ಕೃಷಿಗಾಗಿಯೇ ಕೃಷಿ ಸಾಲ ಬಳಸಿಕೊಳ್ಳಿ: ಸಚಿವ ಮನಗೂಳಿ ಮನವಿ

Update: 2019-06-26 15:10 GMT

ಬೆಂಗಳೂರು, ಜೂ.26 : ರೈತರು ಪಡೆದ ಸಾಲ ಸ್ವ-ಉದ್ದೇಶಕ್ಕಾಗಿ ಬಳಸಿಕೊಂಡಾಗಲೇ ರೈತ ಆರ್ಥಿಕವಾಗಿ ವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದು ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಹೇಳಿದ್ದಾರೆ.

ನಗರದ ಟಾಟಾ ಸಭಾಂಗಣದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ಖರೀದಿದಾರರು-ಮಾರಾಟಗಾರರ ಭೇಟಿ ಕುರಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕೃಷಿಗಾಗಿ ಸಾಲ ಪಡೆಯುತ್ತಾರೆ. ಬಳಿಕ ಅದನ್ನು ಕೃಷಿ ಚಟುವಟಿಕೆಗಳ ಬದಲಿಗೆ ಬೇರೆ ಕೆಲಸಗಳಿಗೆ ಬಳಸಿಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಕೃಷಿ ಕ್ಷೇತ್ರ ಅಭಿವೃದ್ಧಿಯಾಗುವುದು ಕಷ್ಟಸಾಧ್ಯ. ಅಲ್ಲದೆ, ರೈತರು ಆರ್ಥಿಕವಾಗಿ ಹಿಂದುಳಿಯುತ್ತಾರೆ. ಹೀಗಾಗಿ, ರೈತರು ಪಡೆದ ಸಾಲವನ್ನು ಯಾವ ಉದ್ದೇಶಕ್ಕಾಗಿ ಪಡೆಯುತ್ತಾರೋ ಅದಕ್ಕೆ ಉಪಯೋಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಮ್ಮ ದೇಶದಲ್ಲಿ ಎಲ್ಲರಿಗೂ ಸಂಪೂರ್ಣವಾಗಿ ಅಗತ್ಯವಾಗಿರುವ ಆಹಾರ ಪದಾರ್ಥಗಳ ಉತ್ಪಾದನೆ ಸಾಧ್ಯವಾಗಿಲ್ಲ. ಹಲವಾರು ಪದಾರ್ಥಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಹೀಗಾಗಿ, ರೈತರು ಲಾಭದಾಯಕ ಬೆಳೆಗಳನ್ನು ಅಷ್ಟೇ ಬೆಳೆಯುವುದರ ಬದಲಿಗೆ ಆಹಾರದ ಕೊರತೆ ನೀಗಿಸುವ ನಿಟ್ಟಿನಲ್ಲಿ ಎಲ್ಲ ಬೆಳೆಗಳನ್ನು ಬೆಳೆಯುವುದು ಉತ್ತಮ ಎಂದು ಹೇಳಿದರು.

ರೈತರು ನಮ್ಮ ದೇಶದ ಬೆನ್ನೆಲುಬು ಆಗಿದ್ದು, ಅವರು ಉದ್ಧಾರವಾದಾಗಲೇ ದೇಶ ಉದ್ಧಾರವಾಗುತ್ತದೆ ಎಂದ ಅವರು, ತೋಟಗಾರಿಕೆ ಬೆಳೆಗಳು ರೈತರಿಗೆ ದೀರ್ಘಾವಧಿಯವರೆಗೆ ಹೆಚ್ಚು ಲಾಭ ತಂದುಕೊಡುತ್ತದೆ. ಆದುದರಿಂದಾಗಿ ರೈತರು ತೋಟಗಾರಿಕೆ ಬೆಳೆ ಬೆಳೆಯಲು ಮುಂದಾಗಬೇಕು. ಕೃಷಿಗಿಂತಲೂ ತೋಟಗಾರಿಕೆಯಲ್ಲಿ ರೈತರಿಗೆ ಹೆಚ್ಚಿನ ಆದಾಯವಿದೆ ಎಂದು ನುಡಿದರು.

ತರಕಾರಿ ಬೆಳೆಗಳನ್ನು ವೈಜ್ಞಾನಿಕವಾಗಿ ಬೆಳೆಯುವುದರ ಮೂಲಕ ಹೆಚ್ಚು ಲಾಭ ಪಡೆಯಬಹುದು ಎಂದ ಸಚಿವರು, ಒಬ್ಬ ರೈತ ಒಂದು ಎಕರೆ ಪ್ರದೇಶದಲ್ಲಿ ಹಲವಾರು ಬೆಳೆಗಳನ್ನು ಬೆಳೆಯಲು ಸಾಧ್ಯವಿದೆ. ಒಂದು ಕುಟುಂಬ ನಿರ್ಭಯದಿಂದಾಗಿ ಜೀವಿಸಲು ಸಾಧ್ಯವಾಗುವಷ್ಟನ್ನು ಒಂದು ಎಕರೆ ಪ್ರದೇಶದಲ್ಲಿ ಬೆಳೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಹಣ್ಣಿನ ಗಿಡಗಳ ಜತೆಗೆ ಮೇವಿನ ಬೆಳೆಗಳು, ತರಕಾರಿ, ಹೂವಿನ ಗಿಡಗಳನ್ನು ಒಟ್ಟಿಗೆ ಬೆಳೆಯಬಹುದಾಗಿದೆ. ನೀರಿನ ಕೊರತೆ ಇರುವವರು ಮಿತ ನೀರನ್ನು ಬಳಕೆ ಮಾಡಬಹುದು ಅಥವಾ ಕೃಷಿ ಹೊಂಡಗಳ ಮೂಲಕ ನೀರನ್ನು ಶೇಖರಿಸಿ ಉಪಯೋಗಿಸಿಕೊಳ್ಳಬಹುದು. ಈ ಸಂಬಂಧ ಈಗಾಗಲೇ ಮಾದರಿ ಕೃಷಿ ಮಾಡಿರುವವರ ಬಳಿ ತರಬೇತಿಯನ್ನೂ ಪಡೆಯಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ನಿರ್ದೇಶಕ ಡಾ.ಎಂ.ವಿ.ವೆಂಕಟೇಶ್, ಕಾರ್ಯದರ್ಶಿ ರಾಜೇಂದ್ರ ಕುಮಾರ ಕಟಾರಿಯಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News