ಮುಖ್ಯಮಂತ್ರಿ ಕುಮಾರಸ್ವಾಮಿಗೆ ಬಿಜೆಪಿಯ 10 ಪ್ರಶ್ನೆಗಳು

Update: 2019-06-24 13:24 GMT

ಬೆಂಗಳೂರು, ಜೂ.24: ವಾಸ್ತವವಾಗಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದು, ಮೈತ್ರಿ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಸೋಮವಾರ ನಗರದ ಮಲ್ಲೇಶ್ವರಂನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹಿಂದಿನ ಗ್ರಾಮ ವಾಸ್ತವ್ಯದ ವೈಫಲ್ಯಗಳ ಮಾಹಿತಿಯುಳ್ಳ ಕಿರು ಹೊತ್ತಿಗೆ ‘ಹಿಂದೆ, ಈವರೆಗೆ, ಈಗ’ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇಟ್ಟುಕೊಂಡಿದ್ದು, ಇದಕ್ಕಾಗಿಯೇ ಮೈತ್ರಿ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಆದರೆ, ಅವರು ವಿನಾಕಾರಣ ಬಿಜೆಪಿ ಮೇಲೆ ಆರೋಪ ಮಾಡುವುದನ್ನು ನಿಲ್ಲಿಸಬೇಕೆಂದು ಹೇಳಿದರು. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರ ರಚನೆ ಮಾಡಿದ್ದ ವೇಳೆ 20 ತಿಂಗಳು ನಮ್ಮ ಜತೆ ಸೇರಿ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡಿದ್ದರು. ಆ ಗ್ರಾಮಗಳು ಈಗಲೂ ಸಹ ಪ್ರಗತಿ ಕಂಡಿಲ್ಲ. ಕನಿಷ್ಠ ಮೂಲಭೂತ ಸೌಕರ್ಯಗಳೂ ಆ ಗ್ರಾಮಗಳಿಗೆ ತಲುಪಲಿಲ್ಲ. ಈಗ ಯಾವ ಪುರುಷಾರ್ಥಕ್ಕೆ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡುವಿರಿ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಎನ್.ರವಿಕುಮಾರ್, ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್, ಮಾಜಿ ಸಚಿವ ಡಾ.ಎ.ಬಿ.ಮಾಲಕರೆಡ್ಡಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಮುಖ್ಯಮಂತ್ರಿಯಾಗುವ ಆಸೆ ಇಲ್ಲ

ನಾನು ಮುಖ್ಯಮಂತ್ರಿಯಾಗಬೇಕೆಂಬ ಕನಸು ಕಂಡಿಲ್ಲ. ಆದರೆ, ಸಿದ್ದರಾಮಯ್ಯನವರಿಗೆ ನನ್ನ ಬಗ್ಗೆ ಏಕೆ ಇಂತಹ ಕನಸು ಬಿದ್ದಿದೆಯೋ ಗೊತ್ತಿಲ್ಲ. ಮೊದಲು ಅವರು ಮತ್ತೆ ಮುಖ್ಯಮಂತ್ರಿಯಾಗಬೇಕೆಂಬ ಕನಸು ಬಿಟ್ಟುಬಿಡಲಿ ಎಂದು ಬಿ.ಎಸ್.ಯಡಿಯೂರಪ್ಪ ನುಡಿದರು.

ಮುಖ್ಯಮಂತ್ರಿಗೆ ಬಿಜೆಪಿಯ 10 ಪ್ರಶ್ನೆಗಳು

ಬಿಜೆಪಿ ಹೊರತಂದಿರುವ ಒಟ್ಟು 23 ಪುಟಗಳ ಕಿರುಹೊತ್ತಿಗೆಯಲ್ಲಿ ಈ ಹಿಂದೆ ಕುಮಾರಸ್ವಾಮಿ ಅವರು ಕೈಗೊಂಡ ಗ್ರಾಮ ವಾಸ್ತವ್ಯದ ಗ್ರಾಮಗಳ ಸ್ಥಿತಿಗತಿ, ಮೂಲಸೌಕರ್ಯಗಳ ವಿವರ ಇದೆ. ಜೊತೆಗೆ, ಬಿಜೆಪಿ ನಾಯಕರು, ಕುಮಾರಸ್ವಾಮಿ ಅವರಿಗೆ ಹತ್ತು ಪ್ರಶ್ನೆಗಳನ್ನು ಮುಂದಿಟ್ಟಿದ್ದು, ಇದಕ್ಕೆ ಉತ್ತರಿಸಿ ಎಂದು ಸವಾಲು ಹಾಕಿದ್ದಾರೆ.

