ಪೂರ್ವ ಪ್ರಾಥಮಿಕ ಶಿಕ್ಷಣದಲ್ಲಿ ಖಾಸಗಿ ಸಹಭಾಗಿತ್ವ ಬೇಡ: ಡಾ.ಕೃಪಾ ಆಳ್ವ

Update: 2019-06-25 13:50 GMT

ಬೆಂಗಳೂರು, ಜೂ.25: ಕೇಂದ್ರ ಸರಕಾರ ಸಿದ್ಧಪಡಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡಿನಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಖಾಸಗಿ ಸಹಭಾಗಿತ್ವದಡಿ ಜಾರಿಗೆ ತರಲು ಚಿಂತನೆ ನಡೆಸಿರುವುದು ಸರಿಯಲ್ಲವೆಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಡಾ.ಕೃಪಾ ಆಳ್ವ ಅಭಿಪ್ರಾಯಿಸಿದ್ದಾರೆ.

ಮಂಗಳವಾರ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗ, ಸಾಮಾಜಿಕ ಪರಿವರ್ತನಾ ಜನಾಂದೋಲನ ಸಹಯೋಗದಲ್ಲಿ ನಗರದ ಶಿಕ್ಷಣ ಸದನದಲ್ಲಿ ಆಯೋಜಿಸಿದ್ದ ಮಕ್ಕಳ ಬಾಲ್ಯಾರಂಭದ ಪೋಷಣೆ ಮತ್ತು ಶಿಕ್ಷಣದ ಕುರಿತು ಆಯೋಜಿಸಿದ್ದ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೇಂದ್ರದ ನೂತನ ಶಿಕ್ಷಣ ನೀತಿಯಲ್ಲಿ 3ರಿಂದ 14ವರ್ಷದ ವರೆಗಿನ ಮಕ್ಕಳ ಶಿಕ್ಷಣವನ್ನು ಕಡ್ಡಾಯಗೊಳಿಸಿರುವುದು ಶ್ಲಾಘನೀಯ. ಆದರೆ, ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಖಾಸಗಿ ಸಹಭಾಗಿತ್ವಕ್ಕೆ ಅವಕಾಶ ಕೊಟ್ಟಿರುವುದು ಸರಿಯಲ್ಲ. ಬಾಲ್ಯದ ಮಕ್ಕಳ ಸಂಪೂರ್ಣ ಶಿಕ್ಷಣ ವ್ಯವಸ್ಥೆಯನ್ನು ಸರಕಾರವೆ ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಅವರು ಹೇಳಿದರು.

ಗುರುಕುಲ ಮಾದರಿಯ ಶಿಕ್ಷಣ ಮಾದರಿಯನ್ನು ಜಾರಿಗೆ ತರಲಾಗುವುದು ಎಂದು ಹೊಸ ಶಿಕ್ಷಣ ನೀತಿಯ ಕರಡಿನಲ್ಲಿ ಹೇಳಲಾಗಿದೆ. ಆದರೆ, ಭಾರತದಲ್ಲಿ ಗುರುಕುಲ ಶಿಕ್ಷಣ ಪದ್ಧತಿಯೆಂದರೆ ಕೇವಲ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಿಗೆ ಮಾತ್ರ ಮೀಸಲಾಗಿತ್ತು. ಹೀಗಾಗಿ ಈಗ ಜಾರಿ ಮಾಡಲು ಉದ್ದೇಶಿಸಿರುವ ಗುರುಕುಲ ಮಾದರಿಯ ಶಿಕ್ಷಣ ವ್ಯವಸ್ಥೆಯ ಸ್ವರೂಪ ಹೇಗಿರುತ್ತದೆ ಎಂದು ವಿವರವಾಗಿ ತಿಳಿಸಿಲ್ಲವೆಂದು ಅವರು ಅನುಮಾನ ವ್ಯಕ್ತಪಡಿಸಿದರು.

ಕೇಂದ್ರ ಸರಕಾರದ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಾಮಾಜಿಕವಾಗಿ ಸಾಕಷ್ಟು ಬದಲಾವಣೆಗೊಳಗಾಗಬೇಕಾಗಿದೆ. ದೇಶದ ಯಾವೊಂದು ಮಗುವು ಶಾಲೆಯಿಂದ ಹೊರಗುಳಿಯದಂತೆ ಪರಿಣಾಮಕಾರಿ ಕಾರ್ಯಕ್ರಮಗಳು ಅನುಷ್ಠಾನಗೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು.

ಮೊಬೈಲ್ ಕ್ರೆಚಸ್ ಸಂಸ್ಥೆಯ ಮುಖ್ಯಸ್ಥೆ ಡಾ.ವರ್ಷ ಶರ್ಮ ಮಾತನಾಡಿ, ಕೇಂದ್ರ ಸರಕಾರ ಹೊಸದಾಗಿ ಜಾರಿಗೆ ತರಲು ಹೊರಟಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡಿನಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳ ರೂಪರೇಷೆಗಳ ಕುರಿತು ವಿವರವಾಗಿ ದಾಖಲಿಸಿಲ್ಲ. ಹೀಗಾಗಿ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ ಎಂದರು.

ಪೂರ್ವ ಪ್ರಾಥಮಿಕ ಶಾಲೆಗಳ ಅವಧಿ, ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುವುದು, ಹೋಗುವುದರ ಜವಾಬ್ದಾರಿ, ಅಲ್ಲಿನ ಪಠ್ಯ ರಚನೆಗಳ ಸ್ವರೂಪ, ಶಿಕ್ಷಕರ ಅರ್ಹತೆ, ವೇತನ ಸೇರಿದಂತೆ ಹಲವಾರು ವಿಷಯಗಳ ಕುರಿತು ವಿವರವಾದ ಮಾಹಿತಿಯಿಲ್ಲ. ಹೀಗಾಗಿ ಹೊಸ ಶಿಕ್ಷಣ ನೀತಿಯ ಕರಡಿನಲ್ಲಿ ಇವೆಲ್ಲ ಅಂಶಗಳನ್ನು ಸೇರಿಸಿ ಮತ್ತೊಂದು ಸುತ್ತಿನ ಅಭಿಪ್ರಾಯಕ್ಕೆ ಅವಕಾಶ ಕಲ್ಪಿಸಬೇಕೆಂದು ಅವರು ಒತ್ತಾಯಿಸಿದರು.

ಈ ವೇಳೆ ಸಾಮಾಜಿಕ ಪರಿವರ್ತನಾ ಜನಾಂದೋಲನದ ಅಧ್ಯಕ್ಷ ಅಂಬಣ್ಣ ಅರೋಲಿಕರ್, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷ ವೈ.ಮರಿಸ್ವಾಮಿ, ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸದ್ಯ ಬೆಂಗಳೂರು ನಗರದಲ್ಲಿ 2 ಸಾವಿರ ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿವೆ. ಇನ್ನು 4 ಸಾವಿರ ಅಂಗನವಾಡಿಗಳ ಅಗತ್ಯವಿದೆ. ಹಾಗೂ ಅಂಗನವಾಡಿಗಳಿಗೆ ಈಗಿರುವ ಸಹಾಯಕಿ, ಶಿಕ್ಷಕಿಯ ಜೊತೆಗೆ ಮತ್ತೊಬ್ಬ ಶಿಕ್ಷಕಿಯನ್ನು ನೇಮಕ ಮಾಡುವ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಬೇಕು.

-ಡಾ.ಕೃಪಾ ಆಳ್ವ, ಮಾಜಿ ಅಧ್ಯಕ್ಷೆ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News