ಬಿಬಿಎಂಪಿ ಮೇಯರ್ ಚುನಾವಣೆ: ವಾಮಮಾರ್ಗ ಅನುಸರಿಸಿದರೆ ಕಾನೂನು ಹೋರಾಟ- ಪ್ರತಿಪಕ್ಷ ನಾಯಕ

Update: 2019-07-01 17:57 GMT

ಬೆಂಗಳೂರು, ಜು.1: ಬಿಬಿಎಂಪಿ ಮೇಯರ್ ಸ್ಥಾನವನ್ನು ಮರಳಿ ಪಡೆಯಲು ವಾಮಮಾರ್ಗಕ್ಕೆ ಮುಂದಾಗಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದೆಂದು ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಹೇಳಿದರು.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ವಾಸಿಸುತ್ತಿರುವ ವೇಣುಗೋಪಾಲ್, ಯು.ಬಿ.ವೆಂಕಟೇಶ್, ರಮೇಶ್‌ಗೌಡ ಅವರ ಹೆಸರು ಮತದಾರರ ಪಟ್ಟಿಯಲ್ಲಿದ್ದರೆ ತೊಂದರೆ ಇಲ್ಲ. ಆದರೆ, ಸಂಖ್ಯಾಬಲ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್, ಉತ್ತರ ಕರ್ನಾಟಕ ಮೂಲದವರಾದ ಮೋಹನ್ ಕೊಂಡಜ್ಜಿ ಹಾಗೂ ಮತ್ತಿಬ್ಬರ ಹೆಸರನ್ನು ಅಕ್ರಮವಾಗಿ ಮತದಾರರ ಪಟ್ಟಿಗೆ ಸೇರಿಸಲು ಹುನ್ನಾರ ನಡೆಸುತ್ತಿರುವ ಬಗ್ಗೆ ನಮಗೆ ಮಾಹಿತಿ ಬಂದಿದೆ ಎಂದರು.

ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇನೆ ಎಂದ ಅವರು, ಕಳೆದ ಮೇಯರ್ ಚುನಾವಣೆಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮತ ಚಲಾಯಿಸಿದ್ದರು. ಆದರೆ, ದೂರು ನೀಡಿದ ನಂತರ ತಮ್ಮ ವಿಳಾಸ ತುಮಕೂರಿಗೆ ಬದಲಾಯಿಸಿದರು. ಮತ್ತೆ ಸಂಖ್ಯಾಬಲ ಹೆಚ್ಚಿಸಲು ಬೇರೆ ಜಿಲ್ಲೆಯಲ್ಲಿ ವಾಸ ಇರುವ ವಿಧಾನ ಪರಿಷತ್ತು ಸದಸ್ಯರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News