​ವಿದೇಶಗಳಲ್ಲಿ ಬಚ್ಚಿಟ್ಟಿರುವ ಭಾರತೀಯರ ಹಣ ಎಷ್ಟು ಗೊತ್ತೇ?

Update: 2019-06-25 03:35 GMT

ಹೊಸದಿಲ್ಲಿ, ಜೂ.25: ಭಾರತೀಯರು ವಿದೇಶಗಳಲ್ಲಿ ಬಚ್ಚಿಟ್ಟಿರುವ ಹಣ 2010ರ ವೇಳೆಗೆ 490 ಶತಕೋಟಿ ಡಾಲರ್‌ನಷ್ಟಿದೆ ಎಂದು ಎನ್‌ಐಪಿಎಫ್‌ಪಿ, ಎನ್‌ಸಿಎಇಆರ್ ಮತ್ತು ಎನ್‌ಐಎಫ್‌ಎಂ ನಡೆಸಿದ ಅಧ್ಯಯನ ವರದಿ ಬಹಿರಂಗಪಡಿಸಿದೆ. ಇದು ದೇಶಗಳಲ್ಲಿ ರಿಯಲ್ ಎಸ್ಟೇಟ್, ಗಣಿಗಾರಿಕೆ, ತಂಬಾಕು/ ಗುಟ್ಕಾ, ಚಿನ್ನ, ಚಲನಚಿತ್ರ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹೂಡಿಕೆ ಎಂದು ಬಿಂಬಿಸಲಾದ ಕಪ್ಪುಹಣದಿಂದ ಹೊರತಾಗಿದೆ ಎಂದು ವರದಿ ಸ್ಪಷ್ಟಪಡಿಸಿದೆ.

ಹಣಕಾಸು ಸ್ಥಾಯಿ ಸಮಿತಿ ವರದಿಯನ್ನು ಸೋಮವಾರ ಲೋಕಸಭೆಯಲ್ಲಿ ಭಾಗಶಃ ಪ್ರಕಟಿಸಲಾಗಿದೆ. ಭಾರತದಲ್ಲಿ ಹಾಗೂ ವಿದೇಶಗಳಲ್ಲಿ ಭಾರತೀಯರು ಹೊಂದಿರುವ ಕಪ್ಪುಹಣವನ್ನು ಅಂದಾಜಿಸಲು ನಡೆದಿರುವ ಮೊಟ್ಟಮೊದಲ ಸರ್ಕಾರಿ ಪ್ರಾಯೋಜಿತ ಅಧ್ಯಯನ ಇದಾಗಿದೆ. ಯುಪಿಎ ಸರ್ಕಾರದ ಕೋರಿಕೆಯಂತೆ ಕಪ್ಪುಹಣದ ಬಗ್ಗೆ ಈ ಮೂರು ಪ್ರಮುಖ ಸಂಸ್ಥೆಗಳು ಅಂದಾಜು ಸಿದ್ಧಪಡಿಸಿವೆ.

ಯುಪಿಎ ಆಡಳಿತಾವಧಿಯಲ್ಲೇ ವರದಿ ಸಲ್ಲಿಕೆಯಾಗಿದ್ದರೂ, ಇದುವರೆಗೆ ವರದಿಯನ್ನು ಬಹಿರಂಗಪಡಿಸಿರಲಿಲ್ಲ. ಸಾರ್ವಜನಿಕ ನೀತಿ ಮತ್ತು ಹಣಕಾಸು ಕುರಿತ ರಾಷ್ಟ್ರೀಯ ಸಂಸ್ಥೆ (ಎನ್‌ಐಪಿಎಫ್‌ಪಿ) ಅಂದಾಜಿಸಿದಂತೆ 1997-2009ರ ಅವಧಿಯಲ್ಲಿ ದೇಶದಿಂದ ಹೊರಹೋಗಿರುವ ಅಕ್ರಮ ಹಣದ ಹರಿವು ಜಿಡಿಪಿಯ 0.2 ಶೇಕಡದಿಂದ 7.4 ಶೇಕಡ ವರೆಗೂ ಇರಬಹುದು. ಆದರೆ 1980-2010ರ ಅವಧಿಯಲ್ಲಿ ಭಾರತೀಯರು ವಿದೇಶಗಳಲ್ಲಿ ಕ್ರೋಢೀಕರಿಸಿರುವ ಮೊತ್ತ 384 ಶತಕೋಟಿಯಿಂದ 490 ಶತಕೋಟಿ ಡಾಲರ್ ಇರಬಹುದು ಎಂದು ಅನ್ವಯಿಕ ಅರ್ಥಶಾಸ್ತ್ರ ಸಂಶೋಧನೆಯ ರಾಷ್ಟ್ರೀಯ ಮಂಡಳಿ (ಎನ್‌ಸಿಎಇಆರ್) ಅಂದಾಜಿಸಿದೆ. ಹಣಕಾಸು ನಿರ್ವಹಣೆಯ ರಾಷ್ಟ್ರೀಯ ಸಂಸ್ಥೆ (ಎನ್‌ಐಎಫ್‌ಎಂ) ಅಂದಾಜಿನಂತೆ 1990-2008ರ ಅವಧಿಯಲ್ಲಿ 9.42 ಲಕ್ಷ ಕೋಟಿ ರೂಪಾಯಿ (216.5 ಶತಕೋಟಿ ಡಾಲರ್) ಅಕ್ರಮವಾಗಿ ವಿದೇಶಗಳಿಗೆ ಹರಿದಿರಬಹುದು.

ಲೆಕ್ಕಕ್ಕೆ ಸಿಗದ ಆದಾಯದಲ್ಲಿ ಸರಾಸರಿ ಶೇಕಡ 10ರಷ್ಟು ಹಣ ವಿದೇಶಕ್ಕೆ ಹರಿದಿದೆ ಎಂದು ವರದಿ ಹೇಳಿದೆ. "ಆದರೆ ಕಪ್ಪುಹಣದ ಸೃಷ್ಟಿ ಮತ್ತು ಸಂಗ್ರಹದ ಬಗ್ಗೆ ಯಾವುದೇ ವಿಶ್ವಾಸಾರ್ಹ ಅಂದಾಜುಗಳು ಇಲ್ಲ. ಇಂಥ ಅಂದಾಜು ಮಾಡಲು ಯಾವುದೇ ನಿಖರ ವಿಧಾನಗಳೂ ಇಲ್ಲ" ಎಂದು ಸ್ಥಾಯಿ ಸಮಿತಿಯ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News