ನೀರಿಗೂ ಬಂತು ಸ್ಮಾರ್ಟ್‌ಕಾರ್ಡ್: ಸ್ವೈಪ್ ಮಾಡಿ, ನೀರು ತೆಗೆದುಕೊಂಡು ಹೋಗಿ...

Update: 2019-07-01 15:34 GMT

ಬೆಂಗಳೂರು, ಜು.1: ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಶಾಶ್ವತ ಕುಡಿಯುವ ನೀರು ಕಲ್ಪಿಸುವ ಉದ್ದೇಶದಿಂದ ಸ್ಮಾರ್ಟ್‌ಕಾರ್ಡ್ ಬಳಸಿ ಶುದ್ಧ ಕುಡಿಯುವ ನೀರು ಪಡೆಯುವ ಹೈಟೆಕ್ ಘಟಕ ಸ್ಥಾಪನೆ ಮಾಡಿರುವುದು ಸ್ವಾಗತಾರ್ಹವಾಗಿದೆ ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಹೇಳಿದರು.

ಸೋಮವಾರ ಜಯನಗರದ ಭೈರಸಂದ್ರ ವಾರ್ಡ್‌ನ ಕಿತ್ತೂರು ರಾಣಿ ಚೆನ್ನಮ್ಮ ಆಟದ ಮೈದಾನದ ಪಕ್ಕದಲ್ಲಿ ನೂತನವಾಗಿ ನಿರ್ಮಿಸಿರುವ ಆಧುನಿಕ ತಂತಜ್ಞಾನದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾಗರಿಕರ ಹಿತದೃಷ್ಟಿಯಿಂದ ಸಾಕಷ್ಟು ಹೊಸ ಅಭಿವೃದ್ಧಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಎನ್.ನಾಗರಾಜು ಬೈರಸಂದ್ರವನ್ನು ಇಡೀ ಬೆಂಗಳೂರಿನಲ್ಲಿಯೇ ಅತ್ಯುತ್ತಮ ಮಾದರಿ ವಾರ್ಡನ್ನಾಗಿ ಪರಿವರ್ತಿಸಿರುವುದು ಶ್ಲಾಘನೀಯವಾದುದು ಎಂದು ಹರ್ಷ ವ್ಯಕ್ತಪಡಿಸಿದರು.

ಉದ್ಯಾನನಗರಿಯಲ್ಲಿ ಶುದ್ಧ ಕುಡಿಯುವ ನೀರು ದೊರೆಯುವುದು ತುಂಬಾ ಕಷ್ಟವಾಗಿದೆ. ಅಲ್ಲದೇ ಶುದ್ಧ ಕುಡಿಯುವ ನೀರಿಲ್ಲದೆ ರೋಗ ರುಜಿನಗಳು ಹೆಚ್ಚುತ್ತಲೇ ಇವೆ. ಇದನ್ನು ತಡೆಯಲು ರಾಜ್ಯದ ಹಲವೆಡೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರದು ನೀರನ್ನು ವಿತರಿಸುವ ಮೂಲಕ ಬಡ ಜನರ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

ಪಾಲಿಕೆ ಸದಸ್ಯ ಎನ್.ನಾಗರಾಜು ಮಾತನಾಡಿ, ಇದು ಕ್ಷೇತ್ರದಲ್ಲಿ ಎರಡನೇ ಘಟಕವಾಗಿದೆ. ವಾರ್ಡ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊಳಗೇರಿ ನಿವಾಸಿಗಳು ವಾಸಿಸುತ್ತಿದ್ದಾರೆ. ಇವರನ್ನು ಗಮನದಲ್ಲಿಟ್ಟುಕೊಂಡು ಘಟಕ ಆರಂಭಿಸಲಾಗಿದೆ. ಮಧ್ಯಮ ವರ್ಗದ ಜನರಿಗೆ ಕೂಡ ಶುದ್ಧ ನೀರು ದೊರೆಯುತ್ತಿಲ್ಲ. ಹೀಗಾಗಿ ಎಲ್ಲರಿಗೂ ಶುದ್ಧ ನೀರು ಸಿಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ. 600 ರೂ. ನೀಡಿ ಕಾರ್ಡ್‌ಗಳನ್ನು ಪಡೆಯಬಹುದು. ಮತ್ತೆ ಕಾರ್ಡ್‌ಗಳನ್ನು ರೀಚಾರ್ಜ್ ಮಾಡಿಕೊಳ್ಳಬಹುದು ಎಂದರು.

ಇನ್ನು, ಕಾರ್ಯಕ್ರಮದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶಾಶ್ವತವಾಗಿ ಕುಡಿಯುವ ನೀರು ಕಲ್ಪಿಸುವ ಉದ್ದೇಶದಿಂದ 500 ಬಿಪಿಎಲ್ ಕಾರ್ಡ್‌ದಾರರರಿಗೆ ಎಟಿಎಂ ಕಾರ್ಡ್‌ಗಳನ್ನು ವಿತರಿಸಲಾಯಿತು. ಈ ಕಾರ್ಡ್‌ದಾರರು ಪ್ರತಿ ದಿನ 25 ಲೀ. ಶುದ್ಧ ನೀರು ಪಡೆಯುವ ಸೌಲಭ್ಯ ಪಡೆಯಲಿದ್ದಾರೆ. ಕಾರ್ಡ್ ಸ್ವೈಪ್ ಮಾಡಿ ನೀರು ತೆಗೆದುಕೊಂಡು ಹೋಗಬಹುದು. ನೀರಿನ ಕ್ಯಾನ್‌ಗಳನ್ನು ಸಹ ವಿತರಿಸಲಾಯಿತು. ಪ್ರತಿ ದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಶುದ್ಧ ಕುಡಿಯುವ ನೀರಿನ ಘಟಕದ ಸೇವೆ ಲಭ್ಯವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News