿ ಅವರು ಹಾಲಿ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ವರ್ಗಾವಣೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಎಸ್.ಕೆ.ಸೇಠ್ ಅವರು ಜೂ.9ರಂದು ನಿವೃತ್ತರಾಗಲಿದ್ದರಿಂದ ಅವರ ಸ್ಥಾನಕ್ಕೆ ಕುರೇಶಿಯವರನ್ನು ಪದೋನ್ನತಿಗೊಳಿಸಲು ಕೊಲಿಜಿಯಂ ಆಸಕ್ತಿ ಹೊಂದಿತ್ತು. ಸೇಠ್ ಅವರ ಉತ್ತರಾಧಿಕಾರಿಯಾಗಿ ನೇಮಕಗೊಳ್ಳಲು ಕುರೇಶಿ ಎಲ್ಲ ರೀತಿಯಿಂದಲೂ ಸೂಕ್ತರಾಗಿದ್ದಾರೆ ಎನ್ನುವುದು ಕೊಲಿಜಿಯಮ್‌ನ ಅಭಿಪ್ರಾಯವಾಗಿತ್ತು.

ಕುರೇಶಿಯವರ ಜೊತೆಗೆ ಇತರ ಮೂವರು ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರ ಪದೋನ್ನತಿಗೂ ಕೊಲಿಜಿಯಂ ಶಿಫಾರಸು ಮಾಡಿದ್ದು,ಅವುಗಳಿಗೆ ಕೇಂದ್ರ ಸರಕಾರವು ಹಸಿರು ನಿಶಾನೆ ತೋರಿಸಿದೆ. ಆದರೆ ಕುರೇಶಿಯವರ ಪದೋನ್ನತಿ ಶಿಫಾರಸು ಕಡತ ಮಾತ್ರ ಧೂಳು ತಿನ್ನುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News