ನ್ಯೂ ರಿಟರ್ನ್ಸ್, ಇ-ವೇ ಬಿಲ್, ಇ-ಇನ್ವಾಯ್ಸಾ ಜಾರಿಗೆ ಸಿದ್ಧತೆ: ಬಿಹಾರ ಡಿಸಿಎಂ ಸುಶೀಲ್‌ ಮೋದಿ

Update: 2019-06-29 16:42 GMT

ಬೆಂಗಳೂರು, ಜೂ.29: ತೆರಿಗೆ ಪಾವತಿಸುವುದನ್ನು ಮತ್ತಷ್ಟು ಸರಳೀಕರಣಗೊಳಿಸುವ ಉದ್ದೇಶದಿಂದ ನ್ಯೂ ರಿಟರ್ನ್ಸ್, ಇ-ವೇ ಬಿಲ್ ಹಾಗೂ ಇ-ಇನ್ವಾಯ್ಸಾ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲು ಸಿದ್ಧತೆ ಮಾಡಲಾಗಿದೆ ಎಂದು ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್‌ಕುಮಾರ್ ಮೋದಿ ತಿಳಿಸಿದರು.

ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಕ್ಟೋಬರ್ 1 ರಿಂದ ನ್ಯೂ ರಿಟರ್ನ್ಸ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ. ಹೊಸದಾಗಿ ತೆರಿಗೆ ಪಾವತಿಸುವವರು ಹಾಗೂ ಶೂನ್ಯ ಆದಾಯದವರು ಎಸ್‌ಎಂಎಸ್ ಮೂಲಕವೇ ಮಾಹಿತಿ ನೀಡಬಹುದಾಗಿದೆ ಎಂದರು.

ಜಿಎಸ್‌ಟಿ ಜುಲೈ 1ರಂದು ಎರಡು ವರ್ಷ ಪೂರ್ಣಗೊಳಿಸಲಿದೆ. ಜಿಎಸ್‌ಟಿಯಲ್ಲಿ ಮತ್ತಷ್ಟು ಸರಳೀಕರಣ ಮಾಡಲು ಉದ್ದೇಶಿಸಲಾಗಿದೆ. ನ್ಯೂ ರಿಟರ್ನ್ಸ್‌ಗೆ ಸಂಬಂಧಿಸಿದ ಸಾಫ್ಟ್‌ವೇರ್ ಅಭಿವೃದ್ಧಿಪಡಿಸುವ ಕುರಿತು ಇನ್ಫೋಸಿಸ್ ಜೊತೆ ಚರ್ಚೆ ಮಾಡಲಾಗಿದೆ ಎಂದು ಸುಶೀಲ್‌ಕುಮಾರ್ ಮೋದಿ ಹೇಳಿದರು.

ರಫ್ತುದಾರರಿಗೆ ಆನ್‌ಲೈನ್ ಮೂಲಕ ‘ರೀಫಂಡ್’ ನೀಡುವಲ್ಲಿ ಹೆಚ್ಚಿನ ತೊಂದರೆಗಳು ಎದುರಾಗುತ್ತಿದ್ದವು. ಕೇಂದ್ರ ಜಿಎಸ್‌ಟಿ ಹಾಗೂ ರಾಜ್ಯ ಜಿಎಸ್‌ಟಿ ಮೂಲಕ ಪ್ರತ್ಯೇಕವಾಗಿ ಪರಿಹಾರ ನೀಡಲಾಗುತ್ತಿತ್ತು. ಇನ್ನು ಮುಂದೆ ಒಂದೇ ಮೂಲದಿಂದ ಪರಿಹಾರ ನೀಡಲಾಗುವುದು. ಸೆಪ್ಟಂಬರ್ ತಿಂಗಳಿನಿಂದ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದರು.

ಅಂಟಿ ಪ್ರಾಫಿಟೇರಿಂಗ್ ಅಥಾರಿಟಿಯ ಕಾರ್ಯ ಅವಧಿಯನ್ನು ಎರಡು ವರ್ಷಗಳ ಅವಧಿಗೆ ವಿಸ್ತರಿಸಲಾಗಿದೆ. ಇ-ವೇ ಬಿಲ್‌ನಲ್ಲಿ ವಂಚನೆ ಮಾಡದಂತೆ ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕಾಗಿ ಕರ್ನಾಟಕ ಸರಕಾರ, ವಾಣಿಜ್ಯ ತೆರಿಗೆ ವಿಭಾಗ ಹಾಗೂ ಎನ್‌ಐಸಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದನ್ನು ರಾಷ್ಟ್ರಮಟ್ಟದಲ್ಲಿ ತೆಗೆದುಕೊಂಡು ಹೋಗುತ್ತೇವೆ ಎಂದು ಸುಶೀಲ್ ಕುಮಾರ್ ಮೋದಿ ಹೇಳಿದರು.

