ಐಎಂಎ ಬಹುಕೋಟಿ ವಂಚನೆ ಪ್ರಕರಣ: ಬಿಡಿಎ ಎಕ್ಸಿಕ್ಯೂಟಿವ್ ಇಂಜಿನಿಯರ್ ಎಸ್ಐಟಿ ಬಲೆಗೆ

Update: 2019-07-01 16:48 GMT

ಬೆಂಗಳೂರು, ಜು.1: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಎಕ್ಸಿಕ್ಯೂಟಿವ್ ಇಂಜಿನಿಯರ್ ಕುಮಾರ್‌ನನ್ನು ಎಸ್ಐಟಿ (ಸಿಟ್) ಬಂಧಿಸಿದೆ.

ಸೋಮವಾರ ಇಲ್ಲಿನ ಜಯನಗರ 5ನೆ ಬ್ಲಾಕ್‌ನಲ್ಲಿರುವ ಕುಮಾರ್ ಫ್ಲಾಟ್ ಮೇಲೆ ಡಿವೈಎಸ್ಪಿ ಅಬ್ದುಲ್ ಖಾದರ್ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದರು.

ಬಂಧಿತ ಕುಮಾರ್, ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್‌ನಿಂದ ಸುಮಾರು 4 ಕೋಟಿ ರೂ. ಪಡೆದಿರುವ ಬಗ್ಗೆ ಮಾಹಿತಿ ಇದೆ. ಈ ಸಂಬಂಧ ವಿಚಾರಣೆ ತೀವ್ರಗೊಳಿಸಲಾಗಿದೆ ಎಂದು ಸಿಟ್ ತನಿಖಾಧಿಕಾರಿ ಎಸ್.ಗಿರೀಶ್ ತಿಳಿಸಿದ್ದಾರೆ.

ಮುಂದುವರೆದ ದಾಳಿ

ಇದೇ ಪ್ರಕರಣ ಸಂಬಂಧ ನಗರದ ಕ್ವೀನ್ಸ್ ರಸ್ತೆ, ವಸಂತನಗರ ಹಾಗೂ ಸೆಪಿಂಗ್ ರಸ್ತೆಯ ಫ್ರಂಟ್‌ಲೈನ್ ಫಾರ್ಮಾ ಮಳಿಗೆಗಳ ಮೇಲೆ ಡಿವೈಎಸ್ಪಿಅನಿಲ್ ಭೂಮಿ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆಸಿ, 4.40 ಲಕ್ಷ ನಗದು, 70 ಲಕ್ಷ ಮೌಲ್ಯದ ಔಷಧ, ವಿದ್ಯುನ್ಮಾನ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಿಟ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News