ಕನಸಿಗೆ ಕೊನೆಯಿಲ್ಲ: ಫಿಝಾ ವಿತರಕ ಯುವಕನ ಯಶೋಗಾಥೆ ಓದಲೇಬೇಕು...

Update: 2019-07-02 04:13 GMT

ಜಮ್ಮು: ಗಲಭೆ ಪೀಡಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಕಡು ಬಡತನದ ಕುಟುಂಬದಲ್ಲಿ ಬೆಳೆದ ಈ ಯುವಕನ ಯಶೋಗಾಥೆ ಸ್ಫೂರ್ತಿದಾಯಕ !

ವೆಯ್ಟರ್ ಆಗಿ, ಕಾರು ತೊಳೆಯುವ ಹುಡುಗನಾಗಿ, ಕಿರಾಣಿ ಅಂಗಡಿಯಲ್ಲಿ ಸಹಾಯಕನಾಗಿ ಏಳು ವರ್ಷ ಸವೆಸಿದ ಈತ ಜೀವನದಲ್ಲಿ ಮಹತ್ಸಾಧನೆ ಮಾಡುವ ಕನಸು ಕಾಣುವುದು ಮಾತ್ರ ಬಿಡಲಿಲ್ಲ. ಇದೀಗ ಖಾಕಿ ಸಮವಸ್ತ್ರ, ಭುಜದಲ್ಲಿ ಹೊಳೆಯುವ ನಕ್ಷತ್ರ ಧರಿಸಿದ ಈತ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿ !

ಈ ಸಾಧನೆಗೆ ಐಪಿಎಸ್ ಅಧಿಕಾರಿ ಸಂದೀಪ್ ಚೌಧರಿ ನಡೆಸುತ್ತಿರುವ "ಆಪರೇಷನ್ ಡ್ರೀಮ್ಸ್" ಉಚಿತ ಕೋಚಿಂಗ್ ಕ್ಲಾಸ್ ಕಾರಣ ಎಂದು 28 ವರ್ಷದ ಮೊಯಿನ್ ಖಾನ್ ಬಣ್ಣಿಸುತ್ತಾರೆ.

"ಜಮ್ಮು ಜಿಲ್ಲೆಯ ನಗ್ರೋತಾ ಕ್ಷೇತ್ರದ ಥಂಡಾ ಪಾನಿ ಗ್ರಾಮದಲ್ಲಿ ನಾನು ಹುಟ್ಟಿದ್ದು; ಪೋಷಕರು ಅನಕ್ಷರಸ್ಥರು; ಇಡೀ ಕುಟುಂಬದಲ್ಲಿ ನಾನೇ ಮೊದಲ ಪದವೀಧರ" ಎಂದು ಹೇಳುತ್ತಾರೆ. ಅಣ್ಣ ಡೌನ್‌ಸಿಂಡ್ರೋಮ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದೀಗ ಖಾನ್ ಉದಾಂಪುರ ಪೊಲೀಸ್ ತರಬೇತಿ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

"ತಂದೆ ಮೊಹ್ಮದ್ ಶರೀಫ್ ಗುಜರಾತ್‌ನಲ್ಲಿ ಡಾಬಾ ಆರಂಭಿಸುವ ಮುನ್ನ ಹಾಲು ಮಾರುತ್ತಿದ್ದರು; 2009ರಲ್ಲಿ ಅವರು ಅಪಘಾತದಲ್ಲಿ ಮೃತಪಟ್ಟರು" ಎಂದು ಖಾನ್ ನೆನಪಿಸಿಕೊಳ್ಳುತ್ತಾರೆ. ಆ ಬಳಿಕ ಶಿಕ್ಷಣ ಪಡೆಯುವ ಜತೆಜತೆಗೆ ಕುಟುಂಬದ ಜವಾಬ್ದಾರಿಯೂ ಇವರ ಹೆಗಲೇರಿತು. ಅಂಚೆ ಶಿಕ್ಷಣದ ಮೂಲಕ 2012ರಲ್ಲಿ ವಾಣಿಜ್ಯ ಪದವಿ ಪಡೆದು ಫಿಝಾ ಹಟ್‌ಗೆ ವೈಟರ್ ಆಗಿ ಸೇರಿದರು. ತಿಂಗಳಿಗೆ 2,500 ರೂ. ವೇತನಕ್ಕೆ ಮೂರು ವರ್ಷ ಕೆಲಸ ಮಾಡಿದರು. ಈ ಮಧ್ಯೆ ಬಿಬಿಎ ಶಿಕ್ಷಣ ಪೂರ್ಣಗೊಳಿಸಿದರು. ಸಂಜೆ 6 ರಿಂದ ರಾತ್ರಿ 2ರವರೆಗೆ ಫಿಝಾ ಹಟ್‌ನಲ್ಲಿ ದುಡಿದು ಬಳಿಕ ನರ್ವಾಲ್‌ನಲ್ಲಿ ಇದ್ದ ಪುಟ್ಟ ಜಾಗದಲ್ಲಿ ಸ್ನೇಹಿತರ ಜತೆ ಸೇರಿ ಕಾರು ತೊಳೆಯುವ ವ್ಯವಹಾರ ಆರಂಭಿಸಿದರು. ಇದು ಮೂರು ವರ್ಷ ನಡೆಯಿತು. 2016ರಲ್ಲಿ ಪಿಎಸ್‌ಐ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಿದರು.

ಆಗ ಐಪಿಎಸ್ ಅಧಿಕಾರಿಯೊಬ್ಬರು ದುರ್ಬಲ ವರ್ಗದವರಿಗೆ ಉಚಿತ ತರಬೇತಿ ನೀಡುವ "ಆಪರೇಷನ್ ಡ್ರೀಮ್ಸ್" ಬಗ್ಗೆ ಸ್ನೇಹಿತರೊಬ್ಬರು ತಿಳಿಸಿದರು. ಅಲ್ಲಿ ಪಡೆದ ತರಬೇತಿ, ಪರೀಕ್ಷೆ ಉತ್ತೀರ್ಣನಾಗಲು ನೆರವಾಯಿತು. ಡಿಸೆಂಬರ್‌ನಲ್ಲಿ ಫಲಿತಾಂಶ ಪ್ರಕಟವಾಗಿ ವಾರದ ಹಿಂದೆ ಪೊಲೀಸ್ ತರಬೇತಿ ಅಕಾಡೆಮಿ ಸೇರಿದ್ದಾಗಿ ಖಾನ್ ವಿವರಿಸಿದರು.

ವೈಟರ್ ಆಗಿದ್ದ ಖಾನ್ ಪಿಎಸ್‌ಐ ಆದ ಸುಧೀರ್ಘ ಪಯಣ ಎಲ್ಲರಿಗೂ ಸ್ಫೂರ್ತಿದಾಯಕ ಎಂದು ಶೋಪಿಯಾನ್ ಜಿಲ್ಲೆಯ ಹಿರಿಯ ಅಧೀಕ್ಷಕರಾಗಿರುವ ತರಬೇತುದಾರ ಸಂದೀಪ್ ಚೌಧರಿ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News