ಹಿಂದೂ ಮೂಲಭೂತವಾದಿಗಳ ಹಿಟ್‌ಲಿಸ್ಟ್‌ನಲ್ಲಿ ನಾನೂ ಸೇರಿದ್ದೇನೆ: ನಿಜಗುಣಪ್ರಭು ಸ್ವಾಮೀಜಿ

Update: 2019-07-01 13:16 GMT

ಬೆಂಗಳೂರು, ಜು.1: ಹಿಂದೂ ಮೂಲಭೂತವಾದಿಗಳಿಂದ ಸಮಾನತೆ, ಸೌಹಾರ್ದತೆಯ ಆಶಯಗಳಿಗಾಗಿ ಹಗಲಿರುಳು ಶ್ರಮಿಸಿದ ವೈಚಾರಿಕ ಚಿಂತಕರಾದ ದಾಬೋಲ್ಕರ್, ಪನ್ಸಾರೆ, ಕಲಬುರ್ಗಿ, ಗೌರಿ ಲಂಕೇಶ್ ಸೇರಿದಂತೆ ಹಲವರು ಹತ್ಯೆಯಾಗಿದ್ದಾರೆ. ಇನ್ನೂ ಹಲವು ಮಂದಿ ಸಮಾನತಾವಾದಿಗಳನ್ನು ಹತ್ಯೆ ಮಾಡುವ ಲಿಸ್ಟ್‌ಅನ್ನು ಸಿದ್ಧಪಡಿಸಿದ್ದಾರೆ. ಆ ಹಿಟ್‌ಲಿಸ್ಟ್‌ನಲ್ಲಿ ನಾನೂ ಸೇರಿದ್ದೇನೆ ಎಂದು ತೊಂಟದಾರ್ಯ ಶಾಖಾ ಮಠದ ನಿಜಗುಣಪ್ರಭು ತೊಂಟದಾರ್ಯ ಸ್ವಾಮೀಜಿ ಹೇಳಿದರು.

ಸೋಮವಾರ ಕೆಎಸ್ಸಾರ್ಟಿಸಿ, ಕೆಎಸ್ಸಾರ್ಟಿಸಿ ಎಸ್ಸಿ,ಎಸ್ಟಿ ನೌಕರರ ಸಂಘ ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಬುದ್ಧ, ಬಸವ, ಅಂಬೇಡ್ಕರ್, ಕೆಂಪೇಗೌಡ, ವಾಲ್ಮೀಕಿ ಮತ್ತು ಕನಕ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, 'ನಾನು ಕಾರ್ಯಕ್ರಮಗಳನ್ನು ಮುಗಿಸಿ ವಾಪಸ್ ಸುರಕ್ಷತೆಯಿಂದ ಹೋಗುತ್ತೇನೆಂಬ ಯಾವ ಭರವಸೆಯೂ ಇಲ್ಲ. ಆದರೂ ಬುದ್ಧ, ಬಸವ, ಡಾ.ಬಿ.ಆರ್.ಅಂಬೇಡ್ಕರ್, ವಿವೇಕಾನಂದ ಸೇರಿದಂತೆ ಸಮಾನತೆಗಾಗಿ ದುಡಿದ ಮಹಾನ್ ಚಿಂತಕರ ವಿಚಾರಗಳನ್ನು ಜನತೆಗೆ ಮುಟ್ಟಿಸುವುದು ನನ್ನ ಕರ್ತವ್ಯ ಎಂದು ಹೇಳಿದರು. 

ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದ ಫಲವಾಗಿ ಮೇಲ್ಜಾತಿ ಸವರ್ಣಿಯರು ಅಸ್ಪಶ್ಯಾಚರಣೆಗೆ ಹಿಂದೆ ಸರಿಯುತ್ತಾರೆ. ಆದರೆ, ಆಂತರಿಕವಾಗಿ ಅವರು ಅಸ್ಪಶ್ಯಾಚರಣೆಯನ್ನು ಮುಂದುವರೆಸಿದ್ದಾರೆ. ಇಂತವರಿಂದಾಗಿ ಸಮಾಜದಲ್ಲಿ ಮೌಢ್ಯತೆ, ತಾರತಮ್ಯ ಆಚರಣೆಯಲ್ಲಿದ್ದು, ಸೌಹಾರ್ದತೆ, ವೈಚಾರಿಕತೆಗೆ ದೊಡ್ಡ ಪೆಟ್ಟು ಬಿದ್ದಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್, ದಲಿತ ಹಾಗೂ ಅಲ್ಪಸಂಖ್ಯಾತರ ಮೇಲೆ ಹಿಂಸಾ ಪ್ರಕರಣಗಳಲ್ಲಿ ತೊಡಗುವ ದುಷ್ಕರ್ಮಿಗಳಿಗೆ ರಾಜಕೀಯ ಬೆಂಬಲವಿದೆ. ಇದು ದೇಶಕ್ಕೆ ದೊಡ್ಡ ಗಂಡಾಂತರಕಾರಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದೇಶದಲ್ಲಿ ದ್ವೇಷ, ಹಿಂಸೆ ಹಾಗೂ ಹತ್ಯೆಗಳನ್ನು ಬಹಿರಂಗವಾಗಿ ಸಮರ್ಥಿಸುವವರು ಹೆಚ್ಚಾಗುತ್ತಿದ್ದಾರೆ. ಇದಕ್ಕೆ ಧಾರ್ಮಿಕ, ಸಾಮಾಜಿಕ, ರಾಜಕೀಯ ಬೆಂಬಲ ಇರುವುದರಿಂದ ಆರೋಪಿಗಳು ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದಾರೆ. ಮಹಾತ್ಮ ಗಾಂಧೀಜಿಯನ್ನು ಕೊಂದ ನಾಥೂರಾಮ್ ಗೋಡ್ಸೆ ಚಿಂತನೆಯನ್ನು ಬಹಿರಂಗವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಮಾನತೆ, ಸೌಹಾರ್ದತೆಗಾಗಿ ಕೆಲಸ ಮಾಡುತ್ತಿರುವವರಿಗೆ ದೊಡ್ಡ ಸವಾಲಾಗಿದೆ ಎಂದು ಅವರು ಹೇಳಿದರು.

ಭಾರತ ಆರ್ಥಿಕವಾಗಿ ವಿಶ್ವದಲ್ಲೇ ದೊಡ್ಡ ಶಕ್ತಿಯಾಗಿ ಬೆಳೆಯಬಹುದು. ಆದರೆ, ಸಾಮಾಜಿಕ, ಸಾಂಸ್ಕೃತಿಕವಾಗಿ ಅಸಮಾನತೆ, ತಾರತಮ್ಯ ಹಾಗೂ ಜಾತಿ, ಧರ್ಮದ ಹೆಸರಿನಲ್ಲಿ ಹೀಗೆ ಹಿಂಸಾ ಪ್ರಕರಣಗಳು ಮುಂದುವರೆದರೆ ಎಲ್ಲ ತರಹದ ಅಭಿವೃದ್ಧಿಯೂ ಶೂನ್ಯವೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಎಂ.ರೇವಣ್ಣ, ಡಾ.ಮಹಂತೇಶ್ ಆರ್.ಚರಂತಿಮಠ, ವಿಭಾಗಿಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್‌ಬಾನ್, ಎಸ್ಸಿ, ಎಸ್ಟಿ ನೌಕರರ ಸಂಘದ ಗೌರವ ಅಧ್ಯಕ್ಷ ಸಿದ್ದಪ್ಪ ನೇಗಲಾಲ, ಕೆಎಸ್ಸಾರ್ಟಿಸಿ ಸಾರ್ವಜನಿಕ ಸಂಪರ್ಕಾಧಿಕಾರಿ ಲತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ವೇಳೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News