'ರಾಜೀನಾಮೆ' ಬೆನ್ನಲ್ಲೇ ಅಲರ್ಟ್ ಆದ ಕೈ ನಾಯಕರು: ಸಿದ್ದರಾಮಯ್ಯ ನಿವಾಸದಲ್ಲಿ ಮಹತ್ವದ ಸಭೆ

Update: 2019-07-01 15:04 GMT
ಫೈಲ್ ಚಿತ್ರ

ಬೆಂಗಳೂರು, ಜು.1: ಶಾಸಕ ಸ್ಥಾನಕ್ಕೆ ಆನಂದ್ ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿರುವ ಬೆನ್ನಲ್ಲೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದಲ್ಲಿ ಕಾಂಗ್ರೆಸ್ ನಾಯಕರು ಚರ್ಚೆ ನಡೆಸಿದರು.

ಸಿದ್ದರಾಮಯ್ಯ ನಿವಾಸ ‘ಕಾವೇರಿ’ಗೆ ಆಗಮಿಸಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸಚಿವ ಡಿ.ಕೆ.ಶಿವಕುಮಾರ್, ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಕುರಿತು ಮಾತುಕತೆ ನಡೆಸಿದರು.

ರಾಜ್ಯ ಸರಕಾರದ ಸುರಕ್ಷತೆಗಾಗಿ ಅತೃಪ್ತ ಶಾಸಕರ ಬಗ್ಗೆ ನಿಗಾವಹಿಸಿ, ಅವರ ಸಮಸ್ಯೆಗಳನ್ನು ಆದ್ಯತೆಯ ಮೇಲೆ ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಸಿದ್ದರಾಮಯ್ಯ, ಪರಮೇಶ್ವರ್ ಹಾಗೂ ಶಿವಕುಮಾರ್‌ಗೆ ಸಲಹೆ ನೀಡಿದರು.

ಅಲ್ಲದೇ, ಆನಂದ್‌ಸಿಂಗ್‌ರನ್ನು ಸಂಪರ್ಕಿಸಿ ರಾಜೀನಾಮೆಯನ್ನು ಹಿಂಪಡೆಯುವಂತೆ ಮನವೊಲಿಸುವಂತೆ ಶಿವಕುಮಾರ್‌ಗೆ ಸೂಚನೆ ನೀಡಿದ ಸಿದ್ದರಾಮಯ್ಯ, ಯಾವುದೇ ಕಾರಣಕ್ಕೂ ಅತೃಪ್ತ ಶಾಸಕರು ಬಿಜೆಪಿ ಪಾಳಯ ಸೇರದಂತೆ ತಡೆಯಬೇಕಿದೆ ಎಂದು ತಿಳಿಸಿದ್ದಾರೆ.

ಶಾಸಕರ ಸಮಸ್ಯೆಗಳ ಬಗ್ಗೆ ಚರ್ಚಿಸಲು ನಾಳೆಯೇ(ಮಂಗಳವಾರ), ಕಾಂಗ್ರೆಸ್ ಪಕ್ಷದ ಸಚಿವರು ಹಾಗೂ ಶಾಸಕರ ಸಭೆ ಕರೆದು ಎಲ್ಲರೊಂದಿಗೆ ಮುಕ್ತವಾಗಿ ಮಾತನಾಡೋಣ. ಯಾವುದೇ ಕಾರಣಕ್ಕೂ ನಮ್ಮ ಶಾಸಕರು ನಮ್ಮನ್ನು ಬಿಟ್ಟು ಹೋಗದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಇದಕ್ಕೂ ಮುನ್ನ ಅತೃಪ್ತ ಶಾಸಕರ ಪಾಳೆಯದಲ್ಲಿ ಗುರುತಿಸಿಕೊಂಡಿದ್ದ ಶಾಸಕ ಭೀಮಾನಾಯ್ಕ, ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್, ಸಿದ್ದರಾಮಯ್ಯರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಅಲ್ಲದೆ, ಯಾವುದೇ ಕಾರಣಕ್ಕೂ ಪಕ್ಷವನ್ನು ತೊರೆಯುವುದಿಲ್ಲ ಎಂಬ ವಾಗ್ದಾನವನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News