ರೈತ ವಿರೋಧಿ ಸರಕಾರ ತುಘಲಕ್ ದರ್ಬಾರ್ ನಡೆಯುತ್ತಿದೆ: ಯಡಿಯೂರಪ್ಪ

Update: 2019-07-01 14:50 GMT

ಬೆಂಗಳೂರು, ಜು.1: ರಾಜ್ಯದಲ್ಲಿ ರೈತ ವಿರೋಧಿ ಸರಕಾರದ ತುಘಲಕ್ ದರ್ಬಾರ್ ನಡೆಯುತ್ತಿದೆ. ರೈತರ 46 ಸಾವಿರ ಕೋಟಿ ರೂ.ಸಾಲ ಮನ್ನಾ ಮಾಡುವುದಾಗಿ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಸರಕಾರ, ಇದೀಗ ರೈತರಿಗೆ ಹೊಸ ಸಾಲ ಸಿಗದಂತೆ ಮಾಡಿದೆ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆವರು, ಜೂನ್ ಕೊನೆಯ ವಾರದ ಅಂತ್ಯಕ್ಕೆ ಒಟ್ಟಾರೆ ರಾಜ್ಯದಲ್ಲಿ ವಾಡಿಕೆಯಂತೆ 145 ಮಿ.ಮೀ.ಮಳೆಯಾಗಬೇಕಿತ್ತು. ಕೇವಲ 103 ಮಿ.ಮೀ.ಮಳೆಯಾಗಿದ್ದು, ಶೇ.29ರಷ್ಟು ಮಳೆಯ ಕೊರತೆಯಾಗಿದೆ ಎಂದರು.

ರಾಜ್ಯದ ಒಟ್ಟು 81 ತಾಲೂಕುಗಳಲ್ಲಿ ಮಳೆಯ ತೀವ್ರ ಕೊರತೆಯಾಗಿದೆ. 62 ತಾಲೂಕುಗಳಲ್ಲಿ ಮಳೆಯಾಗಿದ್ದರೂ ಅದು ಜನ ಜಾನುವಾರುಗಳ ಕುಡಿಯುವ ನೀರಿನ ಬವಣೆ ನೀಗಿಸುವಲ್ಲಿ ಹಾಗೂ ಮುಂಗಾರು ಬಿತ್ತನೆಗೆ ಯಾವುದೇ ರೀತಿಯಲ್ಲಿ ಸಹಕಾರಿಯಾಗುವುದಿಲ್ಲ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಒಟ್ಟಾರೆ 74.69 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆಯಾಗಬೇಕಾಗಿದ್ದು, 8.49 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಮುಂಗಾರು ಬಿತ್ತನೆಯಾಗಿದೆ. ರಾಜ್ಯದಲ್ಲಿ 1758 ಹಳ್ಳಿಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವವಿದೆ. ಜನರಿಗೆ ಕುಡಿಯುವ ನೀರಿನ ತೀವ್ರ ಅಭಾವ ನೀಗಿಸಲು ಸರಕಾರದಿಂದ ಸಾಧ್ಯವಾಗುತ್ತಿಲ್ಲ. ಆ ಕೆಲಸ ಮುಖ್ಯಮಂತ್ರಿಯಾಗಲಿ, ಸಚಿವರಾಗಲಿ, ಅಧಿಕಾರಿಗಳಾಗಲಿ ಮಾಡುತ್ತಿಲ್ಲ ಎಂದು ಯಡಿಯೂರಪ್ಪ ಆರೋಪಿಸಿದರು.

ರಾಜ್ಯದ ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ವರಾಹಿ, ಹಾರಂಗಿ ಹೇಮಾವತಿ, ಕೆ.ಆರ್.ಎಸ್, ಕಬಿನಿ, ಭದ್ರಾ, ತುಂಗಭದ್ರಾ, ಘಟಪ್ರಭಾ, ಮಲಪ್ರಭ, ಆಲಮಟ್ಟಿ ನಾರಾಯಣಪುರ ಜಲಾಶಯಗಳು ಕಳೆದ 15 ವರ್ಷಗಳಿಗೆ ಹೋಲಿಸಿದಾಗ ಅತಿ ಕಡಿಮೆ ಪ್ರಮಾಣದ ನೀರಿನ ಮಟ್ಟ ಹೊಂದಿವೆ ಎಂದು ಅವರು ತಿಳಿಸಿದರು.

