ರಸ್ತೆಗಳಲ್ಲಿ ನಮಾಝ್ ಮಾಡುವುದನ್ನು ಪ್ರತಿಭಟಿಸಿ ಹನುಮಾನ್ ಚಾಲೀಸ ಪಠಿಸಿದ ಬಿಜೆಪಿ!

Update: 2019-06-26 07:30 GMT

 ಹೌರಾ(ಕೋಲ್ಕತಾ), ಜೂ.26: ಬಿಜೆಪಿಯ ಯೂತ್ ವಿಂಗ್ ಭಾರತೀಯ ಜನತಾ ಯುವ ಮೋರ್ಚಾ ಸದಸ್ಯರು ಕೋಲ್ಕತಾದ ಹೌರಾದಲ್ಲಿ ಮಂಗಳವಾರ ರಾತ್ರಿ ಒಟ್ಟು ಸೇರಿ ರಸ್ತೆ ಮೇಲೆ ಕುಳಿತು ಹನುಮಾನ್ ಚಾಲೀಸಾವನ್ನು ಪಠಿಸಿದರು. ಮುಸ್ಲಿಮರು ಶುಕ್ರವಾರ ರಸ್ತೆಗಳಲ್ಲಿ ನಮಾಝ್ ಮಾಡಿ ಸಂಚಾರಕ್ಕೆ ತಡೆಯೊಡ್ಡುತ್ತಿರುವುದನ್ನು ಈ ರೀತಿಯಾಗಿ ಪ್ರತಿಭಟಿಸುತ್ತಿರುವುದಾಗಿ ಬಿಜೆಪಿ ಹೇಳಿಕೊಂಡಿದೆ.

 ‘‘ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಗ್ರಾಂಡ್ ಟ್ರಂಕ್ ರೋಡ್ ಹಾಗೂ ಇತರ ಪ್ರಮುಖ ರಸ್ತೆಗಳಲ್ಲಿ ಶುಕ್ರವಾರದ ನಮಾಝ್ ವೇಳೆ ರೋಡ್ ಬ್ಲಾಕ್ ಆಗಿರುತ್ತವೆ. ರಸ್ತೆಯಲ್ಲಿ ಆ್ಯಂಬುಲೆನ್ಸ್ ಸಿಕ್ಕಿಹಾಕಿಕೊಂಡು ರೋಗಿಗಳು ಮೃತಪಟ್ಟಿದ್ದರು. ಶಾಲಾ ಮಕ್ಕಳಿಗೆ ಸರಿಯಾದ ಸಮಯಕ್ಕೆ ಶಾಲೆಗೆ ತಲುಪಲು ಸಾಧ್ಯವಾಗುತ್ತಿಲ್ಲ. ಜನರು ಕಚೇರಿಗೆ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ . ಇದು ಮುಂದುವರಿಯುವ ತನಕ ನಾವು ಎಲ್ಲ ಮುಖ್ಯ ರಸ್ತೆಗಳಲ್ಲಿ, ಹನುಮಾನ್ ದೇವಸ್ಥಾನಗಳ ಬಳಿ ಹನುಮಾನ್ ಚಾಲೀಸಾವನ್ನು ಪಠಿಸುತ್ತೇವೆ’’ ಎಂದು ಬಿಜೆಪಿ ಯೂತ್ ವಿಂಗ್‌ನ ಸ್ಥಳೀಯ ನಾಯಕ ಒ.ಪಿ.ಸಿಂಗ್ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 18 ಸೀಟುಗಳನ್ನು ಜಯಿಸಿ, ತೃಣಮೂಲ ಕಾಂಗ್ರೆಸ್‌ನ್ನು 22 ಸೀಟುಗಳಿಗೆ ನಿಯಂತ್ರಿಸಿದ ಬಳಿಕ ಪಶ್ಚಿಮಬಂಗಾಳದಲ್ಲಿ ರಾಜಕೀಯ ತಾಪಮಾನ ಏರತೊಡಗಿದೆ. ಚುನಾವಣೆಯ ಫಲಿತಾಂಶದ ಬಳಿಕ ಉಭಯ ಪಕ್ಷಗಳ ಕಾರ್ಯಕರ್ತರ ಮಧ್ಯೆ ಹಿಂಸಾಚಾರ ಘಟನೆಗಳು ನಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News