ಮುಂಬೈಯಲ್ಲಿ ಮಹಾಮಳೆಯ ರುದ್ರನರ್ತನ: 20ಕ್ಕೂ ಅಧಿಕ ಮಂದಿ ಮೃತ್ಯು

Update: 2019-07-02 05:45 GMT
ಫೋಟೊ : ಎಎನ್ಐ

ಮುಂಬೈ: ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಮುಂಬೈನ ಮಲಾದ್‌ನಲ್ಲಿ ಗೋಡೆ ಕುಸಿದು ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ.

ಮಂಗಳವಾರ ಮುಂಜಾನೆ ಪುಣೆಯಲ್ಲಿ ನಡೆದ ಇಂಥ ಮತ್ತೊಂದು ಘಟನೆಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ.

ಭಾರಿ ಮಳೆಯಿಂದಾಗಿ ದೇಶದ ವಾಣಿಜ್ಯ ರಾಜಧಾನಿಯ ರಸ್ತೆ, ರೈಲು ಮತ್ತು ವಾಯು ಸಂಪರ್ಕ ಸತತ ಎರಡನೇ ದಿನವಾದ ಮಂಗಳವಾರ ಕೂಡಾ ಅಸ್ತವ್ಯಸ್ತವಾಗಿದೆ. ರಾಜ್ಯದಲ್ಲಿ ಕಳೆದ ಐದು ದಿನಗಳಿಂದ ಮಳೆ ಸಂಬಂಧಿ ಅವಘಡಗಳಿಗೆ ಬಲಿಯಾದವರ ಸಂಖ್ಯೆ 50 ದಾಟಿದೆ.

ಧಾರಾಕಾರ ಮಳೆಯಿಂದಾಗಿ ರಾಜ್ಯ ಸರ್ಕಾರ ಮಂಗಳವಾರ ಸಾರ್ವತ್ರಿಕ ರಜೆ ಘೋಷಿಸಿದೆ. ಮಲಾದ್ ಉಪನಗರದ ಪಿಂಪ್ರಿಪಾಡಾದಲ್ಲಿ ರಾತ್ರಿ 1 ಗಂಟೆ ಸುಮಾರಿಗೆ ಶಾಲೆಯ ಆವರಣ ಗೋಡೆ, ಪಕ್ಕದ ಗುಡಿಸಲುಗಳ ಮೇಲೆ ಕುಸಿದು ಬಿದ್ದ ಪರಿಣಾಮ 13 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಮಂಗಳವಾರ ಮುಂಜಾನೆ ಪುಣೆಯ ಸಿಂಹಗಡ ಕಾಲೇಜಿನ ಆವರಣ ಗೋಡೆ ಗುಡಿಸಲುಗಳ ಮೇಲೆ ಕುಸಿದು ಬಿದ್ದ ಪರಿಣಾಮ ಕನಿಷ್ಠ ಏಳು ಮಂದಿ ಜೀವ ಕಳೆದುಕೊಂಡಿದ್ದಾರೆ.

ಎರಡೂ ಘಟನೆಗಳಲ್ಲಿ ಇನ್ನಷ್ಟು ಮಂದಿ ಗಾಯಗೊಂಡಿದ್ದು, ಅವಶೇಷಗಳಡಿ ಸಿಲುಕಿ ಹಾಕಿಕೊಂಡಿರುವ ಸಾಧ್ಯತೆ ಇದೆ. ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ ಸಮರೋಪಾದಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದೆ. ಹವಾಮಾನ ಇಲಾಖೆಯ ಅಂದಾಜಿನ ಪ್ರಕಾರ ಕರಾವಳಿ ಕೊಂಕಣ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆ ಇದೆ.

ಬೃಹತ್ ಮುಂಬೈ ಮಹಾನಗರ ಪಾಲಿಕೆ ಆಯುಕ್ತ ಪ್ರವೀಣ್ ಪರ್ದೇಶಿ ಮುಂಜಾಗ್ರತಾ ಕ್ರಮವಾಗಿ ಮಹಾನಗರದ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News