* ರೈತರ 48 ಸಾವಿರ ಕೋಟಿ ಸಾಲ ಮನ್ನಾ 24 ಗಂಟೆಗಳಲ್ಲಿ ಮಾಡುತ್ತೇನೆ ಎಂದು ಹೇಳಿದ್ದ ನೀವು, 13 ತಿಂಗಳಾದರೂ ರೈತರ ಸಾಲ ಮನ್ನಾ ಮಾಡಲಿಲ್ಲ ಏಕೆ? ಜತೆಗೆ ಹೊಸ ಸಾಲ ನೀಡಿಲ್ಲ ಏಕೆ?

* 13 ತಿಂಗಳು ಖಾಸಗಿ ಹೊಟೇಲ್ ನಲ್ಲಿ ವಿಲಾಸಿ ಆಡಳಿತ ನಡೆಸುವಾಗಲೇ 1500 ರೈತರು ಆತ್ಮಹತ್ಯೆಗೆ ಶರಣಾಗಿದ್ದು, ಇದಕ್ಕೆ ನಿಮ್ಮ ಬಳಿ ಉತ್ತರ ಇದೆಯೇ?

* ರಾಜ್ಯ ವ್ಯಾಪ್ತಿ ಬರದ ಛಾಯೆಯಿಂದ ಜನರಿಗೆ ಕುಡಿಯುವ ನೀರು ಸಿಗುತ್ತಿಲ್ಲ. ದನಕರುಗಳು, ಪಶು-ಪಕ್ಷಿಗಳಿಗೆ ಮೇವು ಇಲ್ಲ. ಇಂತಹ ಸಮಯದಲ್ಲಿ ಗ್ರಾಮ ವಾಸ್ತವ್ಯದ ನಾಟಕ ಸರಿಯೇ?

* ಐಎಂಎ ಹಗರಣದಲ್ಲಿ ಆರು ಸಾವಿರ ಕೋಟಿ ಅಲ್ಪಸಂಖ್ಯಾತ ಬಡಜನರ ಹಣದೊಂದಿಗೆ ಪರಾರಿಯಾದ ಮುನ್ಸೂರ್ ಖಾನ್ ಜತೆ ಬಿರಿಯಾನಿ ಊಟ ಮಾಡಿದ ನೀವು ಈ ಹಗರಣವನ್ನು ಸಿಬಿಐಗೆ ನೀಡದೆ, ಮೌನವಾಗಿರುವುದೇಕೆ? ನಿಮ್ಮ ಶಾಸಕರಾದ ಝಮೀರ್ ಅಹ್ಮದ್, ರೋಷನ್ ಬೇಗ್ ವಿರುದ್ಧ ಕ್ರಮ ಜರುಗಿಸುವ ಧೈರ್ಯವಿದೆಯೇ?

* ಬಳ್ಳಾರಿ ಜಿಲ್ಲೆಯ ಜಿಂದಾಲ್ ಕಂಪೆನಿಗೆ 3,667 ಎಕರೆ ಜಮೀನನ್ನು ಕೇವಲ 1.22 ಲಕ್ಷ ರೂ.ಗೆ ಒಂದು ಎಕರೆಯಂತೆ ಅತಿ ಕನಿಷ್ಠ ಬೆಲೆಗೆ ಮಾರಾಟ ಮಾಡಲು ನೀವು ಪಡೆದಿರುವ ಕಿಕ್‌ಬ್ಯಾಕ್ ಎಷ್ಟು?

* ದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ ಪ್ರಗತಿಯಾಗಿರುವ ಈ ದಿನಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿಯೇ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದು ಗ್ರಾಮ-ಡ್ರಾಮಾ ಏಕೆ? ಇದು ಪ್ರಚಾರದ ಗಿಮಿಕ್ ಅಲ್ಲವೆ? ಹಿಂದಿನ ಗ್ರಾಮ ವಾಸ್ತವ್ಯ ಸಾಧನೆಯ ಶ್ವೇತ ಪತ್ರ ನೀಡುವಿರಾ?

* ಮುಖ್ಯಮಂತ್ರಿಗಳೇ ದಿಕ್ಕು ತಪ್ಪಿದ ಆಡಳಿತ ಮತ್ತು ದಿನನಿತ್ಯ ನಿಮ್ಮ ಮೈತ್ರಿ ಪಕ್ಷಗಳ ಬೀದಿ ಜಗಳದಿಂದ ಕಂಗೆಟ್ಟಿರುವ ರಾಜ್ಯದ ಜನರಿಗೆ ಮುಕ್ತಿ ಯಾವಾಗ?

* ರಾಜ್ಯದಲ್ಲಿ ಸಾವಿರಾರು ಶಾಲಾ ಕಾಲೇಜುಗಳ ಸುಣ್ಣಬಣ್ಣ ಬಳಿಯಲು, ಶೌಚಾಲಯಗಳಿಗೆ ಹಣವಿಲ್ಲ. ವಿವಿಗಳಿಗೆ ಹಣಕಾಸು ನೆರವು ನೀಡುತ್ತಿಲ್ಲ. 40  ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ನಾಲ್ಕು ತಿಂಗಳಿನಿಂದ ಶಿಕ್ಷಕರಿಗೆ, ವೈದ್ಯರಿಗೆ ವೇತನ ಕೊಡುತ್ತಿಲ್ಲ. ಸಮವಸ್ತ್ರ, ಬೈಸಿಕಲ್, ಶೂ ಸಿಕ್ಕಿಲ್ಲ. ಈಗ ಶಾಲಾ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂಬ ಜ್ಞಾನೋದಯ ಸ್ಟಾರ್ ಹೊಟೇಲ್ ನಲ್ಲಿ ಆಯಿತೆ?

* ನಿಮ್ಮ ಕನಸಿನ ಬಜೆಟ್ ಕೆಲವೇ ಬೆರಳೆಣಿಕೆಯ ಜಿಲ್ಲೆಗಳಿಗೆ ಸೀಮಿತವಾಗಿ, ಈಗ ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಿವೆ ಎಂದು ಗ್ರಾಮ ವಾಸ್ತವ್ಯ ಮಾಡುವ ನೀವು ಬಜೆಟ್‌ನಲ್ಲಿ ಎಷ್ಟು ಹಣವಿಟ್ಟಿದ್ದೀರಿ. ಸರಕಾರದಲ್ಲಿ ನಿಮ್ಮ ಘೋಷಣೆಗಳನ್ನು ಪೂರ್ತಿ ಮಾಡಲು ಹಣ ಎಲ್ಲಿಂದ ತರುತೀರಿ?

* ಕಾಂಗ್ರೆಸ್-ಜೆಡಿಎಸ್‌ನ ಸಮ್ಮಿಶ್ರ ಸರಕಾರದ ನಾಯಕರ ನಡುವಿನ ಬೀದಿ ಜಗಳವನ್ನು ಟಿವಿ, ಪತ್ರಿಕೆಗಳಲ್ಲಿ ನೋಡಿ ಜನರು ಶಾಪ ಹಾಕುತ್ತಿದ್ದಾರೆ. ಸರಕಾರದ ಇಲಾಖೆಗಳಲ್ಲಿ ಹಗಲು ಲೂಟಿ ಹೆಚ್ಚು ನಡೆಯುತ್ತಿದೆ. ಆದರೂ, ಸಿಎಂ ಅವರೇ ರಾಜ್ಯದ ಅಭಿವೃದ್ಧಿ ಮಾಡುತ್ತೇನೆ ಎಂದು ಭಾಷಣ ಬಿಗಿಯುತ್ತೀರಿ. ಇಂತಹ ಭ್ರಮೆಗೆ ಮುಕ್ತಿ ಯಾವಾಗ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News