ಬರ-ಮಳೆ ಕೊರತೆ: ಸಮರೋಪಾದಿ ಪರಿಹಾರ ಕಾಮಗಾರಿಗೆ ಮುಖ್ಯ ಕಾರ್ಯದರ್ಶಿ ಸೂಚನೆ

Update: 2019-06-24 12:40 GMT

ಬೆಂಗಳೂರು, ಜೂ. 24: ಬರ ಪರಿಸ್ಥಿತಿ ಹಾಗೂ ತೀವ್ರ ಸ್ವರೂಪದ ಮಳೆ ಕೊರತೆ ಹಿನ್ನೆಲೆಯಲ್ಲಿ ಸಮರೋಪಾದಿಯಲ್ಲಿ ಪರಿಹಾರ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್, ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸೋಮವಾರ ವಿಧಾನಸೌಧದ ಮೂರನೆ ಮಹಡಿಯಲ್ಲಿನ ಸಮಿತಿ ಕೊಠಡಿಯಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫ್‌ರೆನ್ಸ್ ನಡೆಸಿದ ಮುಖ್ಯ ಕಾರ್ಯದರ್ಶಿ, ರಾಜ್ಯದಲ್ಲಿ ಸತತ ಬರ ಪರಿಸ್ಥಿತಿ ಇದ್ದು, ನಿರೀಕ್ಷಿತ ಮುಂಗಾರು ಮಳೆಯೂ ಕೈಕೊಟ್ಟಿದೆ. ಕೆಲ ಪ್ರದೇಶಗಳಲ್ಲಿ ಅತಿವೃಷ್ಟಿಯಿಂದ ಹಾನಿ ಸಂಭವಿಸಿದೆ. ಆದುದರಿಂದ ಈ ಸಮಸ್ಯೆಗಳನ್ನು ಎದುರಿಸಲು ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಜನ ಜೀವನ ಅಸ್ತವ್ಯಸ್ತವಾಗದಂತೆ ಜನ, ಜಾನುವಾರುಗಳ ಹಿತ ರಕ್ಷಣೆಗೆ ಕ್ರಮ ವಹಿಸಬೇಕು ಎಂದು ವಿಜಯ್ ಭಾಸ್ಕರ್ ಸೂಚಿಸಿದರು.

ಬರ, ನೆರೆ ನಿರ್ವಹಣೆ ಸಂಬಂಧ ಸರಕಾರದ ಮಾರ್ಗಸೂಚಿ ಅನ್ವಯ ಕ್ರಮ ಕೈಗೊಳ್ಳಬೇಕು. ಸೂಚಿಸಿರುವ ಎಲ್ಲ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿ ಸರಿಪಡಿಸಲು ಜಿಲ್ಲಾಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕೆಂದು ನಿರ್ದೇಶನ ನೀಡಿದರು.

ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ಮೂಲಕ ಜನರ ಬಳಿಗೆ ಹೊರಟಿದ್ದಾರೆ. ಇದನ್ನು ಕೇವಲ ಒಂದು ಕಾರ್ಯಕ್ರಮ ಎಂದು ನೋಡಿ ಸುಮ್ಮನಾಗದೆ ಜನರ ಸಮಸ್ಯೆಗಳನ್ನು ಆಲಿಸಲು ಮುಖ್ಯಮಂತ್ರಿಯೇ ಬರಬೇಕೆಂಬ ಜನರಲ್ಲಿ ಭಾವನೆಗಳನ್ನು ಹೋಗಲಾಡಿಸಿ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News