ಇಂದಿರಾ ಕ್ಯಾಂಟೀನ್ ಆಹಾರ ಕಳಪೆ: ಗುತ್ತಿಗೆದಾರರಿಗೆ ಬಿಬಿಎಂಪಿ ನೋಟಿಸ್

Update: 2019-07-01 18:04 GMT

ಬೆಂಗಳೂರು, ಜು.1: ಬೊಮ್ಮನಹಳ್ಳಿ ವಲಯದ ಇಂದಿರಾ ಕ್ಯಾಂಟೀನ್‌ಗಳಿಗೆ ಪೂರೈಸುವ ಆಹಾರ ತಯಾರಿಸುವ ಅಡುಗೆ ಮನೆಯಲ್ಲಿ ಕಳಪೆ ಅಕ್ಕಿ, ಕೊಳೆತ ತರಕಾರಿ ಪತ್ತೆಯಾದ ಪ್ರಕರಣ ಸಂಬಂಧಪಟ್ಟ ಗುತ್ತಿಗೆದಾರರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜಂಟಿ ಆಯುಕ್ತರು ನೋಟಿಸ್ ನೀಡಿದ್ದಾರೆ.

ಬೊಮ್ಮನಹಳ್ಳಿ ಇಂದಿರಾ ಕಿಚನ್ ನಿರ್ವಹಣೆಯ ಗುತ್ತಿಗೆಯನ್ನು ರಿವಾರ್ಡ್ಸ್ ಕಂಪನಿಗೆ ನೀಡಲಾಗಿತ್ತು. ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿ ಆಧರಿಸಿ ಅವರಿಗೆ ನೋಟಿಸ್ ನೀಡಲಾಗಿದೆ ಮತ್ತು ಬಿಲ್ ತಡೆ ಹಿಡಿಯಲಾಗಿದೆ ಎಂದು ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತರಾದ ಡಾ.ಎ.ಸೌಜನ್ಯಾ ತಿಳಿಸಿದ್ದಾರೆ.

ಅಡುಗೆಮನೆ ಮೇಲ್ವಿಚಾರಕರು ಮತ್ತು ಗುತ್ತಿಗೆದಾರರಿಂದ ಈ ಕುರಿತು ಹೇಳಿಕೆ ಪಡೆಯಲಾಗುವುದು. ಹಿರಿಯ ಆರೋಗ್ಯಾಧಿಕಾರಿ ನೀಡುವ ಮಾಹಿತಿ ಆಧರಿಸಿ ತಯಾರಿಸಿದ ವರದಿಯನ್ನು ಕೇಂದ್ರ ಕಚೇರಿಗೆ ಕಳುಹಿಸಲಾಗುವುದು ಎಂದು ಅವರು ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿದ ರಿವಾರ್ಡ್ಸ್ ಸಂಸ್ಥೆಯ ಆಡಳಿತ ವ್ಯವಸ್ಥಾಪಕ ಬಲದೇವ್ ಸಿಂಗ್ ಸಿದ್ದು, ಕಸ ಒಯ್ಯುವವರು ನಾಲ್ಕು ದಿನಗಳಿಂದ ಬಂದಿರಲಿಲ್ಲ. ಬಿಸಾಡಲು ಹೊರಗಿಟ್ಟಿದ್ದ ತರಕಾರಿ ವಿಡಿಯೊ ಮಾಡಲಾಗಿದೆ. ಅಲ್ಲದೆ ಅಡುಗೆ ಮನೆಯ ಒಳಗಡೆ ಇದ್ದ ಅಕ್ಕಿ ಹಾಗೂ ಬೇಳೆಯೂ ಹಾಳಾಗಿದ್ದ ಕುರಿತು ಪ್ರಶ್ನಿಸಿದಾಗ, 200 ಮೂಟೆ ಅಕ್ಕಿ ಬಂದಿತ್ತು. ಅದರಲ್ಲಿ ಏಳೆಂಟು ಬ್ಯಾಗ್ ತೆರೆದಿಡಲಾಗಿತ್ತು. ಆ ಎಲ್ಲ ಬ್ಯಾಗುಗಳಲ್ಲಿ ಹುಳಗಳು ಇದ್ದುದರಿಂದ ಅವುಗಳನ್ನು ಬಳಸದೇ ಹಾಗೇ ಇಟ್ಟಿದ್ದೆವು. ಅನ್ನ ಮಾಡಲು ಆ ಅಕ್ಕಿಯನ್ನು ಬಳಸಿಲ್ಲ. ಕಳಪೆ ಅಕ್ಕಿಯನ್ನು ಪೂರೈಸಿದವರಿಗೂ ಕರೆ ಮಾಡಿ, ಎಲ್ಲ ಮೂಟೆಗಳನ್ನು ತೆಗೆದುಕೊಂಡು ಹೋಗಿ ಎಂದು ಹೇಳಿದ್ದೆವು. ಅವರು ಬರುವಾಗ ತಡವಾಯಿತು ಎಂದು ಅವರು ಸ್ಪಷ್ಟಪಡಿಸಿದರು.

