ವಿವಿ ಗಳಲ್ಲಿ ಕೌಶಲ್ಯಾಭಿವೃದ್ದಿಗೆ ಹೆಚ್ಚಿನ ಒತ್ತು ಅಗತ್ಯ: ಬೆಂಗಳೂರು ವಿವಿ ಕುಲಪತಿ ವೇಣುಗೋಪಾಲ್

Update: 2019-07-03 13:09 GMT

ಬೆಂಗಳೂರು, ಜು.3: ವಿಶ್ವವಿದ್ಯಾಲಯಗಳು ಮಾಹಿತಿ ಕೇಂದ್ರಗಳಾಗದೆ ಜ್ಞಾನ ಕೇಂದ್ರಗಳಾಗಿ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ದಿಗೆ ಒತ್ತು ನೀಡಬೇಕೆಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್.ವೇಣುಗೋಪಾಲ್ ತಿಳಿಸಿದ್ದಾರೆ. 

ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ದಿಶಾ ಸಂಸ್ಥೆ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಒಂದು ದಿನದ ಪ್ರಾಂಶುಪಾಲರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ನಾತಕೋತ್ತರ ಪದವಿಗಳನ್ನು ಪಡೆದರೂ ಕೆಲಸ ಸಿಗದೆ ವಿದ್ಯಾರ್ಥಿಗಳು ನಿರಾಶರಾಗುತ್ತಿದ್ದಾರೆ. ಇದಕ್ಕೇನು ಕಾರಣ ಎಂಬುದನ್ನು ವಿಶ್ವವಿದ್ಯಾಲಯಗಳ ಆಡಳಿತ ಮಂಡಳಿ ಗಂಭೀರವಾಗಿ ಚಿಂತಿಸಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕೆಂದು ಆಶಿಸಿದರು.

ವಿದ್ಯಾರ್ಥಿಗಳನ್ನು ಪರೀಕ್ಷೆಗಳಲ್ಲಿ ಅಂಕಗಳಿಗೆ ಮಾತ್ರ ಸಿದ್ಧಗೊಳಿಸದೆ, ತಾನು ಆಯ್ಕೆ ಮಾಡಿಕೊಂಡಿರುವ ವಿಷಯಗಳ ಬಗ್ಗೆ ಕೌಶಲ್ಯಗಳನ್ನು ಪಡೆಯುವಂತೆ ಮಾಡಬೇಕಿದೆ. ಇದಕ್ಕಾಗಿ ಪ್ರತಿ ವಿಶ್ವವಿದ್ಯಾಲಯಗಳಲ್ಲಿ ಕೌಶಲ್ಯ ತರಬೇತಿ ಕೇಂದ್ರ ಅಗತ್ಯವಿದೆ. ಇದರೊಂದಿಗೆ ಸೈಕಲಾಜಿಕಲ್ ಕೌನ್ಸಲಿಂಗ್ ಸೆಂಟರ್ ಶುರುಮಾಡಬೇಕಿದೆ ಎಂದು ಅವರು ಹೇಳಿದರು.

ಮಾಹಿತಿ ತಂತ್ರಜ್ಞಾನ ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವ ಆಧುನಿಕ ಜಗತ್ತಿನಲ್ಲಿ ಪುರಾತನ ಕಾಲದ ಶಿಕ್ಷಣ ವ್ಯವಸ್ಥೆಯಲ್ಲಿಯೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರಿಂದ ಯಾವುದೆ ಪ್ರಯೋಜನವಿಲ್ಲ. ಹೀಗಾಗಿ ಬದಲಾಗುವ ಜಗತ್ತಿನಲ್ಲಿ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಶಿಕ್ಷಣವನ್ನು ಒದಗಿಸಬೇಕಿದೆ ಎಂದು ಅವರು ಹೇಳಿದರು.

ದಿಶಾ ಮಾರ್ಗದರ್ಶನ ಮಂಡಳಿ ಸದಸ್ಯ ಹಾಗೂ ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಮಾತನಾಡಿ, ವಿಷಯದ ಕಲಿಕೆ ಹಾಗೂ ಗ್ರಹಿಕೆಯಲ್ಲಿ ವಿದ್ಯಾರ್ಥಿಗಳಿಗಿಂತ ಶಿಕ್ಷಕರು ಮುಂದಿರಬೇಕು. ಆಗ ಮಾತ್ರ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಬೋಧನೆ ಮಾಡಲು ಸಾಧ್ಯವೆಂದು ತಿಳಿಸಿದರು.

ಸಮಾಜದ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ. ಶಿಕ್ಷಕರ ನೆರಳಿನಲ್ಲಿ ಬೆಳೆಯುವ ವಿದ್ಯಾರ್ಥಿಗಳ ಸೃಜನಾತ್ಮಕತೆಯನ್ನು ವೃದ್ಧಿಸುವಲ್ಲಿ ಶಿಕ್ಷಕರ ಚಿಂತನೆ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವ ಮೂಲಕ ತಾವು ಕಾರ್ಯನಿರ್ವಹಿಸುವ ಸಂಸ್ಥೆಗೆ ಕೀರ್ತಿ ತರಬೇಕೆಂದು ಅವರು ಆಶಿಸಿದರು.

ಉಪನ್ಯಾಸಕಿ ರೇಖಾ ರಾಮಚಂದ್ರನ್ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಯೋಗಕ್ಕೆ ತುಂಬ ಮಹತ್ವ ಸಿಗುತ್ತಿದೆ. ಯೋಗದ ಕಾರಣದಿಂದಾಗಿಯೆ ಇಂದು ಜಗತ್ತು ಭಾರತದ ಕಡೆಗೆ ಮುಖ ಮಾಡಿದೆ ಎಂದು ತಿಳಿಸಿದರು. ಈ ವೇಳೆ ನ್ಯಾಕ್ ನಿರ್ದೇಶಕ ಎಸ್.ಸಿ.ಶರ್ಮ ಉಪನ್ಯಾಸ ನೀಡಿದರು. ಬೆಂಗಳೂರು ವಿವಿಯ ಮೌಲ್ಯಮಾಪನ ವಿಭಾಗದ ಪ್ರೊ.ಸಿ.ಶಿವರಾಜು ಸೇರಿದಂತೆ ಹಲವು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News