ಕೆಪಿಎಸ್ಸಿ ಕಾರ್ಯವೈಖರಿ ಪ್ರತಿಭಾನಿತ್ವರನ್ನು ಹತಾಶೆಗೆ ತಳ್ಳಿದೆ: ಬಿಜೆಪಿ ಶಾಸಕ ಸುರೇಶ್‌ ಕುಮಾರ್

Update: 2019-07-01 17:19 GMT

ಬೆಂಗಳೂರು, ಜು.1: ಕರ್ನಾಟಕ ಸೇವಾ ಆಯೋಗದ ಕಾರ್ಯವೈಖರಿಯಿಂದ ಸಾವಿರಾರು ಪ್ರತಿಭಾನ್ವಿತ ಯುವಕ, ಯುವತಿಯರನ್ನು ಹತಾಶೆಯ ಅಂಚಿಗೆ ತಳ್ಳಿದೆ ಎಂದು ಬಿಜೆಪಿ ಶಾಸಕ ಸುರೇಶ್‌ ಕುಮಾರ್ ಆರೋಪಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಎಸ್ಸಿಯಲ್ಲಿ ಸಾರ್ವಜನಿಕ ಸೇವೆ ಹಾಗೂ ಸಾರ್ವಜನಿಕ ಕಾಳಜಿ ಕಾಣೆಯಾಗಿದೆ. ಗೆಜೆಟೆಡ್ ಪ್ರೊಬೆಷನರಿ 2015ರ ಹುದ್ದೆಗಳಿಗೆ ಅಧಿಸೂಚನೆ ಹೊರ ಬಿದ್ದಿದ್ದು ಮೇ.5, 2017ರಂದು. ಇದಕ್ಕೆ ಪೂರ್ವಭಾವಿ ಪರೀಕ್ಷೆ ನಡೆದಿದ್ದು ಆ.20, 2017ರಲ್ಲಿ. ಮುಖ್ಯ ಪರೀಕ್ಷೆ ನಡೆದದ್ದು ಡಿ.16ರ 2017ರಂದು. ನಿರಂತರವಾದ ಹೋರಾಟದ ಫಲವಾಗಿ ಒಂದು ವರ್ಷ ಒಂದು ತಿಂಗಳ ನಂತರ ಜ.28, 2019ರಂದು ಫಲಿತಾಂಶ ಪ್ರಕಟವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಈಗ ಸಂದರ್ಶನದ ದಿನಾಂಕಕ್ಕಾಗಿ ಅಭ್ಯರ್ಥಿಗಳು ಕಾಯತೊಡಗಿದ್ದಾರೆ. ಫೆಬ್ರವರಿಯಿಂದ ಇಲ್ಲಿಯವರೆಗೆ ಕನಿಷ್ಟ 10 ಬಾರಿ ಕೆಪಿಎಸ್ಸಿ ಮುಂದೆ ಹೋರಾಟ ಅಥವಾ ಅಲ್ಲಿಯ ಅಧಿಕಾರಿಗಳನ್ನು ಭೇಟಿ ಮಾಡಿದ್ದೇನೆ. ಆದರೆ, ಇದುವರೆಗೂ ಸಂದರ್ಶನದ ದಿನಾಂಕ ಪ್ರಕಟಿಸಿಲ್ಲ. ಕಳೆದ 10ವರ್ಷದಲ್ಲಿ ಇದುವರೆಗೂ 3 ಬ್ಯಾಚ್‌ಗಳ ಫಲಿತಾಂಶ ಮಾತ್ರ ಪ್ರಕಟವಾಗಿದೆ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದರು.

ಇದರ ಜೊತೆಗೆ ಚಿತ್ರಕಲಾ ಶಿಕ್ಷಕರ ಅಂತಿಮ ಪಟ್ಟಿ, ಟೈಪಿಸ್ಟ್‌ಗಳ ಅಂತಿಮ ಪಟ್ಟಿ, ಸಿ ಗ್ರೂಪ್ ನೌಕರರ ಅಂತಿಮ ಪಟ್ಟಿ. ಹೀಗೆ ಅನೇಕ ಹುದ್ದೆಗಳ ಫಲಿತಾಂಶಕ್ಕೆ ಕಾಯುತ್ತಿರುವ ಅಭ್ಯರ್ಥಿಗಳು ಅತ್ಯಂತ ಹತಾಶೆಯ ಸ್ಥಿತಿಯಲ್ಲಿದ್ದಾರೆ. ಒಂದು ರಾಜ್ಯದ ಆಡಳಿತ ಯಂತ್ರಕ್ಕೆ ಸೂಕ್ತ ವ್ಯಕ್ತಿಗಳು ಒದಗಿಸುವ ಜವಾಬ್ದಾರಿಯುಳ್ಳ ಕೆಪಿಎಸ್ಸಿ ಸಂಸ್ಥೆಯ ಕಾರ್ಯ ವೈಖರಿ ಅತ್ಯಂತ ನಿರಾಶದಾಯಕವಾಗಿದ್ದು, ಎಲ್ಲ ಹುದ್ದೆಗಳ ವಿಚಾರದಲ್ಲಿ ಕೆಪಿಎಸ್ಸಿಯ ವೈಫಲ್ಯತೆ ಎದ್ದು ಕಾಣುತ್ತದೆ ಎಂದು ಅವರು ಆರೋಪಿಸಿದರು.

2015ರ ಗೆಜೆಟೆಡ್ ಪ್ರೊಬೆಷನರಿ ಪರೀಕ್ಷೆಗೆ ಸಂಬಂಧಿಸಿದ ಸಂದರ್ಶನದ ದಿನಾಂಕಗಳನ್ನು ಕೂಡಲೆ ಪ್ರಕಟಿಸಬೇಕೆಂದು ಆಗ್ರಹಿಸಿ ಜು.3ರಂದು ಬೆಳಗ್ಗೆ ಉಪವಾಸ ಕೈಗೊಳ್ಳುತ್ತಿದ್ದೇನೆ.

-ಸುರೇಶ್ ಕುಮಾರ್, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News