ನಗರದಲ್ಲಿ ಒಟ್ಟು 88 ಇಂದಿರಾ ಕ್ಯಾಂಟೀನ್ ಮತ್ತು 10 ಅಡುಗೆ ಮನೆಗಳನ್ನು ನಾವು ನಿರ್ವಹಿಸುತ್ತಿದ್ದೇವೆ. ಬೊಮ್ಮನಹಳ್ಳಿಯ ಅಡುಗೆ ಮನೆಯಿಂದ ಏಳು ಕ್ಯಾಂಟೀನ್‌ಗಳಿಗೆ ಈ ಆಹಾರ ಪೂರೈಸಲಾಗುತ್ತದೆ. ಒಂದು ಹೊತ್ತಿಗೆ 11 ಸಾವಿರ ಪೌರಕಾರ್ಮಿಕರಿಗೆ ನಾವು ಆಹಾರ ಪೂರೈಸುತ್ತಿದ್ದೇವೆ. ಬೇರೆ ಯಾರೂ ದೂರು ನೀಡಿಲ್ಲ. ಕೆಲವರು ಉದ್ದೇಶಪೂರ್ವಕವಾಗಿ ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸಿಂಗ್ ಹೇಳಿದರು.

ಕಿಚನ್ ನಾವು ನಿರ್ವಹಿಸುತ್ತಿಲ್ಲ: ಬೊಮ್ಮನಹಳ್ಳಿ ಕಿಚನ್ ನಿರ್ವಹಿಸುತ್ತಿರುವುದು ಶೆಫ್ ಟಾಕ್ ಕಂಪನಿಯಲ್ಲ. ಪಾಲಿಕೆಯ ಜಂಟಿ ಆಯುಕ್ತರಾದ ಸರ್ಫರಾಜ್ ಖಾನ್ ಅವರು ಮಾಹಿತಿ ಕೊರತೆಯಿಂದ ನಮ್ಮ ಕಂಪನಿ ಹೆಸರು ಉಲ್ಲೇಖಿಸಿದ್ದಾರೆ ಎಂದು ಶೆಫ್‌ಟಾಕ್ ಫುಡ್ ಆ್ಯಂಡ್ ಹಾಸ್ಪಿಟಾಲಿಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಗೋವಿಂದ ಬಾಬು ಪೂಜಾರಿ ಸ್ಪಷ್ಟಪಡಿಸಿದರು.

ಕೌನ್ಸಿಲ್ ಸಭೆಯಲ್ಲೂ ಧ್ವನಿ: ಜೂ.28ರಂದು ನಡೆದ ಪಾಲಿಕೆಯ ಕೌನ್ಸಿಲ್ ಸಭೆಯಲ್ಲೂ ಇಂದಿರಾ ಕ್ಯಾಂಟೀನ್‌ನಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಶಾಸಕ ಮುನಿರತ್ನ ಅವರು ಆರೋಪಿಸಿದ್ದರು. ಇಂದಿರಾ ಕ್ಯಾಂಟೀನ್‌ಗಳಿಗೆ ನಿತ್ಯ ನೂರು ಜನರೂ ಭೇಟಿ ನೀಡುತ್ತಿಲ್ಲ. ಇದಕ್ಕೆ ಇಲ್ಲಿ ಸಿಗುವ ಕಳಪೆ ಆಹಾರವೇ ಕಾರಣ.

ಬಿಬಿಎಂಪಿ ಇಂದಿರಾಕ್ಯಾಂಟೀನ್ ನಿರ್ವಾಹಣೆಯ ಜವಾಬ್ದಾರಿಯನ್ನು ಶೆಫ್‌ಟಾಕ್ ಮತ್ತು ರಿವಾರ್ಡ್ಸ್ ಸಂಸ್ಥೆಗಳಿಗೆ ನೀಡಲಾಗಿದೆ. ಈ ಕಂಪನಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಮತ್ತು ಕಳಪೆ ಗುಣಮಟ್ಟದ ಆಹಾರ ನೀಡುತ್ತಿವೆ. ಆಗಸ್ಟ್‌ನಲ್ಲಿ ಇವುಗಳ ಟೆಂಡರ್ ಮುಗಿಯಲಿದ್ದು, ಬೇರೆ ಕಂಪನಿಗೆ ಜವಾಬ್ದಾರಿ ನೀಡಬೇಕು ಎಂದು ಒತ್ತಾಯಿಸಿದ್ದರು.

ಬೆಂಗಳೂರಿನಲ್ಲಿರುವ 198 ಇಂದಿರಾ ಕ್ಯಾಂಟೀನ್‌ಗಳ ಪೈಕಿ ನಮ್ಮ ಸಂಸ್ಥೆ 108 ಕ್ಯಾಂಟೀನ್‌ಗಳ ಮತ್ತು 8 ಅಡುಗೆ ಮನೆಗಳ ನಿರ್ವಹಣೆಯ ಗುತ್ತಿಗೆಯನ್ನು ಪಡೆದಿದೆ. ಆಹಾರದ ಗುಣಮಟ್ಟ ಕಾಪಾಡುವುದು ನಮ್ಮ ಮೊದಲ ಆದ್ಯತೆ.

-ಗೋವಿಂದ ಬಾಬು ಪೂಜಾರಿ, ಶೆಫ್‌ಟಾಕ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News