ಮಕ್ಕಳನ್ನು ಹಿರಿಯರಿಂದ ರಕ್ಷಿಸೋಣ

Update: 2019-07-04 07:27 GMT

ಒಬ್ಬ ವ್ಯಕ್ತಿ ಭವಿಷ್ಯದಲ್ಲಿ ಏನಾಗುತ್ತಾನೆ ಎನ್ನುವುದನ್ನು ಆತನ ಬಾಲ್ಯ ನಿರ್ಧರಿಸುತ್ತದೆ. ಬಾಲ್ಯದಲ್ಲಿ ಮಕ್ಕಳ ಮೇಲೆ ಎಸಗಿದ ದೌರ್ಜನ್ಯಗಳು ಅಲ್ಲಿಗೇ ಮುಗಿದು ಹೋಗುವುದಿಲ್ಲ. ಆ ಮಗು ಬೆಳೆದಂತೆ ಅದು ಹಿಂಬಾಲಿಸುತ್ತಾ ಇರುತ್ತದೆ. ಆದುದರಿಂದಲೇ ಮಕ್ಕಳ ಬಾಲ್ಯವನ್ನು ಕಾಪಾಡಿದರೆ, ಒಂದು ಒಳ್ಳೆಯ ಸಮಾಜಕ್ಕೆ ಅದುವೇ ಪೀಠಿಕೆಯಾಗುತ್ತದೆ. ಮಕ್ಕಳನ್ನು ಆರೋಗ್ಯಕರ ವಾತಾವರಣದಲ್ಲಿ ಬೆಳೆಸುವುದು ಹಿರಿಯರ ಕರ್ತವ್ಯ ಎಂದು ನಾವು ಈವರೆಗೆ ನಂಬಿಕೊಂಡು ಬಂದಿದ್ದೇವೆ. ಆದರೆ ಸದ್ಯದ ದಿನಗಳಲ್ಲಿ ನಡೆಯುತ್ತಿರುವ ಬರ್ಬರ ಪ್ರಕರಣಗಳನ್ನು ಗಮನಿಸಿದರೆ, ಮಕ್ಕಳನ್ನೇ ಹಿರಿಯರಿಂದ ಕಾಪಾಡಬೇಕಾಗಿದೆ ಎಂಬ ಸ್ಥಿತಿಗೆ ನಾವು ತಲುಪಿದ್ದೇವೆ. ಒಂದು ಕಾಲದಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ಮಾನಸಿಕ ದೌರ್ಜನ್ಯಗಳು ಹೆಚ್ಚು ಸುದ್ದಿಯಾಗುತ್ತಿದ್ದವು. ಆದರೆ ಇಂದು ಮಕ್ಕಳ ಮೇಲೆ ನೇರವಾಗಿ ದೈಹಿಕ ದೌರ್ಜನ್ಯಗಳನ್ನು ಹಿರಿಯರೆನಿಸಿಕೊಂಡವರೇ ಎಸಗುತ್ತಿದ್ದಾರೆ. ಕಥುವಾದಲ್ಲಿ ಧರ್ಮದ ನೆಪದಲ್ಲಿ ಆಸೀಫಾ ಎನ್ನುವ ಮಗುವಿನ ಮೇಲೆ ನಾಗರಿಕರು ಎಂದು ಕರೆಸಿಕೊಂಡ ಜನರು ಎಸಗಿದ ಬರ್ಬರ ದೌರ್ಜನ್ಯ ಈ ದೇಶ ಎತ್ತ ಸಾಗುತ್ತಿದೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ.

