ಮಹಾರಾಷ್ಟ್ರ ಸಿಎಂ ಫಡ್ನವೀಸ್ ಬಂಗಲೆಯ 7.44 ಲಕ್ಷ ರೂ. ನೀರಿನ ಬಿಲ್ ಬಾಕಿ!

Update: 2019-06-24 13:53 GMT

ಮುಂಬೈ, ಜೂ.24: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಅಧಿಕೃತ ನಿವಾಸ ವರ್ಷಾ ದ 7,44,981ರೂ. ನೀರಿನ ಬಿಲ್ ಪಾವತಿಸದೆ ಬಾಕಿಯುಳಿದಿದೆ ಎಂದು ಬೃಹನ್ಮುಂಬೈ ಮುನಿಸಿಪಲ್ ಕಾರ್ಪೊರೇಶನ್ ಘೋಷಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

 ಹಕ್ಕುಗಳ ಹೋರಾಟಗಾರ ಶಕೀಲ್ ಅಹ್ಮದ್ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಬಿಎಂಸಿ, ಮಹಾರಾಷ್ಟ್ರ ಸಂಪುಟದ 17 ಸಚಿವರು ಕಳೆದ ಕೆಲವು ವರ್ಷಗಳಿಂದ ನೀರಿನ ಬಿಲ್ ಪಾವತಿಸದೆ ಬಾಕಿಯುಳಿಸಿದ್ದಾರೆ ಎಂದು ತಿಳಿಸಿದೆ. ಈ ಪೈಕಿ, ವಿತ್ತ ಸಚಿವ ಸುಧೀರ್ ಮುಂಗಂತಿವಾರ್ 4,45,055ರೂ. ಬಾಕಿಯುಳಿಸಿದ್ದರೆ ಸಾರಿಗೆ ಸಚಿವ ದಿವಾಕರ್ ರಾವ್ತೆ 1,61,719ರೂ. ಮತ್ತು ಪಂಕಜಾ ಮುಂಡೆ 35,033ರೂ. ನೀರಿನ ಬಿಲ್ ಪಾವತಿಸದೆ ಬಾಕಿಯುಳಿಸಿದ್ದಾರೆ ಎಂದು ವರದಿ ತಿಳಿಸಿದೆ.

 ರಾಜ್ಯದ ಮುಖ್ಯಮಂತ್ರಿ ಮತ್ತು ಸಚಿವರೇ ಸಮಯಕ್ಕೆ ಸರಿಯಾಗಿ ಬಿಲ್‌ಗಳನ್ನು ಪಾವತಿಸದೆ ಇದ್ದರೆ ಸಾಮಾನ್ಯ ಜನರಿಂದ ನಾವು ಏನನ್ನು ನಿರೀಕ್ಷಿಸಬಹುದು ಎಂದು ಶಕೀಲ್ ಪ್ರಶ್ನಿಸಿದ್ದಾರೆ. ಜನಸಾಮಾನ್ಯರು ನೀರಿನ ಬಿಲ್ ಪಾವತಿಸದೆ ಇದ್ದರೆ ಅವರ ನೀರಿನ ಸಂಪರ್ಕವನ್ನು ಕಡಿಯಲಾಗುತ್ತದೆ. ಅದೇ ಮಾನದಂಡವನ್ನು ಮುಖ್ಯಮಂತ್ರಿಯೂ ಸೇರಿ ಎಲ್ಲರಿಗೂ ಅನುಸರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News