ಗುತ್ತಿಗೆದಾರನ ಅಪಹರಿಸಿ ಹಲ್ಲೆ ಪ್ರಕರಣ: ರೌಡಿ ಮುಳ್ಳನ ಸಹಚರರ ಬಂಧನ

Update: 2019-06-26 13:25 GMT

ಬೆಂಗಳೂರು, ಜೂ.26: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕುಖ್ಯಾತ ರೌಡಿ ಮುಳ್ಳನ ಸೂಚನೆಯ ಮೇರೆಗೆ ಬಿಬಿಎಂಪಿ ಗುತ್ತಿಗೆದಾರನೋರ್ವನನ್ನು ಅಪಹರಿಸಿ ಹಲ್ಲೆ ಮಾಡಿದ್ದ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಕೆ.ಪಿ.ಅಗ್ರಹಾರ ಪೊಲೀಸರು ಯಶಸ್ವಿಯಾಗಿದ್ದಾರೆ.

ರೌಡಿ ಮುಳ್ಳನ ಸಹಚರರಾದ ಕಾರ್ತಿಕ್, ಬೈರೇಗೌಡ, ನವೀನ್, ಸುರೇಶ್ ಬಂಧಿತ ಆರೋಪಿಗಳು. ಇವರು ಎ.30ರಂದು ಕೆ.ಪಿ.ಅಗ್ರಹಾರದ ಗುತ್ತಿಗೆದಾರ ಶಾಂತಕುಮಾರ್‌ರನ್ನು ಅಪಹರಿಸಿ, ನಂತರ ದಾಸರಹಳ್ಳಿ, ನೆಲಮಂಗಲ ಭಾಗಕ್ಕೆ ಕರೆದೊಯ್ದು ಕಾಲಿಗೆ ಚಾಕು ಇರಿದು, ಸುಲಿಗೆ ಮಾಡಿ ಮೇ 1ರಂದು ಬಿಟ್ಟು ಕಳುಹಿಸಿದ್ದರು.

ಇದಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರ ಶಾಂತಕುಮಾರ್ ದುಷ್ಕರ್ಮಿಗಳಿಗೆ ಹೆದರಿ ಪೊಲೀಸರಿಗೆ ದೂರು ನೀಡದೆ ಸುಮ್ಮನಾಗಿದ್ದರು. ಆದರೆ, ಇತ್ತೀಚೆಗಷ್ಟೆ ತನ್ನ ಸ್ನೇಹಿತರ ಬಳಿ ರೌಡಿ ಮುಳ್ಳನ ಗ್ಯಾಂಗ್ ತನ್ನನ್ನು ಅಪಹರಿಸಿದ್ದರ ಬಗ್ಗೆ ಹೇಳಿಕೊಂಡಿದ್ದರು. ಈ ವಿಚಾರವಾಗಿ ಆತನ ಸ್ನೇಹಿತರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣವನ್ನು ದಾಖಲಿಸಿಕೊಂಡು ಕೆ.ಪಿ.ಅಗ್ರಹಾರ ಪೊಲೀಸರು ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News