ನ್ಯಾಯಾಲಯದಲ್ಲೂ ಈ ಬಾಲಕಿಗೆ ನ್ಯಾಯ ದೊರಕಲಿಲ್ಲ. ಅದರ ಅರ್ಥ ನ್ಯಾಯ ವ್ಯವಸ್ಥೆಯೂ ಮಕ್ಕಳ ಮೇಲಿನ ದೌರ್ಜನ್ಯಗಳಿಗೆ ಪರೋಕ್ಷ ಕುಮ್ಮಕ್ಕು ನೀಡುತ್ತಿದೆ. ಇಂದು ಮಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯಗಳು ನಡೆದರೂ ಅಲ್ಲೂ ಸಂತ್ರಸ್ತರು ಮತ್ತು ಆರೋಪಿಗಳ ಧರ್ಮ, ಜಾತಿಗಳು ಹೆಚ್ಚು ಚರ್ಚೆಗೆ ಒಳಗಾಗುತ್ತವೆ. ಇತ್ತೀಚೆಗೆ ಅಲಿಗಡದಲ್ಲಿ ನಡೆದ ಎರಡು ವರ್ಷದ ಹೆಣ್ಣು ಮಗುವಿನ ಭೀಕರ ಹತ್ಯೆ ಚರ್ಚೆಗೊಳಗಾದುದು ಕೊಲೆಗೈದವರ ಧರ್ಮವೇ ಹೊರತು, ಮಗುವಿನ ಸಾವಲ್ಲ. ವಾಸ್ತವವೆಂದರೆ, ಇದು ಒಂದು ಪ್ರತ್ಯೇಕ ಘಟನೆಯೇನೂ ಅಲ್ಲ. ಈ ಹತ್ಯೆಯ ಬಗ್ಗೆ ವರದಿಯಾದಂದಿನಿಂದ ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶದಾದ್ಯಂತ ಈ ರೀತಿಯ ಕನಿಷ್ಠ ಏಳು ಘಟನೆಗಳು ವರದಿಯಾಗಿವೆ. ದೇಶಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಹಿಂಸಾಚಾರಕ್ಕೆ ಬಲಿಯಾಗುತ್ತಿದ್ದಾರೆ. ಆದರೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ, 2012 (ಪೊಕ್ಸೊ) ಅಡಿಯಲ್ಲಿ ಬೆರಳೆಣಿಕೆಯ ಪ್ರಕರಣಗಳಷ್ಟೇ ದಾಖಲಾಗುತ್ತವೆ. ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಪ್ರತಿ ಹದಿನೈದು ನಿಮಿಷಕ್ಕೆ ಒಂದು ಮಗು ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಿದೆ. ಇತ್ತೀಚಿನ ಅಧ್ಯಯನದ ವೇಳೆ ತಿಳಿದುಬಂದ ಅಂಶವೆಂದರೆ ಮಕ್ಕಳ ಅತ್ಯಾಚಾರಕ್ಕೆ ಶಿಕ್ಷೆಯಾಗಿರುವ ಪ್ರಮಾಣ ಶೇ.28.2 ಆಗಿದ್ದರೆ ಶೇ. 89.6 ಪ್ರಕರಣಗಳು ಇನ್ನೂ ವಿಚಾರಣೆಗೆ ಬಾಕಿಯುಳಿದಿವೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಒಡಿಶಾದಂತಹ ರಾಜ್ಯಗಳಲ್ಲಿ ಶಿಕ್ಷೆಯಾಗಿರುವ ಪ್ರಮಾಣ ಕ್ರಮವಾಗಿ ಶೇ.10.2 ಮತ್ತು ಶೇ.6 ಆಗಿದೆ. ಅಲಿಗಡ ಪ್ರಕರಣದಲ್ಲೂ ತನ್ನದೇ ಮಗಳ ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿರುವ ವ್ಯಕ್ತಿ ಸದ್ಯ ಜಾಮೀನಿನ ಮೇಲೆ ಬಿಡುಗಡೆಗೊಂಡು ಹೊರಬಂದಿದ್ದಾನೆ.

ಆತನನ್ನು ಸಮರ್ಥವಾಗಿ ವಿಚಾರಣೆ ನಡೆಸಿದ್ದರೆ ಕನಿಷ್ಠ ಓರ್ವನಾದರೂ ಮಕ್ಕಳ ಅತ್ಯಾಚಾರಿ ಕಂಬಿಗಳ ಹಿಂದಿರುತ್ತಿದ್ದ. ಕಳೆದ ವರ್ಷ ಕೇಂದ್ರ ಸರಕಾರ, 12 ವರ್ಷದ ಕೆಳಗಿನ ಬಾಲಕಿಯರ ಅತ್ಯಾಚಾರಿಗಳಿಗೆ ಮರಣ ದಂಡನೆ ಶಿಕ್ಷೆಗೆ ಅನುಮತಿ ನೀಡುವ ಸುಗ್ರೀವಾಜ್ಞೆಯನ್ನು ಅಥವಾ ಕಾನೂನನ್ನು ಜಾರಿ ಮಾಡಿತು. ಆದರೆ ಈ ಕಾನೂನು ಎಷ್ಟರಮಟ್ಟಿಗೆ ಪರಿಣಾಮ ಬೀರಿದೆ ಎನ್ನುವುದನ್ನು ಅವಲೋಕಿಸಿದಾಗ ಮಾತ್ರ ನಿರಾಶೆಯೇ ಉತ್ತರವಾಗುತ್ತದೆ. ನಿರ್ಭಯಾ ಪ್ರಕರಣದಲ್ಲಿ ಈ ದೇಶ ಒಂದಾಗಿ ನಿಂತಿತು. ಆದರೆ ಕಥುವಾ ಪ್ರಕರಣದಲ್ಲಿ ದೇಶ ಬಿಡಿ, ನ್ಯಾಯಾಲಯ ಕೂಡ ಪಕ್ಷಪಾತ ನೀತಿಯನ್ನು ಅನುಸರಿಸಿತು. ನಿರ್ಭಯಾಳ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ನ್ಯಾಯಾಲಯ, ಕಥುವಾ ಆರೋಪಿಗಳ ವಿಷಯದಲ್ಲಿ ಮೃದು ನಿಲುವು ತಳೆಯಿತು.

 ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯಾಲಯ ಆರೋಪಿಗಳಿಗೆ ಶಿಕ್ಷೆ ನೀಡುವಲ್ಲಿ ಯಾಕೆ ವಿಫಲವಾಗುತ್ತದೆ ಎನ್ನುವ ಪ್ರಶ್ನೆಗೆ ನಾವು ಉತ್ತರ ಕಂಡು ಕೊಳ್ಳಬೇಕಾಗಿದೆ. ಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಧೀಶರಲ್ಲಿ ಸೂಕ್ಷ್ಮತೆಯಿರಬೇಕು. ಇತರ ಸಂತ್ರಸ್ತರ ಸಾಲಲ್ಲಿ ನಿಲ್ಲಿಸಿ, ಅದೇ ದಾಟಿಯಲ್ಲಿ ಪ್ರಕರಣವನ್ನು ನೋಡುವ ಚಾಳಿಯಿಂದ ಅವರು ಹೊರಬರಬೇಕು. ಸಂತ್ರಸ್ತರು ಮತ್ತು ಅವರ ಕುಟುಂಬ ಯಾವ ರೀತಿಯಲ್ಲೂ ಆತಂಕಕ್ಕೀಡಾಗದಂತೆ ಪ್ರಕರಣದ ವಿಚಾರಣೆ ನಡೆಸಬೇಕು. ಜೊತೆಗೆ ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಯ ದರವನ್ನು ಹೆಚ್ಚಿಸಲು ಪೊಕ್ಸೊ ಕಾಯ್ದೆಯಡಿ ವಿಚಾರಣೆ ನಡೆಸಲು ವಿಶೇಷ ನ್ಯಾಯಾಧೀಶರು, ಪ್ರತ್ಯೇಕ ನ್ಯಾಯಾಲಯಗಳು ಮತ್ತು ಸಾರ್ವಜನಿಕ ನ್ಯಾಯವಾದಿಗಳು, ಬಾಲ ಸಂತ್ರಸ್ತರಿಗೆ ಆರ್ಥಿಕ ನೆರವು ಮತ್ತು ಸಾಕ್ಷಿ ಭದ್ರತೆ ವ್ಯವಸ್ಥೆಯನ್ನು ಜಾರಿ ಮಾಡುವ ಅಗತ್ಯವಿದೆ. ಅಪರಾಧವನ್ನು ತಡೆಯಲು ಅತ್ಯುತ್ತಮ ಕ್ರಮವೆಂದರೆ ಕಾನೂನಿನ ಅನುಷ್ಠಾನ ಮತ್ತು ಶಿಕ್ಷೆಯ ನಿಶ್ಚಿತತೆ. ಶೀಘ್ರ ನ್ಯಾಯದಾನ ಮಕ್ಕಳ ಮೇಲಿನ ದೌರ್ಜನ್ಯಗಳಲ್ಲಿ ಅತ್ಯಗತ್ಯವಾಗಿದೆ.

