ಶೇ. 16 ತಾಲೂಕು, ಮಂಡಲ, ಬ್ಲಾಕ್‌ಗಳಲ್ಲಿ ಅಂತರ್ಜಲ ‘ಅತಿ ಹೆಚ್ಚು ಬಳಕೆ’: ದತ್ತಾಂಶ

Update: 2019-06-30 16:33 GMT

ಹೊಸದಿಲ್ಲಿ, ಜೂ. 30: ದೇಶದ ಶೇ. 16 ತಾಲೂಕು, ಮಂಡಲ ಹಾಗೂ ಬ್ಲಾಕ್ ಮಟ್ಟದ ಘಟಕಗಳ ಅಂತರ್ಜಲ ಮಟ್ಟ ‘ಅತಿ ಹೆಚ್ಚು ಬಳಕೆ’ ವರ್ಗದ ಅಡಿಯಲ್ಲಿ ಬರುತ್ತದೆ. ಶೇ. 4 ‘ಗಂಭೀರ’ ವರ್ಗದ ಅಡಿಯಲ್ಲಿ ಬರುತ್ತದೆ ಎಂದು ಸರಕಾರದ ದತ್ತಾಂಶ ಬಹಿರಂಗಪಡಿಸಿದೆ.

6,584 ಬ್ಲಾಕ್, ಮಂಡಲ ಹಾಗೂ ತಾಲೂಕು ಮಟ್ಟದ ಘಟಕಗಳ ಅಂತರ್ಜಲ ಮಟ್ಟವನ್ನು ಮೌಲ್ಯಮಾಪನ ಮಾಡಿರುವ ಕೇಂದ್ರ ಅಂತರ್ಜಲ ಮಂಡಳಿ, ಇದರಲ್ಲಿ 4,520 ಘಟಕಗಳು ‘ಸುರಕ್ಷಾ ವರ್ಗ’ದ ಅಡಿಯಲ್ಲಿ ಬರುತ್ತದೆ ಎಂದು ಕಳೆದ ವಾರ ಲೋಕಸಭೆಯಲ್ಲಿ ನೀಡಲಾದ ದತ್ತಾಂಶದಲ್ಲಿ ಹೇಳಿದೆ.

1,034ಕ್ಕೂ ಅಧಿಕ ಘಟಕಗಳನ್ನು ‘ಅತಿಯಾದ ಬಳಕೆ’ ವರ್ಗದ ಅಡಿಯಲ್ಲಿ ಗುರುತಿಸಲಾಗಿದೆ ಎಂದು ದತ್ತಾಂಶ ತಿಳಿಸಿದೆ.

ದೇಶದ ಒಟ್ಟು ಅಂಕಿ-ಅಂಶದ ಶೇ. 10ರಷ್ಟಾಗುವ ಸುಮಾರು 681 ಬ್ಲಾಕ್, ಮಂಡಲ, ತಾಲೂಕು ಮಟ್ಟದ ಘಟಕಗಳು ‘ಅರೆ ಗಂಭೀರ’ ವರ್ಗದ ಅಡಿಯಲ್ಲಿ ಬರುತ್ತದೆ. 253 ಘಟಕಗಳನ್ನು ‘ಗಂಭೀರ’ ವರ್ಗದಲ್ಲಿ ಬರುತ್ತದೆ. ಸುಮಾರು ಶೇ. 1 ಬ್ಲಾಕ್, ಮಂಡಲ ಹಾಗೂ ತಾಲೂಕುಗಳಲ್ಲಿ ಲವಣಯುಕ್ತ ನೀರು ಕಂಡು ಬಂದಿದೆ. ಈ ಅಂಕಿ-ಅಂಶ ಸರಕಾರದ 2013ರ ಮೌಲ್ಯಮಾಪನವನ್ನು ಆಧಾರವಾಗಿ ಹೊಂದಿದೆ.

