ಚೋಕ್ಸಿಯನ್ನು ಆ್ಯಂಟಿಗುವಾದಿಂದ ಕರೆತರಲು ಏರ್ ಆ್ಯಂಬುಲನ್ಸ್ ಒದಗಿಸಲು ಸಿದ್ಧ:ಈ.ಡಿ.

Update: 2019-06-22 16:42 GMT

ಹೊಸದಿಲ್ಲಿ,ಜೂ.22: ದೇಶಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿಯನ್ನು ಆ್ಯಂಟಿಗುವಾದಿಂದ ಭಾರತಕ್ಕೆ ಕರೆತರಲು ಏರ್ ಆ್ಯಂಬುಲೆನ್ಸ್ ಮತ್ತು ವೈದ್ಯರ ತಂಡವೊಂದನ್ನು ಒದಗಿಸಲು ತಾನು ಸಿದ್ಧವಿರುವುದಾಗಿ ಜಾರಿ ನಿರ್ದೇಶನಾಲಯ (ಈ.ಡಿ.)ವು ಬಾಂಬೆ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

ನಿರಂತರ ಆರೋಗ್ಯ ಸಮಸ್ಯೆಗಳಿಂದಾಗಿ ತನಗೆ ಭಾರತಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡು ಚೋಕ್ಸಿ ಜೂ.17ರಂದು ನ್ಯಾಯಾಲಯದಲ್ಲಿ ಸಲ್ಲಿಸಿರುವ ಅಫಿಡವಿಟ್ ‘ಕುಂಟುನೆಪ’ವಾಗಿದೆ ಎಂದು ಈ.ಡಿ.ತಾನು ಸಲ್ಲಿಸಿರುವ ಪ್ರತಿ ಅಫಿಡವಿಟ್‌ನಲ್ಲಿ ಬಣ್ಣಿಸಿದೆ.

ಚೋಕ್ಸಿ ನೀಡಿರುವ ವೈದ್ಯಕೀಯ ಕಾರಣಗಳು ಕಾನೂನು ಕಲಾಪವನ್ನು ವಿಳಂಬಿಸುವ ಪ್ರಯತ್ನದಲ್ಲಿ ನ್ಯಾಯಾಲಯವನ್ನು ದಾರಿ ತಪ್ಪಿಸಲು ಕುಂಟುನೆಪಗಳಾಗಿವೆ. ಆತನನ್ನು ವೈದ್ಯಕೀಯ ನಿಗಾದಡಿ ಭಾರತಕ್ಕೆ ಕರೆತರಲು ಏರ್ ಆ್ಯಂಬುಲೆನ್ಸ್ ಮತ್ತು ವೈದ್ಯಕೀಯ ತಂಡವನ್ನು ಒದಗಿಸಲು ತಾನು ಸಿದ್ಧವಿರುವುದಾಗಿ ಅದು ತಿಳಿಸಿದೆ.

13,000 ಕೋ.ರೂ.ಗಳ ಪಿಎನ್‌ಬಿ ಹಗರಣದ ತನಿಖೆಗೆ ಚೋಕ್ಸಿ ಎಂದೂ ಸಹಕರಿಸಿಲಿಲ್ಲ ಎಂದೂ ಅದು ನ್ಯಾಯಾಲಯಕ್ಕೆ ತಿಳಿಸಿದೆ.

 ಚೋಕ್ಸಿ ತನ್ನ 6,129 ಕೋ.ರೂ.ಮೌಲ್ಯದ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸುಳ್ಳು ಹೇಳಿದ್ದಾನೆ. ತನಿಖೆಯ ಸಂದರ್ಭ 2,100 ಕೋ.ರೂ.ಮೌಲ್ಯದ ಆಸ್ತಿಗಳನ್ನು ಮಾತ್ರ ಈ.ಡಿ.ವಶಪಡಿಸಿಕೊಂಡಿದೆ. ಅಲ್ಲದೆ ಚೋಕ್ಸಿ ಭಾರತದಿಂದ ಪರಾರಿಯಾಗುವ ಮುನ್ನ ತನ್ನೆಲ್ಲ ಆಸ್ತಿಗಳನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದ ಎಂದೂ ಪ್ರತಿ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

 ಚೋಕ್ಸಿ ವಿರುದ್ಧ ಜಾಮೀನುರಹಿತ ವಾರಂಟ್‌ನ್ನು ಹೊರಡಿಸಲಾಗಿದೆ. ಇಂಟರ್‌ಪೋಲ್ ಕೂಡ ಆತನ ವಿರುದ್ಧ ನೋಟಿಸ್ ಹೊರಡಿಸಿದೆ. ಆತ ಭಾರತಕ್ಕೆ ಮರಳಲು ನಿರಾಕರಿಸಿದ್ದಾನೆ. ಹೀಗಾಗಿ ಆತ ದೇಶಭ್ರಷ್ಟ, ತಲೆಮರೆಸಿ ಕೊಂಡಿರುವ ಆರೋಪಿಯಾಗಿದ್ದಾನೆ ಎಂದು ಹೇಳಿರುವ ಈ.ಡಿ.,ತನಿಖೆಗೆ ಹಾಜರಾಗಲು ಆತನಿಗೆ ಹಲವಾರು ಅವಕಾಶಗಳನ್ನು ನೀಡಲಾಗಿತ್ತು,ಆದರೆ ಆತ ವಿಚಾರಣೆಯನ್ನು ತಪ್ಪಿಸಿಕೊಂಡಿದ್ದಾನೆ ಎಂದು ತಿಳಿಸಿದೆ.

ತಾನು ಆ್ಯಂಟಿಗುವಾದಲ್ಲಿ ವಾಸವಾಗಿದ್ದೇನೆ ಮತ್ತು ತನಿಖೆಗೆ ಸಹಕರಿಸಲು ಸಿದ್ಧನಿದ್ದೇನೆ. ತನಿಖಾ ಸಂಸ್ಥೆಗಳು ಆ್ಯಂಟಿಗುವಾದಲ್ಲಿ ತನ್ನ ವಿಚಾರಣೆ ನಡೆಸಲು ನಿರ್ದೇಶ ನೀಡಬೇಕು ಎಂದು ತನ್ನ ಅಫಿಡವಿಟ್‌ನಲ್ಲಿ ಕೋರಿರುವ ಚೋಕ್ಸಿ,ತಾನು ಪ್ರಯಾಣಕ್ಕೆ ವೈದ್ಯಕೀಯವಾಗಿ ಅರ್ಹನಾದ ತಕ್ಷಣ ಭಾರತಕ್ಕೆ ಮರಳುತ್ತೇನೆ ಎಂದು ತಿಳಿಸಿದ್ದಾನೆ. ಕಾನೂನು ಎದುರಿಸಲು ತನಗೆ ಹಿಂಜರಿಕೆಯಿಲ್ಲ ಹಾಗೂ ತನಿಖಾ ಸಂಸ್ಥೆಗಳ ಸಮನ್ಸ್‌ಗೆ ತಾನು ಉತ್ತರಿಸಿದ್ದೇನೆ ಎಂದೂ ಆತ ಹೇಳಿಕೊಂಡಿದ್ದಾನೆ. ಚೋಕ್ಸಿಗೆ 2015,ಜ.18ರಂದು ಆ್ಯಂಟಿಗುವಾ ಮತ್ತು ಬರ್ಬುಡಾ ಪೌರತ್ವ ಲಭಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News