ಉತ್ತರ ಪ್ರದೇಶ: ಸಂಬಂಧಿಕರು, ಶಿಕ್ಷಕನಿಂದ ವಿದ್ಯಾರ್ಥಿನಿಯ ಅತ್ಯಾಚಾರ

Update: 2019-06-30 18:30 GMT

ಲಕ್ನೋ, ಜೂ.30: ಹೈಸ್ಕೂಲ್ ವಿದ್ಯಾರ್ಥಿನಿಯ ಮೇಲೆ ನಾಲ್ವರು ಸಂಬಂಧಿಕರು ಹಾಗೂ ಶಿಕ್ಷಕ ಅತ್ಯಾಚಾರ ಎಸಗಿರುವ ಘಟನೆ ಉತ್ತರಪ್ರದೇಶದ ಸೀತಾಪುರ ನಗರದ ಸರಕಾರಿ ಶಾಲೆಯ ಆವರಣದಲ್ಲಿ ನಡೆದಿದೆ. ಆರೋಪಿಗಳು ಘಟನೆಯ ವೀಡಿಯೊ ಚಿತ್ರೀಕರಿಸಿ ಇದನ್ನು ಸಂತ್ರಸ್ತ ಯುವತಿಯ ಕುಟುಂಬದವರ ವಾಟ್ಸಾಪ್‌ಗೆ ಕಳಿಸಿದ್ದ ಕಾರಣ ಈ ಘಟನೆ ಬೆಳಕಿಗೆ ಬಂದಿದೆ.

ವಿದ್ಯಾರ್ಥಿನಿ 16 ವರ್ಷದವಳಾಗಿದ್ದಾಳೆ. ಆಕೆಗೆ ನಿದ್ರೆಯ ಮಾತ್ರೆ ನೀಡಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದು ಇದನ್ನು ಓರ್ವ ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ನೀನು ಆಟದ ಮೈದಾನದಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಕಾರಣ ನಿನ್ನನ್ನು ಇಲ್ಲಿಗೆ ಕರೆ ತಂದಿದ್ದೇವೆ ಎಂದು ಯುವತಿಗೆ ಪ್ರಜ್ಞೆ ಮರಳಿದ ಬಳಿಕ ಆರೋಪಿಗಳು ತಿಳಿಸಿದ್ದಾರೆ. ಆದರೆ ಘಟನೆಯ ವೀಡಿಯೊವನ್ನು ಓರ್ವ ಆರೋಪಿ ವಾಟ್ಸಾಪ್ ಗ್ರೂಪ್‌ನಲ್ಲಿ ಹಂಚಿಕೊಂಡಿದ್ದು ಇದು ಯುವತಿಯ ಮನೆಯವರ ಗಮನಕ್ಕೆ ಬಂದ ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ನಾಲ್ವರು ಆರೋಪಿಗಳು ಯುವತಿಯ ಸೋದರ ಸಂಬಂಧಿ(ಅಣ್ಣಂದಿರು)ಗಳಾಗಿದ್ದಾರೆ. ಇವರೆಲ್ಲಾ ಅವಿಭಕ್ತ ಕುಟುಂಬದ ಸದಸ್ಯರಾಗಿದ್ದು ಈ ಹಿಂದೆಯೂ ಹಲವು ಬಾರಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿ ದೂರಿದ್ದಾಳೆ. ತಾನು ಕ್ಲಾಸಿನಲ್ಲಿ ಪ್ರಥಮ ಸ್ಥಾನ ಪಡೆಯುತ್ತಿರುವುದನ್ನು ಸಹಿಸದ ಸಂಬಂಧಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.

ಕ್ಲಾಸಿನಲ್ಲಿ ಪ್ರಥಮ ಸ್ಥಾನ ಪಡೆದು ಬೀಗುತ್ತಿರುವ ಯುವತಿಗೆ ‘ಪಾಠ ಕಲಿಸಲು ’ ಸೋದರ ಸಂಬಂಧಿಗಳು ಈ ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News