ಕ್ಯಾನ್ಸರ್ ಗುಣಪಡಿಸುವ ಹುಸಿ ಭರವಸೆಗಳಿಗೆ ಫೇಸ್‌ಬುಕ್, ಯೂಟ್ಯೂಬ್ ಬ್ರೇಕ್

Update: 2019-07-03 04:19 GMT

ವಾಷಿಂಗ್ಟನ್, ಜು.3: ಕ್ಯಾನ್ಸರ್ ಗುಣಪಡಿಸುವ ಬಗೆಗೆ ಸುಳ್ಳು ಪ್ರತಿಪಾದನೆ ಹಾಗೂ ಹುಸಿ ಭರವಸೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ ಎಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ, ಇಂಥ ನಕಲಿ ಪ್ರತಿಪಾದನೆಗಳಿಗೆ ಕಡಿವಾಣ ಹಾಕುವುದಾಗಿ ಫೇಸ್‌ಬುಕ್ ಹಾಗೂ ಯೂಟ್ಯೂಬ್ ಪ್ರಕಟಿಸಿವೆ.

ಕ್ಯಾನ್ಸರ್ ಗುಣಪಡಿಸುವ ಬಗ್ಗೆ ಅತಿರಂಜಿತ ಅಥವಾ ರೋಮಾಂಚಕ ಭರವಸೆಗಳನ್ನು ನೀಡಿ, ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ತಂತ್ರಗಾರಿಕೆಯ ಪೋಸ್ಟ್‌ಗಳನ್ನು ನಿರ್ಬಂಧಿಸಲು ತನ್ನ ಪೇಜ್ ರ್ಯಾಂಕಿಂಗ್ ಅಲೋಗರಿಥಮ್‌ನಲ್ಲಿ ಅಗತ್ಯ ಬದಲಾವಣೆ ಮಾಡಿಕೊಳ್ಳುವುದಾಗಿ ಫೇಸ್‌ಬುಕ್ ಹೇಳಿದೆ. ಯೂ-ಟ್ಯೂಬ್ ಕೂಡಾ ಈ ಸಂಬಂಧ ಪ್ರತ್ಯೇಕ ಹೇಳಿಕೆ ನೀಡಿ, ಇಂಥ ಹುಸಿ ಭರವಸೆಗಳಿಗೆ ಕಡಿವಾಣ ಹಾಕುವುದಾಗಿ ಹೇಳಿದೆ.

ಅಡುಗೆಸೋಡಾವನ್ನು ಚುಚ್ಚುಮದ್ದಿನ ರೂಪದಲ್ಲಿ ನೀಡುವ ಮೂಲಕ ಕ್ಯಾನ್ಸರ್ ಗುಣಪಡಿಸಲು ಸಾಧ್ಯ ಎಂಬಂಥ ಸುಳ್ಳು ಪ್ರತಿಪಾದನೆಗಳು ಫೇಸ್‌ಬುಕ್ ಹಾಗೂ ಯೂ-ಟ್ಯೂಬ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ ಎಂದು ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿತ್ತು.

ಈ ಕುರಿತು ಪತ್ರಿಕೆ ನಡೆಸಿದ ಸಂಶೋಧನೆಯ ಫಲಿತಾಂಶವನ್ನು ಸಾಮಾಜಿಕ ಜಾಲತಾಣಗಳ ಜತೆ ಹಂಚಿಕೊಂಡ ಬಳಿಕ ಫೇಸ್‌ಬುಕ್ ಹಾಗೂ ಗೂಗಲ್ ಮಾಲಕತ್ವದ ಯೂಟ್ಯೂಬ್ ಕ್ರಮಕ್ಕೆ ಮುಂದಾಗಿವೆ. "ಜನ ನಿಖರವಾದ ಆರೋಗ್ಯ ಮಾಹಿತಿಯನ್ನು ಪಡೆಯಲು ನೆರವಾಗುವಂತೆ ಮತ್ತು ಅಗತ್ಯ ನೆರವು ಪಡೆಯಲು ಅನುಕೂಲವಾಗುವಂತೆ, ಇಂಥ ಅತಿರಂಜಿತ ಅಥವಾ ಹುಸಿ ಭರವಸೆಗಳ ಅಂಶಗಳನ್ನು ಕನಿಷ್ಠಗೊಳಿಸುವುದು ಅನಿವಾರ್ಯ" ಎಂದು ಫೇಸ್‌ಬುಕ್ ಉತ್ಪನ್ನ ವ್ಯವಸ್ಥಾಪಕ ಟ್ರಾವಿಸ್ ಯಹ್ ಬ್ಲಾಗ್‌ಸ್ಪಾಟ್‌ನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News