ಭಾರತದಲ್ಲಿ 2022ರ ವೇಳೆ ಗಿಡ್ಡ ಮಕ್ಕಳ ಪ್ರಮಾಣ ಶೇ.31.4 : ವರದಿ

Update: 2019-06-26 14:27 GMT

ಹೊಸದಿಲ್ಲಿ, ಜೂ.26: ಭಾರತದಲ್ಲಿ ಐದು ವರ್ಷದ ಕೆಳಹರೆಯದ ಮಕ್ಕಳಲ್ಲಿ ದೀರ್ಘಕಾಲದ ಅಪೌಷ್ಟಿಕತೆಯಿಂದ ಬೆಳವಣಿಗೆ ಕುಂಠಿತವಾಗುವ ಪ್ರಮಾಣ ಕಳೆದ ದಶಕದಲ್ಲಿ ವರ್ಷಕ್ಕೆ ಸುಮಾರು ಶೇ.1ರ ಪ್ರಮಾಣಕ್ಕೆ ಇಳಿಕೆಯಾಗಿದೆ. ಈ ಪ್ರಮಾಣ ಮುಂದುವರಿದರೆ 2022ರ ವೇಳೆಗೆ ದೇಶದ 31.4% ಮಕ್ಕಳು ಬೆಳವಣಿಗೆ ಕುಂಠಿತಗೊಂಡು ಗಿಡ್ಡಗಾಗುತ್ತಾರೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.

ಮಂಗಳವಾರ ಸ್ವಿಝರ್ಲ್ಯಾಂಡಿನ ಜಿನೆವ ನಗರದಲ್ಲಿ ನಡೆದ ವಿಶ್ವಸಂಸ್ಥೆಯ ಸಭೆಯ ಬಳಿಕ ವಿಶ್ವಸಂಸ್ಥೆಯ ವಿಶ್ವ ಆರೋಗ್ಯ ಯೋಜನೆಯ ವಕ್ತಾರ ಹಾರ್ವೆ ವೆರ್ಹೂಸೆಲ್ ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಹಾಗೂ ಏಶ್ಯಾದ ಬಹುತೇಕ ರಾಷ್ಟ್ರಗಳ ಪೈಕಿ ಭಾರತದಲ್ಲಿ ಮಕ್ಕಳ ಬೆಳವಣಿಗೆ ಕುಂಠಿತದ ಇಳಿಕೆಯ ಪ್ರಮಾಣವು ಅತ್ಯಂತ ನಿಧಾನಗತಿಯಲ್ಲಿದೆ ಎಂದು ವರದಿ ತಿಳಿಸಿದೆ. ರಾಷ್ಟ್ರೀಯ ಪೌಷ್ಟಿಕ ಅಭಿಯಾನದಡಿ ನಿಗದಿಗೊಳಿಸಿರುವಂತೆ, 2022ರ ವೇಳೆಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುವ ಪ್ರಮಾಣವನ್ನು 25%ಕ್ಕೆ ಇಳಿಸುವ ಗುರಿಯನ್ನು ಭಾರತ ಹೊಂದಿದ್ದು, ಇದನ್ನು ಸಾಧಿಸಬೇಕಿದ್ದರೆ ಬೆಳವಣಿಗೆ ಕುಂಠಿತ ಇಳಿಕೆಯ ಪ್ರಮಾಣ ವಾರ್ಷಿಕ 2% ಗೆ ಹೆಚ್ಚಬೇಕು.

