ಶರಾವತಿ ನೀರಾವರಿ ಯೋಜನೆ ವಿರೋಧಿಸಿ ವಕೀಲರ ಪ್ರತಿಭಟನೆ

Update: 2019-07-03 13:01 GMT

ಬೆಂಗಳೂರು, ಜು.3: ಲಿಂಗನಮಕ್ಕಿ ಅಣೆಕಟ್ಟು ಮೂಲಕ ಬೆಂಗಳೂರು ನಗರಕ್ಕೆ ಶರಾವತಿ ನದಿ ನೀರು ತರಲು ಮುಂದಾಗಿರುವ ಸರಕಾರದ ನಿರ್ಧಾರವನ್ನು ವಿರೋಧಿಸಿ ಮಲೆನಾಡು ವಕೀಲರಿಂದು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಬುಧವಾರ ನಗರದ ಪುರಭವನದ ಎದುರು ಪಶ್ಚಿಮ ಘಟ್ಟಗಳ ಪರಿಸರ ವೇದಿಕೆಯ ನೇತೃತ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಮಲೆನಾಡು ಭಾಗದ ವಕೀಲರು ರಾಜ್ಯ ಸರಕಾರದ ನಿರ್ಧಾರವನ್ನು ಬಲವಾಗಿ ಖಂಡಿಸಿದರು.

ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜನರ ಅಭಿಪ್ರಾಯಗಳನ್ನು ಪಡೆಯದೆ, ಶರಾವತಿ ನದಿ ನೀರನ್ನು ಲಿಂಗನಮಕ್ಕಿ ಅಣೆಕಟ್ಟಿನಿಂದ ನಗರಕ್ಕೆ ಹರಿಸುವ ನಿರ್ಧಾರ ಅವೈಜ್ಞಾನಿಕವಾದುದು. ಇದರಿಂದಾಗಿ ನಮ್ಮ ಭಾಗದ ರೈತರಿಗೆ ತೀವ್ರ ತೊಂದರೆಯಾಗುತ್ತದೆ. ಆದುದರಿಂದಾಗಿ, ಇದನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.

ಶಿವಮೊಗ್ಗ ಹಾಗೂ ಉತ್ತರ ಕನ್ನಡ ಎರಡೂ ಜಿಲ್ಲೆಗಳಲ್ಲಿ ಕಳೆದ 50 ವರ್ಷದಲ್ಲಿ 180 ಕಿ.ಮೀಟರ್ ವ್ಯಾಪ್ತಿಯಲ್ಲಿ ಸೂಪಾ, ಗೇರುಸೊಪ್ಪೆ, ವರಾಹಿ, ಲಿಂಗನಮಕ್ಕಿ ಡ್ಯಾಂ ಗಳಿಗೆ ಕಟ್ಟಲಾದ ಕಿರು ಅಣೆಕಟ್ಟೆಗಳು ಸೇರಿದಂತೆ 18 ಅಣೆಕಟ್ಟೆಗಳನ್ನು ಸರಕಾರ ನಿರ್ಮಿಸಿದೆ. ಇದರಿಂದ ಸಾವಿರಾರು ಕುಟುಂಬಗಳು ಮತ್ತು ಕೃಷಿ ಕಾರ್ಮಿಕರ ಕುಟುಂಬಗಳು ನಿರ್ಗತಿಕವಾಗಿವೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಶರಾವತಿ ನೀರನ್ನು ನಗರಕ್ಕೆ ಹರಿಸುವ ಮೂಲಕ ಆ ಭಾಗದ ಜನರ ಹಿತಾಸಕ್ತಿಯನ್ನು ಬಲಿಕೊಡುತ್ತಿದೆ ಎಂದು ದೂರಿದರು.

ಅಣೆಕಟ್ಟು ನಿರ್ಮಾಣವಾಗುವ ವೇಳೆ ಸಾವಿರಾರು ಕೃಷಿ ಭೂಮಿಗಳನ್ನು ರೈತರು ಕಳೆದುಕೊಂಡಿದ್ದರೂ, ಅವರಿಗೆ ಪುನರ್ ವಸತಿ ಸೌಲಭ್ಯ ಕಲ್ಪಿಸಿಲ್ಲ. ಮಲೆನಾಡಿನಲ್ಲಿ ನಿರ್ಮಿಸಿರುವ ಹಲವು ವಿದ್ಯುತ್ ಯೋಜನೆಗಳಿಂದಾಗಿ ಈಗಾಗಲೇ ಸಾವಿರಾರು ಅರಣ್ಯ ಭೂಮಿ ನಾಶವಾಗಿದೆ. ಸರಕಾರ ನಿರ್ಮಿಸಿರುವ ಅಣೆಕಟ್ಟೆಗಳಿಂದ ವಿದ್ಯುತ್ ಅನ್ನು ಪಡೆಯಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News