2512 ಕಿ.ಮೀ. ಮಳೆ ನೀರು ಕಾಲುವೆ ಅಭಿವೃದ್ಧಿ: ಸಚಿವ ಯು.ಟಿ.ಖಾದರ್

Update: 2019-06-26 15:29 GMT

ಬೆಂಗಳೂರು, ಜೂ.26: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 2512 ಕಿ.ಮೀ.ಮಳೆ ನೀರು ಕಾಲುವೆಯಿದ್ದು, 2707 ಕೋಟಿ ರೂ.ಅಂದಾಜು ವೆಚ್ಚದಲ್ಲಿ ಕಾಲುವೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ನಗಾರಾಭಿವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದರು.

ಬುಧವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2512 ಕಿ.ಮೀ.ಮಳೆ ನೀರು ಕಾಲುವೆ ಪೈಕಿ 1595 ಕಿ.ಮೀ ಚಪ್ಪಡಿ ಕಲ್ಲು ಹಾಗೂ ಕಾಂಕ್ರೀಟ್ ಮಾರ್ಗವನ್ನು ಹೊಂದಿದ್ದರೆ, 917 ಕಿ.ಮೀ ಮಣ್ಣಿನ ಮಾರ್ಗವಿದೆ ಎಂದರು.

ಬಿಬಿಎಂಪಿ, ಬೆಳಗಾವಿ, ಬಳ್ಳಾರಿ, ದಾವಣಗೆರೆ, ಕಲಬುರಗಿ(ಗುಲ್ಬರ್ಗ), ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು, ತುಮಕೂರು, ಶಿವಮೊಗ್ಗ ಹಾಗೂ ವಿಜಯಪುರ(ಬಿಜಾಪುರ) ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮಳೆ ನೀರು ಕಾಲುವೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಖಾದರ್ ಹೇಳಿದರು.

ನಗರ ವ್ಯಾಪ್ತಿಯಲ್ಲಿ ರಾಜಕಾಲುವೆಗಳ ಒತ್ತುವರಿ ಸಮಸ್ಯೆ ಹೆಚ್ಚಿದೆ. ಎಲ್ಲ ಮಹಾನಗರ ಪಾಲಿಕೆ ವ್ಯಾಪ್ತಿಯ ರಾಜಕಾಲುವೆಗಳನ್ನು ಸುಸ್ಥಿತಿಗೆ ತರಲು ನಿರ್ಧರಿಸಲಾಗಿದೆ. ಈ ಕುರಿತು ಕಾರ್ಯಸಾಧು ವರದಿ ಸಿದ್ಧಪಡಿಸಲು ರಾಜ್ಯ ನಗರ ಮೂಲ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ ಸೂಚಿಸಲಾಗಿದ್ದು, ಮೂರು ತಿಂಗಳಲ್ಲಿ ವರದಿ ಸಿದ್ಧಪಡಿಸಲಾಗುತ್ತದೆ ಎಂದು ಖಾದರ್ ಹೇಳಿದರು.

ಮುಖ್ಯಮಂತ್ರಿ ಪರ ವಕಾಲತ್ತು: ಜನಸಾಮಾನ್ಯರ ಕಷ್ಟವನ್ನು ಅರಿಯಲು ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಶೇ.98ರಷ್ಟು ಗ್ರಾಮ ವಾಸ್ತವ್ಯ ಯಶಸ್ವಿಯಾಗಿದೆ. ಇದನ್ನು ನಾವು ನೀವು ಎಲ್ಲರೂ ಅಭಿನಂದಿಸಬೇಕು ಎಂದು ಅವರು ತಿಳಿಸಿದರು.

ಲಾಠಿಚಾರ್ಜ್ ಮಾಡುವುದಾಗಿ ಮುಖ್ಯಮಂತ್ರಿ ತಮಾಷೆಗೆ ಮಾತನಾಡಿರಬಹುದು. ಅಣ್ಣನೋ, ತಮ್ಮನೋ ಎಂದು ಭಾವಿಸಿ ಹೀಗೆ ಮಾತನಾಡಿದ್ದಾರೆ ಅಷ್ಟೇ. ಯಾರ ಮನಸ್ಸಿಗೂ ನೋವುಂಟು ಮಾಡುವ ಉದ್ದೇಶ ಮುಖ್ಯಮಂತ್ರಿಗಿರಲಿಲ್ಲ. ಲಾಠಿಚಾರ್ಜ್ ಮಾಡಿಸುವಷ್ಟು ಕೆಟ್ಟವರಲ್ಲ ಎಂದು ಖಾದರ್ ಹೇಳಿದರು.

ಈ ಹಿಂದೆ ಅಧಿಕಾರದಲ್ಲಿದ್ದವರು ರೈತರ ಮೇಲೆ ಗೋಲಿಬಾರ್ ಮಾಡಿಸಲಿಲ್ಲವೇ? ಮುಖ್ಯಮಂತ್ರಿ ಯಾರಿಗೂ ನೋವುಂಟು ಮಾಡುವವರಲ್ಲ. ಹಿರಿಯರು-ಕಿರಿಯರು ಎಲ್ಲರಿಗೂ ಗೌರವಕೊಟ್ಟು, ಜನಸಾಮಾನ್ಯರ ಜೊತೆ ಬೆರೆಯುವ ಮುಖ್ಯಮಂತ್ರಿ, ಇವತ್ತು ಯಾಕೆ ಲಾಠಿಚಾರ್ಜ್ ಮಾಡಿಸುತ್ತೇನೆ ಎಂದು ಹೇಳಿದ್ದಾರೋ ಗೊತ್ತಿಲ್ಲ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News