ಪಾಶ್ಚಿಮಾತ್ಯ ದೇಶಗಳಲ್ಲಿ ಇರುವಂತೆ ನಮ್ಮ ದೇಶದಲ್ಲಿಯೂ ‘ಇ-ಇನ್ವಾಯ್ಸಾ’ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಇದರಿಂದಾಗಿ, ತೆರಿಗೆಯ ಬಗ್ಗೆ ಪ್ರತ್ಯೇಕ ಮಾಹಿತಿ ನೀಡುವ ಅಗತ್ಯವಿರುವುದಿಲ್ಲ. ಇ-ಇನ್ವಾಯ್ಸಾ ಮೂಲಕವೇ ಎಲ್ಲ ಮಾಹಿತಿ ಸಂಗ್ರಹಿಸಿ, ಅದರ ಮೂಲಕವೇ ರಿಟರ್ನ್ಸ್ ಸಿದ್ಧವಾಗುತ್ತದೆ ಎಂದು ಅವರು ಹೇಳಿದರು.

ದೇಶದಲ್ಲಿರುವ ಟೋಲ್ ಪ್ಲಾಝಾಗಳ ಮೂಲಕ ಹಾದು ಹೋಗುವ ವಾಹನಗಳಿಗೆ ಆರ್‌ಎಫ್‌ಐ ಟ್ಯಾಗ್ ಬಳಸಲು ನಿರ್ಧರಿಸಲಾಗಿದ್ದು, ಕೆಲವು ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಬಳಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಇದನ್ನು ನಿರ್ವಹಣೆ ಮಾಡುತ್ತಿದೆ ಎಂದು ಸುಶೀಲ್‌ಕುಮಾರ್ ಮೋದಿ ತಿಳಿಸಿದರು.

ಕಾಲಮಿತಿ ನಿಗದಿಗೊಳಿಸಿ ಎಲ್ಲ ವಾಹನಗಳಿಗೂ ಆರ್‌ಎಫ್‌ಐ ಟ್ಯಾಗ್ ಅಳವಡಿಕೆ ಕಡ್ಡಾಯಗೊಳಿಸಿದರೆ, ಯಾವ ಯಾವ ವಾಹನಗಳು ಎಲ್ಲಿ ಎಲ್ಲಿ ಸಂಚರಿಸಿವೆ ಎಂಬ ಮಾಹಿತಿ ಸುಲಭವಾಗಿ ಸಿಗುತ್ತದೆ. ಜಿಎಸ್‌ಟಿ ಕೌನ್ಸಿಲ್ ದೇಶದಲ್ಲಿ ತೆರಿಗೆ ಕಳ್ಳತನಕ್ಕೆ ಕಡಿವಾಣ ಹಾಕಲು ಈ ಎಲ್ಲ ಸಿದ್ಧತೆಗಳನ್ನು ಮಾಡುತ್ತಿದೆ ಎಂದು ಅವರು ಹೇಳಿದರು.

ತೆರಿಗೆ ಆದಾಯದ ವಿವರ: 2017-18ರಲ್ಲಿ 7.40 ಲಕ್ಷ ಕೋಟಿ ರೂ.(ಜಿಎಸ್‌ಟಿ ಜಾರಿಯಾದ 9 ತಿಂಗಳ ಅವಧಿಯಲ್ಲಿ), 2018-19ರಲ್ಲಿ 11.77 ಲಕ್ಷ ಕೋಟಿ ರೂ.ತೆರಿಗೆ ಸಂಗ್ರಹವಾಗಿದೆ. ಮೊದಲ ವರ್ಷದ 9 ತಿಂಗಳಲ್ಲಿ ಪ್ರತಿ ತಿಂಗಳು 82,295 ಕೋಟಿ ರೂ.ತೆರಿಗೆ ಸಂಗ್ರಹವಿದ್ದರೆ, 2018-19ರಲ್ಲಿ ಪ್ರತಿ ತಿಂಗಳು ಸರಾಸರಿ 98,114 ಕೋಟಿ ರೂ.ಸಂಗ್ರಹವಾಗಿದೆ ಎಂದು ಸುಶೀಲ್‌ಕುಮಾರ್ ಮೋದಿ ಮಾಹಿತಿ ನೀಡಿದರು.

ಜಿಎಸ್‌ಟಿ ಜಾರಿಗೆ ಮುನ್ನ 2015-16ರಲ್ಲಿ ರಾಜ್ಯ ಹಾಗೂ ಕೇಂದ್ರದ ತೆರಿಗೆ ಸಂಗ್ರಹ ಪ್ರತಿ ತಿಂಗಳು 70 ಸಾವಿರ ಕೋಟಿ ರೂ.ಗಳಿತ್ತು. ಜಿಎಸ್‌ಟಿ ಜಾರಿಯಾದ ನಂತರ 2017-18ನಲ್ಲಿ 98,114 ಕೋಟಿ ರೂ.ಆಗಿದೆ. ಎಲ್ಲ ರಾಜ್ಯಗಳಲ್ಲಿ ತೆರಿಗೆ ಸಂಗ್ರಹದ ಬೆಳವಣಿಗೆ ಉತ್ತಮವಾಗಿದೆ. ಜಿಎಸ್‌ಟಿ ಕೌನ್ಸಿಲ್ ಎಲ್ಲ ರಾಜ್ಯಗಳಲ್ಲಿ ಪ್ರತಿ ವರ್ಷ ಶೇ.14ರಷ್ಟು ತೆರಿಗೆ ಸಂಗ್ರಹದ ಬೆಳವಣಿಗೆಯಾಗುವಂತೆ ಕಾರ್ಯಕ್ರಮ ರೂಪಿಸುತ್ತಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್, ಜಿಎಸ್‌ಟಿಎನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News