ಎಲ್‌ಪಿಜಿ ಟ್ಯಾಂಕರ್ ಮಾಲಕರ ಅನಿರ್ದಿಷ್ಟಾವಧಿ ಮುಷ್ಕರ ಆರಂಭ

Update: 2019-07-01 15:31 GMT

 ಚೆನ್ನೈ,ಜು.1: ಸಾರ್ವಜನಿಕರಂಗದ ತೈಲ ಸಂಸ್ಥೆಗಳಿಗಾಗಿನ ಎಲ್‌ಪಿಜಿ ಟ್ಯಾಂಕರ್ ಲಾರಿಗಳ ಮಾಲಕರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಅನಿರ್ದಿಷ್ಟಾವಧಿ ಮುಷ್ಕರವನ್ನು ಆರಂಭಿ ಸಿದ್ದಾರೆ.

  ಈ ಹಿಂದೆ ಅಸ್ತಿತ್ವದಲ್ಲಿದ್ದ ಸಗಟು ಎಲ್‌ಪಿಜಿ ಸಾರಿಗೆ ಗುತ್ತಿಗೆ ಪದ್ಧತಿಯನ್ನು ಮರಳಿ ಚಾಲ್ತಿಗೆ ತರುವುದು ಹಾಗೂ ಟೆಂಡರ್ ಕರೆಯಲಾದ ಹಾಗೂ ಅರ್ಹ ಟ್ಯಾಂಕರ್ ಟ್ರಕ್ ‌ಗಳನ್ನು ಸಾಗಾಟಕ್ಕೆ ಸೇರ್ಪಡೆಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಕ್ಷಿಣ ಪ್ರಾಂತ ಸಗಟು ಎಲ್‌ಪಿಜಿ ಸಾರಿಗೆ ಮಾಲಕರ ಸಂಘವು ಮುಷ್ಕರಕ್ಕೆ ಕರೆ ನೀಡಿದೆ.

  ರಾಜ್ಯವಾರು ಟೆಂಡರ್ ವ್ಯವಸ್ಥೆಯಡಿ ಸಂಘದಲ್ಲಿ ನೋಂದಾಯಿತವಾಗಿರುವ ಪ್ರತಿಯೊಂದು ಟ್ಯಾಂಕರ್ ಲಾರಿಯು ಎಲ್‌ಪಿಜಿಯನ್ನು ಸಾಗಾಟ ಮಾಡುವ ಗುತ್ತಿಗೆಯನ್ನು ಪಡೆಯುತ್ತಿತ್ತು. ಆದರೆ 2018ರ ಆಗಸ್ಟ್‌ನಲ್ಲಿ ನೂತನ ಟೆಂಡರ್ ಜಾರಿಗೆ ಬಂದ ಬಳಿಕ ಒಟ್ಟು 5,500 ಟ್ಯಾಂಕರ್‌ಗಳ ಪೈಕಿ 700 ಟ್ಯಾಂಕರ್‌ಗಳು ಬಳಕೆಯಾಗುತ್ತಿಲ್ಲ.

    ಬಳಕೆಯಾಗದ 700 ಎಲ್‌ಪಿಜಿ ಟ್ಯಾಂಕರ್‌ಗಳನ್ನು ಕೂಡಾ ಸಾಗಾಟಕ್ಕೆ ಸೇರ್ಪಡೆಗೊಳಿಸಬೇಕೆಂಬುದೇ ತಮ್ಮ ಬೇಡಿಕೆಯಾಗಿದೆ ಎಂದು ಸಂಘದ ಮೂಲಗಳು ತಿಳಿಸಿವೆ. ಸಂಘದ ನೋಂದಾಯಿತವಾದ ಲಾರಿಗಳು ಸಾರ್ವಜನಿಕರಂಗದ ತೈಲ ಮಾರಾಟ ಸಂಸ್ಥೆಗಳಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್, ಇಂಡಿಯನ್ ಆಯಿಲ್ ಕಾರ್ಪೊರೇಶನ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ಸಂಸ್ಥೆಗಳ ತೈಲ ಸಂಸ್ಕರಣಾಗಾರಗಳಿಂದ ದಕ್ಷಿಣ ಭಾರತಾದ್ಯಂತದ ಬಾಟ್ಲಿಂಗ್ ಘಟಕಗಳಿಗೆ ಎಲ್‌ಪಿಜಿಯನ್ನು ಸಾಗಾಟವನ್ನು ಮಾಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News