ಚೋಕ್ಸಿ ಪೌರತ್ವವನ್ನು ಶೀಘ್ರವೇ ಹಿಂಪಡೆಯಲಾಗುವುದು: ಆ್ಯಂಟಿಗುವಾ ಪ್ರಧಾನಿ ಬ್ರೌನ್

Update: 2019-06-25 17:12 GMT

ಸೇಂಟ್ ಜಾನ್ಸ್ (ಆ್ಯಂಟೀಗ), ಜೂ. 25: ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ 13,500 ಕೋಟಿ ರೂಪಾಯಿ ವಂಚಿಸಿರುವ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿರುವ ವಜ್ರ ವ್ಯಾಪಾರಿ ಮೆಹುಲ್ ಚೊಕ್ಸಿಯು ತನ್ನ ಎಲ್ಲ ಕಾನೂನು ಅವಕಾಶಗಳನ್ನು ಮುಗಿಸಿದ ಬಳಿಕ, ಅವರ ಆ್ಯಂಟೀಗ ಪೌರತ್ವವು ರದ್ದುಗೊಳ್ಳುತ್ತದೆ ಎಂದು ಆ್ಯಂಟೀಗ ಸರಕಾರ ಹೇಳಿದೆ ಎಂದು ‘ಆ್ಯಂಟೀಗ ಅಬ್ಸರ್ವರ್’ ಪತ್ರಿಕೆ ವರದಿ ಮಾಡಿದೆ.

ಅವರ ಪೌರತ್ವ ರದ್ದಾದರೆ, ಭಾರತದಲ್ಲಿ ವಿಚಾರಣೆ ಎದುರಿಸಲು ಅವರನ್ನು ಗಡಿಪಾರು ಮಾಡಲು ಸುಲಭವಾಗುತ್ತದೆ.

ತೆರಿಗೆಗಳ್ಳರ ಸ್ವರ್ಗವಾಗಿರುವ ಆ್ಯಂಟೀಗವು ಭಾರತದೊಂದಿಗೆ ಗಡಿಪಾರು ಒಪ್ಪಂದ ಹೊಂದಿಲ್ಲ. ಆದರೆ, ಅಪರಾಧಿಗಳು ಮತ್ತು ಆರ್ಥಿಕ ಅಪರಾಧಗಳಲ್ಲಿ ಶಾಮೀಲಾದವರಿಗೆ ತನ್ನ ದೇಶವು ಸುರಕ್ಷಿತ ಆಶ್ರಯತಾಣಗಳನ್ನು ನೀಡುವುದಿಲ್ಲ ಎಂದು ಆ್ಯಂಟೀಗ ಮತ್ತು ಬಾರ್ಬುಡ ದೇಶದ ಪ್ರಧಾನಿ ಗ್ಯಾಸ್ಟನ್ ಬ್ರೌನ್ ಸ್ಪಷ್ಟಪಡಿಸಿದ್ದಾರೆ.

‘‘ಚೊಕ್ಸಿಯ ಪೌರತ್ವವನ್ನು ಪರಿಶೀಲಿಸಲಾಗಿದೆ. ಅವರ ಪೌರತ್ವ ಊರ್ಜಿತವಾಗಿದೆ. ನಮ್ಮಲ್ಲಿ ಇನ್ನೂ ಪ್ರಕ್ರಿಯೆಗಳಿವೆ. ಅವರ ಪೌರತ್ವ ರದ್ದುಗೊಳ್ಳುತ್ತದೆ ಹಾಗೂ ಅವರು ಭಾರತಕ್ಕೆ ಗಡಿಪಾರಾಗುತ್ತಾರೆ ಎನ್ನುವುದು ಸತ್ಯ’’ ಎಂದು ಪ್ರಧಾನಿ ಬ್ರೌನ್‌ರನ್ನು ಉಲ್ಲೇಖಿಸಿ ‘ಆ್ಯಂಟೀಗ ಅಬ್ಸರ್ವರ್’ ವರದಿ ಮಾಡಿದೆ.

ಇನ್ನೊಬ್ಬ ವಜ್ರ ವ್ಯಾಪಾರಿ ನೀರವ್ ಮೋದಿಯು ತನ್ನ ಚಿಕ್ಕಪ್ಪ ಮೆಹುಲ್ ಚೊಕ್ಸಿ ಜೊತೆಗೆ ಸೇರಿಕೊಂಡು ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ 13,500 ಕೋಟಿ ರೂಪಾಯಿಗೂ ಅಧಿಕ ವಂಚನೆ ಮಾಡಿರುವುದನ್ನು ಸ್ಮರಿಸಬಹುದಾಗಿದೆ. ನೀರವ್ ಮೋದಿ ಈಗ ಲಂಡನ್‌ನಲ್ಲಿದ್ದಾರೆ.

ಚೊಕ್ಸಿ ಕಳೆದ ವರ್ಷದ ಜನವರಿಯಲ್ಲಿ ಭಾರತದಿಂದ ಪರಾರಿಯಾಗಿದ್ದರು. ಅವರು ಆ್ಯಂಟೀಗ ದೇಶದ ಪೌರತ್ವವನ್ನು ಪಡೆದುಕೊಂಡಿರುವುದು ಆರು ತಿಂಗಳ ಬಳಿಕ ಗೊತ್ತಾಗಿತ್ತು.

ಅಪರಾಧಿಗಳಿಗೂ ಮೂಲಭೂತ ಹಕ್ಕುಗಳಿವೆ: ಆ್ಯಂಟೀಗ ಪ್ರಧಾನಿ

ಪೌರತ್ವ ರದ್ದು ಕುರಿತ ಸಂಭಾವ್ಯ ಸಮಯ ಮಿತಿಯ ಬಗ್ಗೆ ಮಾತನಾಡಿದ ಬ್ರೌನ್, ‘‘ಸಹಜ ಪ್ರಕ್ರಿಯೆಗಳು ಪೂರ್ಣಗೊಳ್ಳಲು ನಾವು ಅವಕಾಶ ನೀಡಬೇಕಾಗಿದೆ. ಅವರು ಈಗ ನ್ಯಾಯಾಲಯಕ್ಕೆ ಹೋಗಿದ್ದಾರೆ. ನಾವು ಭಾರತಕ್ಕೆ ಹೇಳಿರುವಂತೆ, ಅಪರಾಧಿಗಳೂ ಮೂಲಭೂತ ಹಕ್ಕುಗಳನ್ನು ಹೊಂದಿದ್ದಾರೆ. ನ್ಯಾಯಾಲಯಕ್ಕೆ ಹೋಗಲು ಹಾಗೂ ತನ್ನ ನಿಲುವನ್ನು ಹೇಳಿಕೊಳ್ಳಲು ಚೊಕ್ಸಿಗೂ ಹಕ್ಕಿದೆ. ಆದರೆ, ಅವರು ತನ್ನ ಎಲ್ಲ ಕಾನೂನು ಅವಕಾಶಗಳನ್ನು ಮುಗಿಸಿದ ಬಳಿಕ, ಅವರನ್ನು ಭಾರತಕ್ಕೆ ಗಡಿಪಾರು ಮಾಡಲಾಗುವುದು ಎಂಬುದಾಗಿ ನಾನು ನಿಮಗೆ ಭರವಸೆ ನೀಡುತ್ತೇನೆ’’ ಎಂದು ಆ್ಯಂಟೀಗ ಪ್ರಧಾನಿ ಬ್ರೌನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News