ಬಿಡಿಎ: ಇ ಖಾತಾ ಪಡೆಯಲು ಆನ್‌ಲೈನ್ ಸೇವೆ ಆರಂಭ

Update: 2019-06-22 18:07 GMT

ಬೆಂಗಳೂರು, ಜೂ.22: ಬಿಡಿಎ ಇತ್ತೀಚೆಗೆ ಇ ಖಾತಾ ಸೇವೆಯನ್ನು ಆರಂಭಿಸಿದ್ದು, ನಿವೇಶನಗಳ ಮತ್ತು ಫ್ಲಾಟ್‌ಗಳ ಹೊಸ ಖಾತೆ ಹಾಗೂ ದಾನಪತ್ರ, ಮರಣ ಪ್ರಮಾಣಪತ್ರ ಅಥವಾ ಕ್ರಯಪತ್ರದ ಆಧಾರದಲ್ಲಿ ಖಾತಾ ಬದಲಾವಣೆ ಸೇವೆ ಆನ್‌ಲೈನ್‌ನಲ್ಲಿಯೇ ಲಭ್ಯವಾಗಲಿದೆ.

ಸ್ವಾಧೀನ ಪ್ರಮಾಣಪತ್ರವನ್ನು (ಪೊಸಿಷನ್ ಸರ್ಟಿಫಿಕೇಟ್) ಆನ್‌ಲೈನ್ ಮೂಲಕ ಪಡೆಯಲು 2018ರ ಅಕ್ಟೋಬರ್‌ನಿಂದಲೇ ಅವಕಾಶ ಕಲ್ಪಿಸಿದ್ದೆವು. ಖಾತಾ ಸಂಬಂಧಿ ಸೇವೆಗಳನ್ನೂ ಆನ್‌ಲೈನ್ ಮೂಲಕ ನೀಡಲು ಇತ್ತೀಚೆಗೆ ಆರಂಭಿಸಿದ್ದೇವೆ ಎಂದು ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೇವೆ ಪಡೆಯುವುದು ಹೇಗೆ: ಸರಕಾರದ ಸೇವಾ ಸಿಂಧು ಪೋರ್ಟಲ್‌ನಲ್ಲಿ ಬಿಡಿಎ ಸೇವೆಗಳನ್ನೂ ಅಳವಡಿಸಲಾಗಿದೆ. ಅದರಲ್ಲಿ ಹೆಸರನ್ನು ನೋಂದಾಯಿಸಿ ಟೋಕನ್ ಸಂಖ್ಯೆ ಪಡೆದು ಅರ್ಜಿ ಸಲ್ಲಿಸಬಹುದು. ಯಾವೆಲ್ಲ ದಾಖಲೆಗಳನ್ನು ಸಲ್ಲಿಸಬೇಕು ಎಂಬ ವಿವರಗಳು ಸೇವಾ ಸಿಂಧು ಪೋರ್ಟನಲ್ಲಿಯೇ ಇವೆ. ಅವುಗಳನ್ನೂ ಅಪ್ಲೋಡ್ ಮಾಡಿದರೆ, ಅರ್ಜಿಯು ಬಿಡಿಎ ಕಂದಾಯ ಅಧಿಕಾರಿಗಳಿಗೆ ರವಾನೆಯಾಗುತ್ತದೆ. ಅವರು ಅದನ್ನು ಸಂಬಂಧಪಟ್ಟ ಕೇಸ್ ವರ್ಕರ್‌ಗೆ (ಕಂದಾಯ ನಿರೀಕ್ಷಕರಿಗೆ) ಕಳುಹಿಸುತ್ತಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅರ್ಜಿ ಹಾಗೂ ಅದರ ಜೊತೆ ಸಲ್ಲಿಸಿರುವ ದಾಖಲೆಗಳನ್ನು ಕಂದಾಯ ನಿರೀಕ್ಷಕರು ಪರಿಶೀಲಿಸುತ್ತಾರೆ. ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ನೀಡಿರದಿದ್ದರೆ ಅಥವಾ ಅಪ್ಲೋಡ್ ಆಗಿರುವ ದಾಖಲೆ ಸರಿಯಾಗಿ ಸ್ಕಾನ್ ಆಗಿರದಿದ್ದರೆ ಅರ್ಜಿಯನ್ನು ತಿರಸ್ಕರಿಸುತ್ತಾರೆ. ಎಲ್ಲ ದಾಖಲೆಗಳೂ ಸರಿ ಇದ್ದರೆ ಅರ್ಜಿಯನ್ನು ಸೂಪರಿಂಟೆಂಡೆಂಟ್‌ಗೆ ಕಳುಹಿಸುತ್ತಾರೆ. ಅವರು ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸಿ ಅರ್ಜಿಯನ್ನು ಕಂದಾಯ ಅಧಿಕಾರಿಗೆ ಕಳುಹಿಸುತ್ತಾರೆ.

15 ದಿನಗಳ ಒಳಗೆ ಸೇವೆ: ಇಖಾತಾ ಪಡೆಯಲು ಸಕಾಲ ಯೋಜನೆ ಅಡಿ 15 ದಿನಗಳ ಗಡುವು ನಿಗದಿಪಡಿಸಲಾಗಿದೆ. ಅಷ್ಟರೊಳಗೆ ಇ ಖಾತಾ ಸಿಗದಿದ್ದರೆ ಅರ್ಜಿದಾರರು ಮೇಲ್ಮನವಿ ಸಲ್ಲಿಸಬಹುದು. ಅಧಿಕಾರಿಗಳು ವಿನಾಕಾರಣ ವಿಳಂಬ ಮಾಡಿದ್ದರೆ ಅದಕ್ಕೆ ದಂಡ ತೆರಬೇಕಾಗುತ್ತದೆ. ಸೇವೆ ವಿಳಂಬ ಆಗಿರುವ ದಿನಗಳ ಲೆಕ್ಕದಲ್ಲಿ ದಂಡವನ್ನು ಲೆಕ್ಕ ಹಾಕಲಾಗುತ್ತದೆ ಎಂದು ಬಿಡಿಎ ಅಧಿಕಾರಿಗಳು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News