ಜೊತೆಗೆ ಸದ್ಯ ಬಹುತೇಕ ನಿಷ್ಕ್ರಿಯಗೊಂಡಂತಿರುವ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯನ್ನು ತುರ್ತಾಗಿ ಪುನರ್‌ರೂಪಿಸಿ ಮತ್ತೆ ಚಾಲನೆ ನೀಡುವ ಅಗತ್ಯವಿದೆ. ಈ ಯೋಜನೆಯಡಿಯಲ್ಲಿ ಸಮುದಾಯ ಮಟ್ಟದಲ್ಲಿ ತರಬೇತಿ ಪಡೆದ ಸಿಬ್ಬಂದಿಯನ್ನು ನೇಮಿಸುವ ಜೊತೆಗೆ ರಾಜ್ಯ, ಜಿಲ್ಲೆ ಮತ್ತು ಸಮುದಾಯ ಮಟ್ಟದಲ್ಲಿ ಮಕ್ಕಳ ರಕ್ಷಣಾ ಸಮಿತಿಗಳನ್ನು ರಚಿಸಬೇಕು. ಮಕ್ಕಳ ವಿರುದ್ಧದ ಹಿಂಸಾಚಾರದ ಬಗ್ಗೆ ಹೆತ್ತವರು, ಮಕ್ಕಳು ಮತ್ತು ಸಮುದಾಯಗಳಿಗೂ ಮನವರಿಕೆ ಮಾಡುವ ಅಗತ್ಯವಿದೆ. ಒಂದನೇ ತರಗತಿ ಅಥವಾ ಅಂಗನವಾಡಿಯಿಂದಲೇ ವಯಸ್ಸಿಗೆ ತಕ್ಕುದಾಗಿ ವೈಯಕ್ತಿಕ ಸುರಕ್ಷತೆ ಶಿಕ್ಷಣವನ್ನು ಪಠ್ಯಕ್ರಮದಲ್ಲಿ ಸೇರಿಸಬೇಕಾಗಿದೆ. ಮಕ್ಕಳು ನಮ್ಮ ಜನಸಂಖ್ಯೆಯ ಶೇ.40 ಭಾಗವಾಗಿದ್ದಾರೆ. ಆದರೆ ಕೇಂದ್ರ ಮುಂಗಡಪತ್ರದ ಶೇ.4.52 ಮಾತ್ರ ಅವರಿಗಾಗಿ ಮೀಸಲಿಡಲಾಗಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟಾರೆ ಕೇಂದ್ರ ಬಜೆಟ್‌ನ ಶೇ.0.05 ಮಕ್ಕಳ ರಕ್ಷಣೆಗೆ ಮೀಸಲಾಡಲಾಗಿರುವುದು ಈವರೆಗಿನ ಅತ್ಯಂತ ಕಡಿಮೆ ಪ್ರಮಾಣವಾಗಿದೆ. 2017-18ರ ಸಾಲಿನಲ್ಲಿ ಪೊಕ್ಸೊ ಕಾಯ್ದೆಯಡಿ ನಿಬಂಧನೆಯಲ್ಲಿರುವ ವಿಶೇಷ ನ್ಯಾಯಾಲಯಗಳು ಮತ್ತು ಮಕ್ಕಳಿಗಾಗಿ ಆಶ್ರಯತಾಣಗಳನ್ನು ನಿರ್ಮಿಸಲು ಇಡೀ ದೇಶಕ್ಕೆ 725 ಕೋಟಿ ರೂ. ಮೀಸಲಿಡಲಾಗಿತ್ತು. ರಕ್ಷಣೆ ಮತ್ತು ಆರೈಕೆಯ ಅಗತ್ಯವುಳ್ಳ ಮಕ್ಕಳ ಪ್ರಮಾಣವನ್ನು ಗಮನಿಸಿದರೆ ಈ ಮೊತ್ತ ಬಹಳ ಕನಿಷ್ಠವಾಗಿದೆ. ಪೊಕ್ಸೊ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸರಕಾರ ಗಣನೀಯವಾಗಿ ಹೆಚ್ಚು ಹೂಡಿಕೆ ಮಾಡುವ ಅಗತ್ಯವಿದೆ. ಮಕ್ಕಳಿಗೆ ಭಾರತವನ್ನು ಒಂದು ಸುರಕ್ಷಿತ ತಾಣವಾಗಿ ಮಾಡಲು ಅವರ ರಕ್ಷಣೆಗೆ ತರಬೇತಿ ಪಡೆದ ವೃತ್ತಿಪರ ಸಿಬ್ಬಂದಿಯನ್ನು ನೇಮಿಸುವುದು ಸೇರಿದಂತೆ ಐಸಿಪಿಎಸ್ ಅನ್ನು ಬಲಪಡಿಸುವ ಅಗತ್ಯವಿದೆ. ಮಕ್ಕಳ ಮೇಲೆ ದೌರ್ಜನ್ಯಗಳು ಹೀಗೇ ಮುಂದುವರಿದರೆ, ಭವಿಷ್ಯದಲ್ಲಿ ನೆನಪುಗಳ ಗಾಯಗಳಿಂದ ಛಿದ್ರಗೊಂಡ ಸಮಾಜವೊಂದು ನಮ್ಮ ನಡುವೆ ಬೆಳೆಯುತ್ತಾ ಹೋಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News