ದಿಲ್ಲಿ-ಕೇರಳ ಶಿಕ್ಷಣ ಪದ್ಧತಿ ಅಧ್ಯಯನಕ್ಕೆ ರಾಜ್ಯದ ನಿಯೋಗ: ಶಿಕ್ಷಣ ಸಚಿವ ಶ್ರೀನಿವಾಸ್

Update: 2019-06-26 13:14 GMT

ಬೆಂಗಳೂರು, ಜೂ. 26: ಹೊಸದಿಲ್ಲಿ ಮತ್ತು ಕೇರಳ ರಾಜ್ಯಗಳಲ್ಲಿನ ಶಿಕ್ಷಣ ಪದ್ಧತಿ ಅಧ್ಯಯನಕ್ಕೆ ನನ್ನ ನೇತೃತ್ವದಲ್ಲಿ ಅಧಿಕಾರಿಗಳ ನಿಯೋಗವನ್ನು ಕೊಂಡೊಯ್ಯಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಆರ್.ಶ್ರೀನಿವಾಸ್ ಇಂದಿಲ್ಲಿ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿನ ತಮ್ಮ ಕೊಠಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿಲ್ಲಿ ಮತ್ತು ಕೇರಳ ಸರಕಾರಿ ಶಾಲೆಗಳಲ್ಲಿನ ಮೂಲಸೌಕರ್ಯ, ಪಠ್ಯಕ್ರಮ ಸೇರಿದಂತೆ ಅಲ್ಲಿನ ಶಿಕ್ಷಣ ಪದ್ದತಿ ಬಗ್ಗೆ ಅಧ್ಯಯನ ನಡೆಸಿ ರಾಜ್ಯದಲ್ಲಿಯೂ ಅಳವಡಿಸಿಕೊಳ್ಳಲಾಗುವುದು ಎಂದರು.

ರಾಜ್ಯದ ಸರಕಾರಿ ಶಾಲೆಗಳ ಕಟ್ಟಡ, ಶೌಚಾಲಯ ಸೇರಿದಂತೆ ಮೂಲ ಸೌಲಭ್ಯ ಅಭಿವೃದ್ಧಿಗೆ 1,200 ಕೋಟಿ ರೂ.ಒದಗಿಸಲಾಗಿದೆ. ಅಲ್ಲದೆ, ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಸರಕಾರ ಆದ್ಯತೆ ನೀಡಲಿದೆ ಎಂದ ಅವರು, ಶಿಕ್ಷಕರಿಗೆ ಅಗತ್ಯ ತರಬೇತಿ ನೀಡಲಾಗುವುದು ಎಂದರು.

ಕನ್ನಡ ಪಬ್ಲಿಕ್ ಶಾಲೆ: ಮಕ್ಕಳ ಕೊರತೆ ಹಿನ್ನೆಲೆಯಲ್ಲಿ ಸರಕಾರಿ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿವೆ. ಅಲ್ಲದೆ, ಪೋಷಕರಲ್ಲಿನ ಖಾಸಗಿ ಶಾಲೆಗಳ ವ್ಯಾಮೋಹವೂ ಸೇರಿದೆ. ಇದಕ್ಕೆ ಪರಿಹಾರವಾಗಿ ಕನ್ನಡ ಪಬ್ಲಿಕ್ ಶಾಲೆಗಳನ್ನು ಆರಂಭಿಸಿದ್ದು, ಈ ಶಾಲೆಗಳನ್ನು ಹೆಚ್ಚಳ ಮಾಡಬೇಕಿದೆ ಎಂದರು.

ಸಿಬಿಎಸ್ಸಿ ಮತ್ತು ಐಸಿಎಸ್ಸಿ ಶಾಲೆಗಳಲ್ಲಿಯೂ ಮುಂದಿನ ದಿನಗಳಲ್ಲಿ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಕಡ್ಡಾಯವಾಗಿ ಬೋಧನೆ ಮಾಡಲು ಕ್ರಮ ವಹಿಸಲಾಗುವುದು ಎಂದ ಅವರು, ಈ ವಿಷಯದಲ್ಲಿ ಲೋಪವಾದರೆ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸೈಕಲ್ ವಿತರಣೆ ಹಾಗೂ ಉಚಿತ ಬಸ್ ಪಾಸ್ ವಿತರಣೆ ಸಂಬಂಧ ಮುಖ್ಯಮಂತ್ರಿ ಜತೆ ಸಮಾಲೋಚನೆ ನಡೆಸಲಾಗುವುದು ಎಂದ ಅವರು, ಪಠ್ಯ ಕ್ರಮ ಬದಲಾವಣೆ ಸಂಬಂಧ ಶಿಕ್ಷಣ ತಜ್ಞರ ಜತೆ ಚರ್ಚಿಸಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News