ಎಸ್‌ಇಸಿ ವಿದ್ಯಾರ್ಥಿಗಳಿಂದ ಆ್ಯಂಬುಲೆನ್ಸ್ ಸಂಚಾರಕ್ಕೆ ಸ್ವಿಫ್ಟ್ ಪ್ಯಾಸೇಜ್ ಆವಿಷ್ಕಾರ

Update: 2019-06-26 18:59 GMT

ಬೆಂಗಳೂರು, ಜೂ.26: ನಗರ ಪ್ರದೇಶಗಳಲ್ಲಿ ಅತಿಯಾದ ವಾಹನ ದಟ್ಟನೆಯಿಂದ ಆ್ಯಂಬುಲೆನ್ಸ್‌ಗಳಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸುವ ಸಲುವಾಗಿ ಬೆಂಗಳೂರಿನ ಸಪ್ತಗಿರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ‘ಸ್ವಿಫ್ಟ್ ಪ್ಯಾಸೇಜ್’ ಎಂಬ ಹೊಸ ಮಾದರಿಯನ್ನು ಆವಿಷ್ಕರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಲೇಜಿನ ಪ್ರೊ.ಕೆ.ದಿನೇಶ್ ಅನ್ವೆಕರ್, ಟ್ರಾಫಿಕ್ ಲೈಟ್ಸ್ ಜಂಕ್ಷನ್‌ಗಳಲ್ಲಿ ಆ್ಯಂಬುಲೆನ್ಸ್‌ಗಳು ವಾಹನ ದಟ್ಟನೆಯಲ್ಲಿ ಸಿಲುಕಿಕೊಳ್ಳುತ್ತವೆ. ಹೀಗಾಗಿ ಟ್ರಾಫಿಕ್‌ನವರು ನಿಯಂತ್ರಣ ತೆಗೆದುಕೊಂಡಾಗ ಆ್ಯಂಬುಲೆನ್ಸ್ ಮುಂದೆ ಸಾಗುತ್ತವೆ. ಇಂತಹ ವಾಹನ ದಟ್ಟನೆ ಸಮಸ್ಯೆಯನ್ನು ಅವಲೋಕಿಸಿದ ವಿದ್ಯಾರ್ಥಿಗಳು ಟ್ರಾಫಿಕ್ ಜಂಕ್ಷನ್‌ನಲ್ಲಿ ತ್ವರಿತವಾಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಹೊಸ ಮಾದರಿಯನ್ನು ಕಂಡು ಹಿಡಿದಿದ್ದಾರೆ ಎಂದು ತಿಳಿಸಿದರು.

ಸ್ವಿಫ್ಟ್ ಪ್ಯಾಸೇಜ್‌ನ ಕಾರ್ಯ ವಿಧಾನ: ಟ್ರಾಫಿಕ್ ಲೈಟ್ಸ್ ಘಟಕಗಳಲ್ಲಿ 2 ಮೈಕ್ರೋಕಂಟ್ರೋಲರ್ ಬೋರ್ಡ್‌ಗಳು ಹಾಗೂ ದೀಪದೊಳಗೆ ಒಂದು ಮೈಕ್ರೋಕಂಟ್ರೋಲರ್ ಮೂಲಕ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಕಾರ್ಯಗಳನ್ನು ಅಳವಡಿಸಲಾಗಿರುತ್ತದೆ. ಟ್ರಾಫಿಕ್ ದೀಪಗಳ ನಿಯಂತ್ರಣ ವ್ಯವಸ್ಥೆಯು ಕೆಂಪು ದೀಪದ ಮೇಲೆ ಲೈಟ್ ಕೋಡ್ ಸೀಕ್ವೇನ್ಸ್ ಡಿಟೆಕ್ಟರ್ ಜೊತೆಗೆ ಶಕ್ತಿಯುತವಾದ ದೀಪ ಹೊರಸೂಸುವ ಬೆಳಕಿನ ನಾಡಿಯು ಅನುಕ್ರಮವಾಗಿ ಕೆಲಸ ಮಾಡುತ್ತದೆ.

ಭಾರೀ ವಾಹನ ದಟ್ಟನೆಯ ಸಂದರ್ಭದಲ್ಲಿ ಆ್ಯಂಬುಲೆನ್ಸ್ ಚಾಲಕ ಲೈಟ್ ಸೆನ್ಸಾರ್‌ನಲ್ಲಿ ಬೆಳಕಿನ ಕಿರಣಗಳನ್ನು ಒತ್ತಿದ್ದಾಗ ಸುತ್ತಲೂ ಕಪ್ಪು- ಹಳದಿಯ ದೀಪ ಸ್ಪಷ್ಟವಾಗಿ ಕಂಡುಬರುತ್ತದೆ. ನಂತರ ಆ್ಯಂಬುಲೆನ್ಸ್ ಟ್ರಾಫಿಕ್ ಜಂಕ್ಷನ್ ಮೂಲಕ ಹಾದು ಹೋಗಲು ಅನುವು ಮಾಡಿಕೊಡುತ್ತದೆ. ಹಸಿರು ಸಂಕೇತವನ್ನು ಪ್ರದರ್ಶಿಸಲು ವಿಶಿಷ್ಟವಾದ ಬೆಳಕಿನ ಅನುಕ್ರಮ ಅಗತ್ಯವಿರುವುದರಿಂದ ಅನಧಿಕೃತ ವ್ಯಕ್ತಿಗಳು ಅದನ್ನು ಇತರ ಬೆಳಕಿನ ಮೂಲಕ ಸಕ್ರಿಯಗೊಳಿಸಲು ಪ್ರಯತ್ನಿಸಿದರ ವಿರುದ್ಧ ಹೋರಾಡುತ್ತದೆ ಎಂದು ಅವರು ಮಾಹಿತಿ ನೀಡಿದರು.

ಇನ್ನು, ಸಪ್ತಗಿರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮಾಡಿರುವ ಆವಿಷ್ಕಾರಕ್ಕೆ ಪೇಟೆಂಟ್ ಪಡೆಯಲು ಸಂಸ್ಥೆಗೆ ಅರ್ಜಿ ಸಲ್ಲಿಸಿದ್ದು, ಎಲೆಕ್ಟ್ರಾನಿಕ್ಸ್ ಹಾಗೂ ಸಂವಹನ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಬಿ.ಎಸ್.ನಿತಿನ್, ಬಿ.ಕೆ.ಹರ್ಷಿತ್, ವಿಎಂ ಪ್ರತಿಕಾ, ಹಾಗೂ ಎಚ್.ಪಿ.ಧನುಷ್ ಭಾರದ್ವಾಜ್ ಸೇರಿದಂತೆ ಇತರೆ ವಿದ್ಯಾರ್ಥಿಗಳ ತಂಡವು 3 ಸಾವಿರ ರೂ. ವೆಚ್ಚದಲ್ಲಿ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News