ಬಿಬಿಎಂಪಿ ಮೇಯರ್ ಸ್ಥಾನಕ್ಕಾಗಿ ಶುರುವಾಗಿದೆ ಪೈಪೋಟಿ

Update: 2019-07-03 13:17 GMT

ಬೆಂಗಳೂರು, ಜು.3: ಹಾಲಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಮತ್ತು ಉಪ ಮೇಯರ್ ಬಿ.ಭದ್ರೆಗೌಡ ಅಧಿಕಾರ ಅವಧಿಯು ಪ್ರಸಕ್ತ ವರ್ಷದ ಸೆ.28ಕ್ಕೆ ಮುಗಿದು, 2020ಕ್ಕೆ ಪಾಲಿಕೆಗೆ ಚುನಾವಣೆ ನಡೆಯಲಿದೆ. ಹೀಗಾಗಿ, ಅಂತಿಮ ವರ್ಷದಲ್ಲಿ ಆಡಳಿತದ ಚುಕ್ಕಾಣಿ ಹಿಡಿದು, ಮುಂಬರುವ ಚುನಾವಣೆಗೆ ಸಜ್ಜಾಗಲು ಮೈತ್ರಿಕೂಟದ ಪಕ್ಷಗಳು ಮತ್ತು ಬಿಜೆಪಿ ವಿವಿಧ ಹಂತದ ಪ್ರಯತ್ನಗಳನ್ನು ಆರಂಭಿಸಿವೆ.

ಬಿಬಿಎಂಪಿ ಮೇಯರ್, ಉಪ ಮೇಯರ್ ಚುನಾವಣೆಗೆ ಎರಡೂವರೆ ತಿಂಗಳುಗಳ ಸಮಯವಿದೆ. ಆದರೆ, ಈಗಿನಿಂದಲೇ ಪಾಲಿಕೆಯಲ್ಲಿ ಮೂರು ಪಕ್ಷಗಳಲ್ಲಿ ಸಂಖ್ಯಾಬಲದ ಲೆಕ್ಕಾಚಾರ ಆರಂಭವಾಗಿದೆ. ಹೇಗಾದರೂ ಮಾಡಿ ಈ ಬಾರಿ ಅಧಿಕಾರ ಉಳಿಸಿಕೊಳ್ಳಬೇಕು ಎಂದು ಪ್ರಸ್ತುತವಿರುವ ಮೈತ್ರಿ ಪಕ್ಷಗಳು ಮುಂದಾಗಿದ್ದರೆ, ಅಧಿಕಾರ ಕಸಿದುಕೊಳ್ಳಬೇಕು ಎಂದು ಬಿಜೆಪಿ ಶತಪ್ರಯತ್ನ ಮಾಡುತ್ತಿದೆ.

ಕಾಂಗ್ರೆಸ್, ಜೆಡಿಎಸ್‌ನಲ್ಲಿರುವ ಅತೃಪ್ತ ಸದಸ್ಯರು ಹಾಗೂ ಪಕ್ಷೇತರರನ್ನು ಸೆಳೆದು ಮೇಯರ್-ಉಪ ಮೇಯರ್ ಚುನಾವಣೆಯಲ್ಲಿ ಗೆಲ್ಲಬೇಕೆಂದು ಬಿಜೆಪಿ ತಂತ್ರ ರೂಪಿಸಿದ್ದರೆ, ಮೈತ್ರಿ ಪಕ್ಷಗಳು ಸದಸ್ಯರ ಬಲ ಹೆಚ್ಚಿಸಿಕೊಳ್ಳಲು ಬೇರೆ ಜಿಲ್ಲೆಗಳ ವಿಧಾನಪರಿಷತ್ ಸದಸ್ಯರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಹೇಳಿಬರುತ್ತಿವೆ.

ಬಂಡಾಯ ಸದಸ್ಯರು ಕೈಕೊಡುತ್ತಾರಾ?: ಪಾಲಿಕೆಯಲ್ಲಿ ಬಿಜೆಪಿಯು 126 ಸದಸ್ಯರನ್ನು ಹೊಂದಿದ್ದು, ಅಧಿಕಾರಕ್ಕೇರಲು 133 ಸದಸ್ಯರ ಬೆಂಬಲ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಜೆಡಿಎಸ್‌ನಲ್ಲಿ ಬಂಡಾಯವೆದ್ದಿರುವವರು ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಇವರು ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದರೆ ಅವರ ಸಂಖ್ಯೆ 129 ಕ್ಕೆ ಹೆಚ್ಚಳವಾಗಲಿದೆ. ಆದರೆ, ಮೈತ್ರಿ ಪಕ್ಷಗಳ ಸದಸ್ಯರ ಸಂಖ್ಯೆ 134 ಇದ್ದು, ಹೊಸದಾಗಿ ಆಯ್ಕೆಗೊಂಡಿರುವ ವಿಧಾನಪರಿಷತ್ ಸದಸ್ಯರ ಹೆಸರು ಮತದಾರರ ಪಟ್ಟಿಗೆ ಸೇರ್ಪಡೆಯಾದರೆ ಅವರ ಸಂಖ್ಯೆ 137ಕ್ಕೇರಲಿದೆ.

ಈ ಬಾರಿ ಮೇಯರ್ ಸ್ಥಾನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯರ ಶಿಷ್ಯ ಶಂಕರಮಠ ವಾರ್ಡ್ ಸದಸ್ಯ ಎಂ.ಶಿವರಾಜ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇನ್ನು ರೋಷನ್‌ಬೇಗ್ ಆಪ್ತರಾದ ಎಂ.ಕೆ.ಗುಣಶೇಖರ್ ಮೇಯರ್ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ, ಪಕ್ಷವು ರೋಷನ್‌ಬೇಗ್‌ರನ್ನು ಅಮಾನತು ಮಾಡಿದ್ದು, ಗುಣಶೇಖರ್‌ಗೆ ಸ್ಥಾನ ಸಿಗುವುದು ಕಷ್ಟ. ಬಿಬಿಎಂಪಿಯಲ್ಲಿ ಈ ಇಬ್ಬರೂ ಮೂರು ಬಾರಿಗೆ ಆಯ್ಕೆಯಾಗಿದ್ದಾರೆ. ಬಲಿಜಿಗ ಸಮುದಾಯದಿಂದ ಸತ್ಯನಾರಾಯಣ ಮೇಯರ್ ಆಕಾಂಕ್ಷಿಯಾಗಿದ್ದರೂ, ಹಿಂದೆಯೇ ಪದ್ಮಾವತಿಗೆ ಮೇಯರ್ ಸ್ಥಾನ ನೀಡಿದ್ದರಿಂದ ಸತ್ಯನಾರಾಯಣಗೆ ಸಿಗುವುದು ಕಷ್ಟ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News