15ನೇ ಹಣಕಾಸು ಆಯೋಗದಿಂದ ರಾಜ್ಯದ ಪ್ರತಿನಿಧಿಗಳ ಭೇಟಿ

Update: 2019-06-24 16:35 GMT

ಬೆಂಗಳೂರು, ಜೂ.24: ಎನ್.ಕೆ.ಸಿಂಗ್ ನೇತೃತ್ವದ 15ನೇ ಹಣಕಾಸು ಆಯೋಗ ಮತ್ತು ಅದರ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು ಇಂದು ನಗರದಲ್ಲಿ ರಾಜ್ಯದ ಪಂಚಾಯತ್ ರಾಜ್ ಸಂಸ್ಥೆ (ಪಿಆರ್‌ಐಗಳು)ಗಳ ಪ್ರತಿನಿಧಿಗಳನ್ನು ಭೇಟಿ ಮಾಡಿದರು.

ಸಂವಿಧಾನದ 11 ನೇ ಪರಿಚ್ಛೇದದಲ್ಲಿ ರೂಪಿಸಲಾಗಿರುವ ಪಿಆರ್‌ಐಗಳ ಎಲ್ಲ 29 ಕಾರ್ಯಗಳನ್ನು ಕರ್ನಾಟಕದ ಪಿಆರ್‌ಐಗಳಿಗೆ ಹಂಚಲಾಗಿದೆ ಮತ್ತು ರಾಜ್ಯ ಸರಕಾರ 4ನೇ ರಾಜ್ಯ ಹಣಕಾಸು ಆಯೋಗ(2018-19 ರಿಂದ 2022-23)ದ ಶಿಫಾರಸಿನಂತೆ ಹಣವನ್ನು ಬಿಡುಗಡೆ ಮಾಡುತ್ತಿದೆ ಎಂದು ಆಯೋಗಕ್ಕೆ ತಿಳಿಸಲಾಯಿತು.

ಕರ್ನಾಟಕದಲ್ಲಿ ಒಟ್ಟು 6228 ಪಿಆರ್‌ಐಗಳು ಇದ್ದು, ಈ ಪೈಕಿ 30 ಜಿಲ್ಲಾ ಪಂಚಾಯತ್ ಗಳು, 177 ತಾಲೂಕು ಪಂಚಾಯತ್ ಗಳು ಮತ್ತು 6021 ಗ್ರಾಮ ಪಂಚಾಯತ್ ಗಳಿವೆ.

4ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ, ಸ್ಥಳೀಯ ಸಂಸ್ಥೆಗಳಿಗೆ ನೀಡಲಾಗುವ ಸಾಲಯೇತರ ನಿವ್ವಳ ಸ್ವಂತ ಆದಾಯ ಹಂಚಿಕೆಯನ್ನು 2018-2019ರಿಂದ 2022-23ರ ಅವಧಿಯಲ್ಲಿ ಶೇ.42ರಿಂದ ಶೇ. 48ಕ್ಕೆ ಏರಿಕೆ ಮಾಡಲಾಗಿದೆ.

ಶೇ.1 ರಷ್ಟನ್ನು ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಗೆ ಹಂಚಿಕೆ ಮಾಡಿ ಶೇ.47ರಷ್ಟನ್ನು ಪಿಆರ್‌ಐಗಳಿಗೆ ಮತ್ತು ಯುಎಲ್ಬಿಗಳಿಗೆ 75:25 ಅನುಪಾತದಲ್ಲಿ ಹಂಚಿಕೆ ಮಾಡಬೇಕು. ಕೇಂದ್ರೀಯ ಎಫ್‌ಸಿ ಅನುದಾನವನ್ನು ರಾಜ್ಯದ ಹಂಚಿಕೆಯ ಭಾಗವಾಗಿ ಸೇರಿಸಬಾರದು.

14ನೇ ಹಣಕಾಸು ಆಯೋಗವು 2015-20ರ ಅವಧಿಗೆ 8,359.79 ಕೋಟಿ ರೂಪಾಯಿಗಳನ್ನು ರಾಜ್ಯಕ್ಕೆ ಮೂಲ ಅನುದಾನ(ಒಟ್ಟು ಅನುದಾನದ ಶೇ.4.64ರಷ್ಟು)ವಾಗಿ ಮತ್ತು 928.87 ಕೋಟಿ ರೂಪಾಯಿಗಳನ್ನು ಕಾರ್ಯಕ್ಷಮತೆ ಅನುದಾನವಾಗಿ (ಒಟ್ಟು ಅನುದಾನದ ಶೇ.4.64ರಷ್ಟು) ಹಂಚಿಕೆ ಮಾಡಲು ಶಿಫಾರಸು ಮಾಡಿದೆ.