ಗೋವಾ, ಕೇರಳ , ದಾಮನ್ ಮತ್ತು ದಿಯು, ಅಂಡಮಾನ್ ಮತ್ತು ನಿಕೋಬಾರ್, ಪುದುಚೇರಿ ಮತ್ತು ತ್ರಿಪುರಾ ರಾಜ್ಯಗಳು ಈ ಗುರಿಯನ್ನು ಸಾಧಿಸಿರುವುದು 2015-16ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. 25.7% ಪ್ರಮಾಣದಲ್ಲಿರುವ ಪಂಜಾಬ್ ರಾಜ್ಯ ಕೂಡಾ ಗುರಿಯ ನಿಕಟದಲ್ಲಿದೆ. 2030ರ ವೇಳೆಗೆ ದೇಶವನ್ನು ಹಸಿವುಮುಕ್ತಗೊಳಿಸುವ ಸುಸ್ಥಿರ ಅಭಿವೃದ್ಧಿಯ ಗುರಿಯೆಡೆಗೆ ಭಾರತದ ಮುನ್ನಡೆಯನ್ನು ಆಧಾರವಾಗಿರಿಸಿ ಈ ವಿಶ್ಲೇಷಣೆ ನಡೆಸಲಾಗಿದೆ. ಅಕ್ಕಿ, ಗೋಧಿ ಹಾಗೂ ಇತರ ಧಾನ್ಯಗಳ ಉತ್ಪಾದನೆಯಲ್ಲಿ ಭಾರೀ ಪ್ರಮಾಣದ ಹೆಚ್ಚಳವಾಗಿ ಆಹಾರಧಾನ್ಯ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗಿದ್ದರೂ, ಈ ಧಾನ್ಯಗಳ ತಲಾ ಲಭ್ಯತೆ ಇದೇ ಪ್ರಮಾಣದಲ್ಲಿ ಹೆಚ್ಚಿಲ್ಲ. ಇದಕ್ಕೆ ಅಸಮಾನತೆ, ಜನಸಂಖ್ಯಾ ಹೆಚ್ಚಳ, ಆಹಾರದ ನಷ್ಟ ಮತ್ತು ಆಹಾರವನ್ನು ಪೋಲು ಮಾಡುವುದು ಹಾಗೂ ರಫ್ತು ಕಾರಣವಾಗಿದೆ ಎಂದು ವೆರ್ಹೂಸೆಲ್ ಹೇಳಿದ್ದಾರೆ.

ದೇಶದ ಜನಸಂಖ್ಯೆಯ ಪ್ರಮಾಣ 1.32 ಬಿಲಿಯನ್ ಆಗಿರುವುದು ಸುಸ್ಥಿರ ಅಭಿವೃದ್ಧಿಯ ಗುರಿಯೆಡೆಗೆ ಭಾರತದ ಮುನ್ನಡೆಗೆ ಮತ್ತು ಹಸಿವುಮುಕ್ತ ದೇಶದ ಕಲ್ಪನೆಯ ಯಶಸ್ಸಿನ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ ಎಂದವರು ಹೇಳಿದ್ದಾರೆ. ಆಹಾರ ಭದ್ರತೆಯ ಸುಧಾರಣೆಯ ಸಕಾರಾತ್ಮಕ ಪ್ರವೃತ್ತಿ ಹಾಗೂ ವಿಧಾನಗಳ ಹೊರತಾಗಿಯೂ ದೇಶದಲ್ಲಿ ಅಪೌಷ್ಟಿಕತೆಯ ದರ ಸ್ವೀಕಾರಾರ್ಹ ಮಟ್ಟಕ್ಕಿಂತ ತುಂಬಾ ಕಡಿಮೆಯಾಗಿರುವ ಬಗ್ಗೆ ವರದಿ ಬೆಟ್ಟು ಮಾಡಿದೆ ಎಂದು ವೆರ್ಹೂಸೆಲ್ ಹೇಳಿದ್ದಾರೆ.

ಬಿಹಾರದಲ್ಲಿ ಅಧಿಕ ಐದು ವರ್ಷದ ಕೆಳಗಿನ ಹರೆಯದ ಮಕ್ಕಳಲ್ಲಿ ಬೆಳವಣಿಗೆ ಕುಂಠಿತವಾಗುವ ಪ್ರಮಾಣ ಬಿಹಾರದಲ್ಲಿ ಅತ್ಯಧಿಕವಾಗಿದೆ( 48%). ಆ ಬಳಿಕದ ಸ್ಥಾನದಲ್ಲಿ ಉತ್ತರಪ್ರದೇಶ(46%), ಜಾರ್ಖಂಡ್(45%), ಮೇಘಾಲಯ(44%) ರಾಜ್ಯಗಳಿವೆ. ಕಡಿಮೆ ತೂಕದ ಮತ್ತು ನಿಶ್ಯಕ್ತ ಮಕ್ಕಳ ಪ್ರಮಾಣವೂ ಜಾರ್ಖಂಡ್ ರಾಜ್ಯದಲ್ಲಿ ಅತ್ಯಧಿಕವಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News