 ‘‘2013ರ ಮೌಲ್ಯಮಾಪನದಂತೆ ಮೌಲ್ಯಮಾಪನ ಮಾಡಲಾದ ಒಟ್ಟು 6,584 ಘಟಕ (ಬ್ಲಾಕ್, ತಾಲೂಕು, ಮಂಡಲಗಳು)ಗಳಲ್ಲಿ 17 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿರುವ 1,034 ಘಟಕಗಳು ‘ಅತಿ ಹೆಚ್ಚು ಬಳಕೆ’ ಅಡಿಯಲ್ಲಿ ವರ್ಗೀಕರಿಸಲಾಗಿದೆ.

253 ಘಟಕಗಳನ್ನು ‘ಗಂಭೀರ’ ಎಂದು ವರ್ಗೀಕರಿಸಲಾಗಿದೆ. 681 ಘಟಕಗಳನ್ನು ‘ಅರೆ ಗಂಭೀರ’, 4,520 ಘಟಕಗಳನ್ನು ‘ಸುರಕ್ಷಿತ’ ಎಂದು ವರ್ಗೀಕರಿಸಲಾಗಿದೆ ಎಂದು ಜಲಶಕ್ತಿ ಸಚಿವಾಲಯದ ಸಹಾಯಕ ಸಚಿವರು ಕಳೆದ ವಾರ ಸಂಸತ್ತಿನಲ್ಲಿ ಮಾಹಿತಿ ನೀಡಿದರು.

   ಅಂತರ್ಜಲ ‘ಅತಿ ಹೆಚ್ಚು ಬಳಕೆ’ಯಲ್ಲಿ ಪಂಜಾಬ್ (ಶೇ. 76) ಹಾಗೂ ರಾಜಸ್ಥಾನ (ಶೇ. 66) ಮೊದಲಿನ ಸ್ಥಾನದಲ್ಲಿದೆ. ಅನಂತರದ ಸ್ಥಾನವನ್ನು ದಿಲ್ಲಿ (ಶೇ. 56) ಹಾಗೂ ಹರ್ಯಾಣ (ಶೇ. 54) ಪಡೆದುಕೊಂಡಿದೆ. ಪಶ್ಚಿಮಬಂಗಾಳ, ಉತ್ತರಾಖಂಡ, ತ್ರಿಪುರಾ, ಒಡಿಶ್ಶಾ, ನಾಗಾಲ್ಯಾಂಡ್, ಮೇಘಾಲಯ ಮಿಝೊರಾಮ್, ಮಣಿಪುರ, ಜಮ್ಮುಕಾಶ್ಮೀರ, ಅಸ್ಸಾಂ, ಅರುಣಾಚಲಪ್ರದೇಶ ಹಾಗೂ ಗೋವಾದಲ್ಲಿ ಅಂತರ್ಜಲ ಅತಿಯಾದ ಬಳಕೆಯಾಗಿರುವ ಬಗ್ಗೆ ವರದಿಯಾಗಿಲ್ಲ.

 12 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಅರುಣಾಚಲ ಪ್ರದೇಶ, ಅಸ್ಸಾಂ, ಗೋವಾ, ಮಣಿಪುರ, ಮೇಘಾಲಯ, ಮಿಝೊರಾಮ್, ನಾಗಾಲ್ಯಾಂಡ್, ಅಂಡಮಾನ್ ಹಾಗೂ ನಿಕೋಬಾರ್, ಚಂಡಿಗಢ, ದಾದ್ರಾ ಹಾಗೂ ನಗರಹವೇಲಿಯ ಎಲ್ಲ ಬ್ಲಾಕ್, ತಾಲೂಕು, ಮಂಡಲ ಮಟ್ಟದ ಘಟಕಗಳಲ್ಲಿ ಅಂತರ್ಜಲದ ಮಟ್ಟ ಸುರಕ್ಷಿತ ವರ್ಗದಲ್ಲಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News