ಮೂರು ವಾರದಲ್ಲಿ ಕೆಪಿಸಿಸಿ ನೂತನ ಸಮಿತಿ ರಚನೆ: ಕೆ.ಸಿ.ವೇಣುಗೋಪಾಲ್

Update: 2019-06-26 15:04 GMT

ಬೆಂಗಳೂರು, ಜೂ.26: ಇತ್ತೀಚೆಗಷ್ಟೆ ವಿಸರ್ಜನೆಗೊಂಡಿರುವ ಕೆಪಿಸಿಸಿಗೆ ಮೂರು ವಾರದೊಳಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಎಸ್.ವೇಣುಗೋಪಾಲ್ ತಿಳಿಸಿದರು.

ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಲೋಕಸಭೆ ಚುನಾವಣೆಯ ಅಭ್ಯರ್ಥಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸದೃಢಗೊಳಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೆಪಿಸಿಸಿಯ ಎಲ್ಲ ಸಮಿತಿಗಳಿಗೂ ಪದಾಧಿಕಾರಿಗಳ ನೇಮಕಾತಿಯನ್ನು ಮುಂದಿನ ಮೂರು ವಾರಗಳಲ್ಲಿ ಮುಗಿಸಲಾಗುವುದು ಎಂದು ತಿಳಿಸಿದರು.

ಕೆಪಿಸಿಸಿ ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಕಾತಿ ಮಾಡಿದಾಕ್ಷಣ ಸುಮ್ಮನೆ ಕೂರುವುದಿಲ್ಲ. ಪದಾಧಿಕಾರಿಗಳು, ಕಾಂಗ್ರೆಸ್ ಸಚಿವರು, ಶಾಸಕರು ಒಳಗೊಂಡಂತೆ ಎಲ್ಲರಿಗೂ ಸೂಕ್ತವಾದ ತರಬೇತಿ ನೀಡುವ ನಿಟ್ಟಿನಲ್ಲಿ ಕಾರ್ಯಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವ ರೀತಿಯ ವಾತಾವರಣ ಇಲ್ಲ. ಹೀಗಾಗಿ ನಮ್ಮ ಮುಂದಿನ ಗುರಿ ಕೆಪಿಸಿಸಿಯನ್ನು ಬಲಿಷ್ಠವಾಗಿ ಕಟ್ಟುವುದಾಗಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಳೆದ ಚುನಾವಣೆಯ ಲೋಕಸಭಾ ಅಭ್ಯರ್ಥಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News