ಆಯೋಗ ಗಮನ ಹರಿಸಿದ ಅಂಶಗಳು: ಅನುಕ್ರಮವಾಗಿ 2015-16 ರಿಂದ 2018-19ರವರೆಗೆ, ಮತ್ತು 2016-17 ರಿಂದ 2017-18ರವರೆಗೆ ಪಿಆರ್‌ಐ ಗಳಿಗೆ ಮೂಲ ಮತ್ತು ಕಾರ್ಯಕ್ಷಮತೆ ಅನುದಾನ ಬಿಡುಗಡೆ ಮಾಡುವಾಗ ಚಿಕ್ಕಪುಟ್ಟ ಕೊರತೆ ಕಂಡುಬಂದಿದೆ. 2018-19ರಲ್ಲಿ ಪಿಆರ್‌ಐಗಳಿಗೆ ಯಾವುದೇ ಕಾರ್ಯಕ್ಷಮತೆ ಅನುದಾನ ಬಿಡಗಡೆ ಮಾಡಿಲ್ಲ.

ಎಸ್‌ಎಫ್‌ಸಿಗಳನ್ನು ಕಾಲಮಿತಿಯ ಆಧಾರದ ಮೇಲೆ ರಚನೆ ಮಾಡಿಲ್ಲ. 4ನೇ ಎಸ್‌ಎಫ್‌ಸಿಯನ್ನು ಇಷ್ಟು ಹೊತ್ತಿಗಾಗಲೇ ರಚನೆ ಮಾಡಬೇಕಾಗಿತ್ತು. 4ನೇ ಎಸ್‌ಎಫ್‌ಸಿಯ ಶಿಫಾರಸುಗಳ ನಂತರವೂ ರಾಜ್ಯ ಸರಕಾರ ಕೇಂದ್ರೀಯ ಎಫ್‌ಸಿ ಅನುದಾನವನ್ನು ರಾಜ್ಯ ಹಂಚಿಕೆಯ ಭಾಗವಾಗಿ ಸೇರ್ಪಡೆ ಮಾಡಿದೆ.

14ನೆ ಹಣಕಾಸು ಆಯೋಗ ಗ್ರಾಮ ಪಂಚಾಯತ್ ಗಳಿಗೆ ಮಾತ್ರವೇ ಅನುದಾನ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ, 15ನೇ ಹಣಕಾಸು ಆಯೋಗ, ಈಗ ರಾಜ್ಯದ 3 ಹಂತದ ಪಿಆರ್‌ಐಗಳ ಪೈಕಿ ಗ್ರಾಮ ಪಂಚಾಯತ್ ಗಳಿಗೆ ಮಾತ್ರವೇ ಅನುದಾನಕ್ಕೆ ಶಿಫಾರಸು ಮಾಡಬೇಕೆ ಎಂಬ ಬಗ್ಗೆ ಚಿಂತಿಸಬೇಕಾಗಿದೆ.

ಸಭೆಯಲ್ಲಿ ಪಿಆರ್‌ಐಗಳ ಪ್ರತಿನಿಧಿಗಳಾದ ಪಂಚಾಯತ್‌ರಾಜ್ ಪರಿಷತ್ ಸದಸ್ಯ ಸಿ.ನಾರಾಯಣಸ್ವಾಮಿ, ರಾಜ್ಯ ವಿಕೇಂದ್ರೀಕೃತ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ವಿ.ವೈ.ಘೋರ್ಪಡೆ, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮಂಜುನಾಥ್, ರಾಣೆಬೆನ್ನೂರು ತಾಲೂಕು ಪಂಚಾಯತ್ ಅಧ್ಯಕ್ಷ ನೀಲಕಂಠಪ್ಪಎಂ. ಕುಸಗುರ, ಸೋಮವಾರಪೇಟೆ ತಾಲೂಕು ಪಂಚಾಯತ್ ಅಧ್ಯಕ್ಷೆ ಪುಷ್ಪಾ ರಾಜೇಶ್.

ರಾಜ್ಯ ಗ್ರಾಮ ಪಂಚಾಯತ್ ಸದಸ್ಯರ ಒಕ್ಕೂಟದ ಅಧ್ಯಕ್ಷ ಹಾಗೂ ಗುಬ್ಬಿ ತಾಲೂಕು ಗ್ರಾಮ ಪಂಚಾಯತ್ ಸದಸ್ಯ ಕೆ.ಎಸ್.ಸತೀಶ್, ವಿರಾಜಪೇಟೆ ತಾಲೂಕಿನ ಪಲಿಬೆಟ್ಟ ಗ್ರಾಮ ಪಂಚಾಯತ್ ಅಧ್ಯಕ್ಷ ಪಿ.ಪಿ.ಬೋಪಣ್ಣ ಮತ್ತು ಬೆಂಗಳೂರು ಉತ್ತರ ದೊಡ್ಡ ಜಾಲ ಗ್ರಾಮ ಪಂಚಾಯತ್ ಅಧ್ಯಕ್ಷ ಎಸ್.ಕೆ.ಮಹೇಶ್ ಕುಮಾರ್ ಪಾಲ್ಗೊಂಡಿದ್ದರು.

ಪಿಆರ್‌ಐನ ಪ್ರತಿನಿಧಿಗಳು ವ್ಯಕ್ತಪಡಿಸಿದ ಎಲ್ಲ ಕಳಕಳಿಯನ್ನು ಆಯೋಗ ಪರಿಗಣನೆಗೆ ತೆಗೆದುಕೊಂಡಿದ್ದು, ಕೇಂದ್ರ ಸರಕಾರಕ್ಕೆ ನೀಡುವ ತನ್ನ ಶಿಫಾರಸಿನಲ್ಲಿ ಆ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News