ಜುಲೈ ಮೊದಲ ವಾರದಲ್ಲಿ ಮುಂಗಾರು ಮಳೆಯ ಮುನ್ಸೂಚನೆಯಂತೆ ಮಳೆಯ ಬೀಳುವಿಕೆಯು ಅಷ್ಟೇನೂ ಆಶಾದಾಯಕವಾಗಿಲ್ಲ. ರೈತರು ಸಕಾಲಕ್ಕೆ ಬಿತ್ತನೆ ಮಾಡಲಾಗದೇ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ವಾಣಿಜ್ಯ ಬೆಳೆಗಾಳದ ತೆಂಗು ಅಡಿಕೆ ಮುಂತಾದ ಬೆಳೆಗಳಿಗೆ ನೀರಿಲ್ಲದೇ ಒಣಗಿ ಹೋಗುತ್ತಿವೆ. ಇದರಿಂದ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

ಮಂಡ್ಯದಲ್ಲಿ ರೈತರು ಇದ್ದ ಅಲ್ಪಸ್ವಲ್ಪ ನೀರನ್ನು ಬೆಳೆಗಳಿಗೆ ಪಡೆಯಲಾಗದೇ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ರೈತರು ತಾವು ಸರಬರಾಜು ಮಾಡಿದ ಕಬ್ಬಿನ ಬಾಕಿ ಹಣವನ್ನು ಪಡೆಯಲಾಗದೇ ಹೋರಾಟ ನಡೆಸುತ್ತಿದ್ದಾರೆ. ಸಾಲ ಮನ್ನಾ ಹಣವನ್ನು ನಂಬಿದ ರೈತರು ತಮ್ಮ ಸಾಲ ಆಗದೇ ಮತ್ತೊಂದು ಅವಧಿಗೆ ಹೊಸ ಸಾಲವನ್ನು ಪಡೆಯಲಾಗದೇ, ಬ್ಯಾಂಕ್‌ಗಳು ನೀಡುವ ನೋಟಿಸ್‌ಗಳಿಗೆ ಉತ್ತರಿಸಲಾಗದೇ ಹೈರಾಣಾಗಿದ್ದಾರೆ ಎಂದು ಅವರು ತಿಳಿಸಿದರು.

ಶಿವಮೊಗ್ಗ ಜಿಲ್ಲೆಯ ರೈತರ ಸಾಲದ ಹಣವನ್ನು ಶಿವಮೊಗ್ಗ ಡಿಸಿಸಿ ಬ್ಯಾಂಕ್ ತಮ್ಮ ಖಾತೆಗೆ ವರ್ಗಾಯಿಸಿಕೊಂಡು, ಸಾಲ ಮನ್ನಾದ ಪ್ರಯೋಜನವು ರೈತರಿಗೆ ದೊರೆಯದಂತೆ ಮಾಡಿದೆ. ಅಲ್ಲದೇ, ಸಾಲ ನವೀಕರಣ ಮಾಡದೇ, ಶೂನ್ಯ ಬಡ್ಡಿದರದಲ್ಲಿ ಹೊಸ ಸಾಲ ನೀಡದಂತೆ, ಜನರಿಗೆ ಶೇ.9.5ರಷ್ಟು ಬಡ್ಡಿ ದರದಲ್ಲಿ ಸಾಲ ಪಡೆಯುವಂತೆ ಸಹಕಾರ ಸಂಘಗಳಿಗೆ ಸೂಚನೆ ನೀಡಿ, ಸಹಕಾರ ಸಂಘಗಳನ್ನು ನಷ್ಟದ ಸುಳಿಗೆ ಸಿಲುಕಿಸಿದ್ದಲ್ಲದೇ, ರೈತರನ್ನು ವಂಚಿಸುತ್ತಿದೆ ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜ್ಯದಲ್ಲಿದ್ದುಕೊಂಡು, ಸಮಸ್ಯೆಗಳನ್ನು ಪರಿಹರಿಸುವುದನ್ನು ಬಿಟ್ಟು, ವಿದೇಶ ಪ್ರವಾಸದಲ್ಲಿ ತೊಡಗಿರುವುದು ಈ ರಾಜ್ಯದ ದುರಂತ. ಇಂತಹ ಸರಕಾರ ಪಡೆದದ್ದು, ಈ ರಾಜ್ಯದ ಜನರ ದೌರ್ಭಾಗ್ಯ. ಸರಕಾರದ ನಡೆಗೆ ಪ್ರತಿ ದಿನ ರೈತರು ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಅವರು ಹೇಳಿದರು.

ಕೊಪ್ಪದ ಮೇಗುಂದಿ ಹೋಬಳಿ ಶಿರೂರು ಗ್ರಾಮದಲ್ಲಿ ಸಂದೇಶ್ ಪ್ಯಾರಾ ತೋಟ ದ್ವಂಸ ಮಾಡಲಾಗಿದೆ. ಸಾವಿರಾರು ಎಕರೆ ಒತ್ತುವರಿ ಮಾಡಿ ಬೆಂಗಳೂರಿನಲ್ಲಿ ದಂಧೆ ಮಾಡುವವರಿಗೆ ಸಮಸ್ಯೆ ಇಲ್ಲ. ಆದರೆ, 30 ವರ್ಷದಿಂದ ಸಾಗುವಳಿ ಮಾಡುತ್ತಿರುವ ರೈತರನ್ನು ತೆರವು ಮಾಡಲಾಗುತ್ತಿದೆ. ಸರಕಾರ ಈ ಕೂಡಲೇ ಒತ್ತುವರಿ ತೆರವು ಪ್ರಕ್ರಿಯೆಯನ್ನು ನಿಲ್ಲಿಸಿ, ರೈತರಿಗೆ ರಕ್ಷಣೆ ನೀಡಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News