ಪೊಲೀಸರ ಮೇಲೆ ಹಲ್ಲೆ: ಗುಂಡಿಕ್ಕಿ ಆರೋಪಿಯ ಬಂಧನ

Update: 2019-06-24 13:04 GMT

ಬೆಂಗಳೂರು, ಜೂ.24: ಪೊಲೀಸ್ ಸಿಬ್ಬಂದಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಆರೋಪದಡಿ ಯುವಕನೊಬ್ಬನ ಕಾಲಿಗೆ ಪಿಸ್ತೂಲಿನಿಂದ ಗುಂಡು ಹಾರಿಸಿ ಇಲ್ಲಿನ ಬ್ಯಾಟರಾಯನಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ನಗರದ ಮೂಡಲಪಾಳ್ಯದ ನಿವಾಸಿ ರಾಹುಲ್ ಯಾನೆ ಗೋವಿಂದ(21) ಗಾಯಗೊಂಡಿರುವ ಆರೋಪಿ ಎಂದು ತಿಳಿದುಬಂದಿದೆ.

ಆರೋಪಿ ರಾಹುಲ್ ಮೇಲೆ ಒಟ್ಟು 9 ಪ್ರಕರಣಗಳು ದಾಖಲಾಗಿದ್ದು, ಈತನ ಬಂಧನಕ್ಕೆ ಚಾಮರಾಜಪೇಟೆ ಠಾಣೆ ಇನ್‌ಸ್ಪೆಕ್ಟರ್ ಅವರನ್ನೊಳಗೊಂಡ ತನಿಖಾ ತಂಡ ಹಾಗೂ ಬ್ಯಾಟರಾಯನಪುರ ಠಾಣೆ ಇನ್‌ಸ್ಪೆಕ್ಟರ್ ವೀರೇಂದ್ರ ಪ್ರಸಾದ್ ನೇತೃತ್ವದಲ್ಲಿ ಮತ್ತೊಂದು ತಂಡವನ್ನು ರಚಿಸಲಾಗಿತ್ತು. ಸೋಮವಾರ ಬೆಳಗ್ಗೆ ಆರೋಪಿ ರಾಹುಲ್ ಜ್ಞಾನಭಾರತಿ ಠಾಣೆ ವ್ಯಾಪ್ತಿಯ ಚಿಕ್ಕಬಸ್ತಿ ಸಮೀಪದ ರಾಮಸಂದ್ರರಸ್ತೆಯ ನಿರ್ಮಾಣ ಹಂತದ ಮನೆಯ ಬಳಿ ಇರುವ ಬಗ್ಗೆ ಬ್ಯಾಟರಾಯನಪುರ ಠಾಣೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಬಳಿಕ ಇನ್‌ಸ್ಪೆಕ್ಟರ್ ವೀರೇಂದ್ರ ಪ್ರಸಾದ್ ಅವರು ಪೇದೆ ಪ್ರಕಾಶ್, ಇತರ ಸಿಬ್ಬಂದಿಯೊಂದಿಗೆ ರಾಹುಲ್ನನ್ನು ಬಂಧಿಸಲು ಸ್ಥಳಕ್ಕೆ ತೆರಳಿದ್ದಾರೆ. ಈ ವೇಳೆ, ರಾಹುಲ್ ಏಕಾಏಕಿ ಪೇದೆ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ.

ಇನ್‌ಸ್ಪೆಕ್ಟರ್ ವೀರೇಂದ್ರ ಪ್ರಸಾದ್ ಅವರು ಶರಣಾಗುವಂತೆ ಸೂಚಿಸಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಅವರ ಎಚ್ಚರಿಕೆಯನ್ನೂ ಲೆಕ್ಕಿಸದೆ ಮತ್ತೆ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ರಾಹುಲ್ ಎಡಗಾಲಿಗೆ ತಗುಲಿ ಕುಸಿದುಬಿದ್ದಿದ್ದಾನೆ. ಬಳಿಕ, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.

ಘಟನೆಯಲ್ಲಿ ಪೇದೆ ಪ್ರಕಾಶ್ ಅವರಿಗೂ ಗಾಯಗಳಾಗಿದ್ದು, ಅವರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News