ಶೇ.7.5 ರಷ್ಟು ಮೀಸಲಾತಿಗೆ ಪಟ್ಟು: ವಾಲ್ಮೀಕಿ ಸಮುದಾಯದಿಂದ ವಿಧಾನಸೌಧ ಮುತ್ತಿಗೆ ಯತ್ನ

Update: 2019-06-25 13:04 GMT

ಬೆಂಗಳೂರು, ಜೂ.25: ಪರಿಶಿಷ್ಟ ಪಂಗಡ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ವಾಲ್ಮೀಕಿ ಸಮುದಾಯದ ಸದಸ್ಯರು ರಾಜಧಾನಿ ಬೆಂಗಳೂರಿನ ವಿಧಾನಸೌಧ ಮುತ್ತಿಗೆ ಚಳುವಳಿ ನಡೆಸಿದರು.

ಮೀಸಲಾತಿ ಬೇಡಿಕೆಗಾಗಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮಿಜಿ ನೇತೃತ್ವದಲ್ಲಿ ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯಿಂದ ಆರಂಭಗೊಂಡಿದ್ದ ಬೃಹತ್ ಪಾದಯಾತ್ರೆ ಮಂಗಳವಾರ ಇಲ್ಲಿನ ಸ್ವಾತಂತ್ರ ಉದ್ಯಾನವನ ಮೈದಾನಕ್ಕೆ ತಲುಪಿತು.

ಹೋರಾಟವನ್ನುದ್ದೇಶಿಸಿ ಮಾತನಾಡಿದ ಪ್ರಸನ್ನಾನಂದಪುರಿ ಸ್ವಾಮೀಜಿ, ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಬೇಕೆಂದು ಆಗ್ರಹಿಸಿ ಕಳೆದ 12 ದಿನಗಳಿಂದ ಪಾದಯಾತ್ರೆ ನಡೆಸಿದ್ದೇವೆ. ರಾಜ್ಯದಲ್ಲಿ ನಮ್ಮ ಸಮುದಾಯದವರು ಸುಮಾರು 50 ಲಕ್ಷಕ್ಕೂ ಹೆಚ್ಚು ಜನರಿದ್ದೇವೆ. ಹಾಲಿ ಇರುವ 3.5ರಷ್ಟು ಮೀಸಲಾತಿ ಪ್ರಮಾಣವನ್ನು 7.5ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪಕ್ಷಾತೀತವಾಗಿ ಜನಪ್ರತಿನಿಧಿಗಳು ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಪಾದಯಾತ್ರೆಯುದ್ದಕ್ಕೂ ನಮ್ಮ ಸಮುದಾಯದವರು ನಮಗೆ ಬೆಂಬಲ ನೀಡಿದ್ದಾರೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಗಬೇಕೆಂಬ ಹಿನ್ನೆಲೆಯಲ್ಲಿ ಈ ಹೋರಾಟ ನಡೆಸುತ್ತಿದ್ದೇವೆ ಎಂದರು.

ಜನ ಸಾಗರ: ಪರಿಶಿಷ್ಟ ಪಂಗಡ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿಗಾಗಿ ಕರೆ ನೀಡಿದ್ದ ಬೃಹತ್ ಚಳುವಳಿಗೆ ಜನ ಸಾಗರವೇ ಹರಿದುಬಂದಿತ್ತು. ದಾವಣಗೆರೆಯ ರಾಜನಹಳ್ಳಿಯಿಂದ ಆರಂಭಗೊಂಡಿದ್ದ ಪಾದಯಾತ್ರೆಗೆ ರಾಜನಹಳ್ಳಿ, ಜಗಳೂರು, ಚಿತ್ರದುರ್ಗ, ಚಳ್ಳಕೆರೆ. ಹಿರಿಯೂರು, ಶಿರಾ, ತುಮಕೂರು, ನೆಲಮಂಗಲ, ದೊಡ್ಡ ಬಳ್ಳಾಪುರ, ದೇವನಹಳ್ಳಿ, ಶಿಡ್ಲಘಟ್ಟ, ಹೊಸಕೋಟೆ ಹಾಗೂ ಕೆಆರ್‌ಪುರಂ ಮೂಲಕ ಪಾದಯಾತ್ರೆ ನಡೆಸಲಾಗಿತ್ತು. ಚಳುವಳಿಯಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಶಾಸಕರಾದ ಶ್ರೀರಾಮುಲು, ನಾಗೇಂದ್ರ, ಮಾಜಿ ಸಂಸದರಾದ ಶಶಿಕುಮಾರ್, ವಿ.ಎಸ್.ಉಗ್ರಪ್ಪ ಭಾಗವಹಿಸಿದ್ದರು. 

ಮುತ್ತಿಗೆ ಯತ್ನ

ಮೀಸಲಾತಿ ಹೆಚ್ಚಳ ಮಾಡಬೇಕು ಎಂಬ ಘೋಷಣೆಗಳ ಮೂಲಕ ಚಳುವಳಿ ನಿರತರು, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ತಡೆದು, ಸ್ವಾತಂತ್ರ ಉದ್ಯಾನವನದ ಕಡೆ ಸಾಗುವಂತೆ ಮನವಿ ಮಾಡಿಕೊಳ್ಳಲಾಯಿತು. ಅದೇ ರೀತಿ, ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಸಂಚಾರ ದಟ್ಟಣೆ

ನಗರದ ಕೆ.ಆರ್.ವೃತ್ತ, ಹಡ್ಸನ್ ಸರ್ಕಲ್, ಚಾಲುಕ್ಯ, ಆನಂದ್‌ರಾವ್ ವೃತ್ತ ಸೇರಿದಂತೆ ಅನೇಕ ಕಡೆ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ವಾಹನ ಸವಾರರು ಗಂಟೆಗಟ್ಟಲೆ ರಸ್ತೆಯಲ್ಲಿಯೇ ಸಾಲು ಸಾಲಾಗಿ ನಿಂತಿದ್ದರು. ಪೊಲೀಸರು ಸಹ ಧರಣಿ ನಿರತರನ್ನು ಒಂದು ಕಡೆ ಜಮಾಯಿಸಲು ಹರಸಾಹಸ ಪಟ್ಟರು.

ಮೀಸಲಾತಿಗೆ ನಟ ಸುದೀಪ್ ಬೆಂಬಲ

ಪರಿಶಿಷ್ಟ ಪಂಗಡ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಬೃಹತ್ ಚಳುವಳಿಗೆ ನಟ ಸುದೀಪ್ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ವಿಡಿಯೊ ಮೂಲಕ ತಮ್ಮ ಸಂದೇಶ ಹಂಚಿಕೊಂಡಿರುವ ಸುದೀಪ್, ಪ್ರಸನ್ನಾನಂದ ಮಹಾಸ್ವಾಮಿ 16 ದಿನಗಳಿಂದ ನೂರಾರು ಮೈಲಿ ಪಾದಯಾತ್ರೆ ಮಾಡಿ ಮಂಗಳವಾರ ಬೆಂಗಳೂರಿಗೆ ತಲುಪಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯಕ್ಕೋಸ್ಕರ ಒಳ್ಳೆಯ ಉದ್ದೇಶವನ್ನಿಟ್ಟುಕೊಂಡು ಈ ಕೆಲಸ ಮಾಡಿದ್ದಾರೆ. ಇದನ್ನು ಒಂದು ಒಳ್ಳೆಯ ಛಲ ಎಂದರೆ ತಪ್ಪಾಗಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News