ಮೆದುಳು ಜ್ವರಕ್ಕೆ ಮಕ್ಕಳ ಬಲಿ: ಬಿಹಾರ, ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್

Update: 2019-06-24 06:47 GMT

 ಹೊಸದಿಲ್ಲಿ, ಜೂ.24: ಮೆದುಳಿನ ಉರಿಯೂತದಿಂದ ಮುಝಫ್ಫರ್‌ಪುರ ಜಿಲ್ಲೆಯೊಂದರಲ್ಲೇ 120ಕ್ಕೂ ಅಧಿಕ ಮಕ್ಕಳ ಸಾವಿನ ಬಗ್ಗೆ ಆತಂಕ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್, ಬಿಹಾರ ಸರಕಾರ ಹಾಗೂ ಕೇಂದ್ರ ಸರಕಾರಕ್ಕೆ ವಿವರಣೆ ಕೋರಿ ನೋಟಿಸ್ ಜಾರಿ ಮಾಡಿದೆ.

ರಾಜ್ಯದಲ್ಲಿ ಔಷಧಿಗಳ ಲಭ್ಯತೆ ವ್ಯವಸ್ಥೆ, ಪೋಷಣೆ ಹಾಗೂ ನೈರ್ಮಲ್ಯದ ಪರಿಸ್ಥಿತಿಯ ಬಗ್ಗೆ ಏಳು ದಿನಗಳೊಳಗೆ ಉತ್ತರ ನೀಡುವಂತೆ ಜಸ್ಟಿಸ್ ಸಂಜೀವ್ ಖನ್ನಾ ಹಾಗೂ ಬಿಆರ್ ಗವಾಯ್ ಅವರಿದ್ದ ಸುಪ್ರೀಂಕೋರ್ಟ್ ನ್ಯಾಯಪೀಠ ಆದೇಶಿಸಿದೆ.

ಬಿಹಾರದ ಸರಕಾರದ ಕ್ರಮ ಸೂಕ್ತವಾಗಿಲ್ಲ. ಇದು ಮುಝಫ್ಫರ್‌ಪುರದಲ್ಲಿ ರೋಗ ಹರಡುವುದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಮೆದುಳು ಉರಿಯೂತದಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗೆ ವೈದ್ಯಕೀಯ ತಜ್ಞರ ಸಮಿತಿ ರಚನೆಗೆ ನಿರ್ದೇಶನ ನೀಡಬೇಕು ಎಂದು ಮನೋಹರ್ ಪ್ರತಾಪ್ ಹಾಗೂ ಎಸ್.ಅಜ್‌ಮನಿ ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ಪಿಐಎಲ್‌ನಲ್ಲಿ ಆಗ್ರಹಿಸಿದ್ದರು.

ನಾವು ರೋಗ ನಿಯಂತ್ರಣಕ್ಕೆ ಎಲ್ಲ ಅಗತ್ಯ ಹೆಜ್ಜೆಗಳನ್ನು ಇಟ್ಟಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಬಿಹಾರ ಸರಕಾರ ಸಮರ್ಥಿಸಿಕೊಂಡಿದೆ.

ಜೂ.1 ರ ಬಳಿಕ ರಾಜ್ಯದಲ್ಲಿ ಮೆದುಳು ಉರಿಯೂತದಿಂದ 140 ಮಕ್ಕಳು ಪ್ರಾಣ ಕಳೆದುಕೊಂಡಿವೆ. ಮುಝಫ್ಫರ್‌ಪುರ ಜಿಲ್ಲೆಯೊಂದರಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು ಸಾವನ್ನಪ್ಪಿವೆ ಎಂದು ರಾಜ್ಯದ ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆೆ.

ಇತ್ತೀಚೆಗೆ ರಾಜ್ಯಸಭೆಯಲ್ಲಿ ಸಿಪಿಐ ಸಂಸದ ಎಂಪಿ ಬಿನೊಯ್ ವಿಶ್ವಂ ಬಿಹಾರದಲ್ಲಿ ಮಕ್ಕಳ ಸಾವಿನ ವಿಚಾರದ ಬಗ್ಗೆ ಗಮನ ಸೆಳೆದಿದ್ದರು.

‘‘ ಬಿಹಾರದಲ್ಲಿ ಅಧಿಕೃತವಾಗಿ 130 ಮಕ್ಕಳು ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗಳಲ್ಲಿ ಸರಿಯಾದ ಔಷಧಿಗಳಿಲ್ಲ. ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗೆ ಸೂಕ್ತ ಮೂಲಭೂತ ಸೌಕರ್ಯವಿಲ್ಲ. ಅಪೌಷ್ಠಿಕತೆ ಹಾಗೂ ಅಸುರಕ್ಷತೆ ಮಕ್ಕಳ ಸಾವಿನ ಮುಖ್ಯ ಕಾರಣ. ಪ್ರತಿ ವರ್ಷ ಅಪೌಷ್ಠಿಕತೆಯಿಂದ 24 ಲಕ್ಷ ಮಕ್ಕಳು ಸಾಯುತ್ತಿವೆ. ದೇಶದ ಆರೋಗ್ಯ ವ್ಯವಸ್ಥೆ, ವೈದ್ಯಕೀಯ ಮೂಲಭೂತ ಸೌಲಭ್ಯ ಹಾಗೂ ಸಂತೃಸ್ತ ಕುಟುಂಬಕ್ಕೆ ಸಾಕಷ್ಟು ಪರಿಹಾರ ಪಾವತಿಯಲ್ಲಿ ತುರ್ತು ಪ್ರಗತಿಯಾಗಬೇಕಾಗಿದೆ’’ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News